ನವದೆಹಲಿ[ಸೆ.29]: ಅರಣ್ಯ ನಾಶವು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುತ್ತಿರುವ ಆತಂಕದ ಬೆನ್ನಲ್ಲೇ, ಭಾರತದ ವಿವಿಧ ರಾಜ್ಯಗಳಲ್ಲಿ 13 ಲಕ್ಷ ಹೆಕ್ಟೇರ್‌ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಸ್ವತಃ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ವಿಸ್ತೀರ್ಣದ ಲೆಕ್ಕದಲ್ಲಿ ಹೇಳುವುದಾದರೆ ಮೂರು ಗೋವಾ ರಾಜ್ಯಗಳನ್ನು ಒಂದು ಗೂಡಿಸಿದರೆ ಎಷ್ಟಾಗುತ್ತದೆಯೋ ಅಷ್ಟುಜಾಗ ಒತ್ತುವರಿಯಾಗಿದೆ. ಹೀಗೆ ಅರಣ್ಯ ಭೂಮಿ ಒತ್ತುವರಿಯಲ್ಲಿ ಮಧ್ಯಪ್ರದೇಶದ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ 7ನೇ ಸ್ಥಾನದಲ್ಲಿದೆ.

ಇತ್ತೀಚೆಗೆ ಉತ್ತರಾಖಂಡದಲ್ಲಿ ಉದ್ಯಮಿಯೊಬ್ಬರ ಪುತ್ರಿ ವಿವಾಹ ಕಾರ್ಯಕ್ರಮಕ್ಕೆ ಅರಣ್ಯ ಭೂಮಿಯನ್ನು ಸರ್ಕಾರ ನೀಡಿತ್ತು. ಈ ವೇಳೆ ಪರಿಸರವಾದಿ ಆಕಾಶ್‌ ವಸಿಷ್ಠ ಎನ್ನುವವರು ದೇಶದ ಯಾವ್ಯಾವ ರಾಜ್ಯಗಳಲ್ಲಿ ಎಷ್ಟೆಷ್ಟುಅರಣ್ಯ ಭೂಮಿ ಒತ್ತುವರಿಯಾಗಿದೆ. ಅವುಗಳ ಜಿಲ್ಲಾವಾರು ವಿವರ, ಅರಣ್ಯದ ಹೆಸರು, 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಎಷ್ಟುಅರಣ್ಯ ಭೂಮಿ ಇತ್ತು, ಈಗ ಎಷ್ಟಿದೆ ಎಂಬೆಲ್ಲಾ ವಿಷಯಗಳ ಮಾಹಿತಿ ಕೇಳಿದ್ದರು. ಆದರೆ ಸ್ವಾತಂತ್ರ್ಯಯ ಸಮಯದ ಅರಣ್ಯಭೂಮಿ ಮಾಹಿತಿ ಇಲ್ಲ ಎಂದಿರುವ ಕೇಂದ್ರ ಪರಿಸರ ಸಚಿವಾಲಯ ಜಿಲ್ಲಾವಾರು ಮಾಹಿತಿಗೆ ಮತ್ತು ಅತಿಕ್ರಮಣವಾದ ಅರಣ್ಯದ ಹೆಸರು ಬಹಿರಂಗಕ್ಕೆ ನಿರಾಕರಿಸಿದೆ. ಆದರೆ ರಾಜ್ಯವಾರು ಪಟ್ಟಿಬಿಡುಗಡೆ ಮಾಡಿದೆ.

ಅದರನ್ವಯ ದೇಶದಲ್ಲಿ ಒಟ್ಟಾರೆ 1281397 ಹೆಕ್ಟೇರ್‌ ಅರಣ್ಯ ಭೂಮಿ ಒತ್ತುವರಿಯಾಗಿದೆ. ಈ ಪಟ್ಟಿಯಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದೆ. ಅಲ್ಲಿ 534717 ಹೆಕ್ಟೇರ್‌ ಅರಣ್ಯ ಭೂಮಿ ಒತ್ತುವರಿಯಾಗಿದೆ. ಇದು ದೇಶದಲ್ಲಿ ಆದ ಒಟ್ಟು ಒತ್ತುವರಿಯಲ್ಲಿ ಶೇ.41ರಷ್ಟು. ಇನ್ನು 7ನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ 28001 ಹೆಕ್ಟೇರ್‌ ಅರಣ್ಯ ಭೂಮಿ ಒತ್ತುವರಿಯಾಗಿದೆ.

ಟಾಪ್‌ 5 ಒತ್ತುವರಿ ಆದ ರಾಜ್ಯಗಳು

ಮಧ್ಯಪ್ರದೇಶ: 534717 ಹೆಕ್ಟೇರ್‌

ಅಸ್ಸಾಂ: 317215 ಹೆಕ್ಟೇರ್‌

ಒಡಿಶಾ: 78505 ಹೆಕ್ಟೇರ್‌

ಮಹಾರಾಷ್ಟ್ರ: 60504

ಅರುಣಾಚಲಪ್ರದೇಶ: 58636

ದಕ್ಷಿಣ ಭಾರತದಲ್ಲಿ ಟಾಪ್‌ ಒತ್ತುವರಿ

ಕರ್ನಾಟಕ: 28001 ಹೆಕ್ಟೇರ್‌

ತಮಿಳುನಾಡು: 15041

ಕೇರಳ: 7801 ಹೆಕ್ಟೇರ್‌

ತೆಲಂಗಾಣ: 3056 ಹೆಕ್ಟೇರ್‌

ಆಂಧ್ರಪ್ರದೇಶ: 1691