-ಎನ್‌.ಎಲ್‌. ಶಿವಮಾದು

ಬೆಂಗಳೂರು[ಮಾ.12]: ಸರ್ಕಾರಿ ಶಾಲೆಗಳು ಇರುವ ಕಡೆ ಖಾಸಗಿ ಶಾಲೆಗಳಲ್ಲಿನ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಸೀಟುಗಳನ್ನು ಸರ್ಕಾರ ರದ್ದುಗೊಳಿಸಿದ್ದು, 2019-20ನೇ ಸಾಲಿನಿಂದ ಈ ನಿಯಮ ಜಾರಿಗೆ ಬರುತ್ತಿದೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಮಾತ್ರ ಬೋಧನೆ ಮಾಡಲಾಗುತ್ತಿದ್ದು, ಪೂರ್ವ ಪ್ರಾಥಮಿಕ ತರಗತಿಗಳಿಗೆ (ಎಲ್‌ಕೆಜಿ/ಯುಕೆಜಿ) ದಾಖಲಿಸಬೇಕಿರುವ ಮಕ್ಕಳ ಪೋಷಕರು ಗೊಂದಲಕ್ಕೆ ಸಿಲುಕಿದ್ದಾರೆ.

2018-19ನೇ ಸಾಲಿನಿಂದ ಸರ್ಕಾರಿ ಶಾಲೆಗಳಲ್ಲೂ ಎಲ್‌ಕೆಜಿ ಅನುಷ್ಠಾನ ಮಾಡುವುದಾಗಿ ಭರವಸೆ ನೀಡಿದ್ದ ರಾಜ್ಯ ಸರ್ಕಾರ, ಎರಡು ವರ್ಷಗಳಾದರೂ ಈ ವರೆಗೆ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವತ್ತ ಗಮನ ಹರಿಸಿಲ್ಲ.

ಪೋಷಕರ ಪ್ರಶ್ನೆ:

ಪ್ರತಿ ವರ್ಷ ಆರ್‌ಟಿಇ ಅಡಿ ಎಲ್‌ಕೆಜಿ ತರಗತಿಗಳಿಗೂ ಆದ್ಯತೆ ನೀಡಲಾಗುತ್ತಿತ್ತು. ಆರ್‌ಟಿಇ ಅಡಿ ಸೀಟು ದೊರೆಯದಿದ್ದರೆ ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ದಾಖಲು ಮಾಡುತ್ತಿದ್ದರು. ಪ್ರಸಕ್ತ ಸಾಲಿನಿಂದ ಸರ್ಕಾರಿ ಶಾಲೆಗಳು ಇರುವ ಕಡೆ ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಸೀಟು ರದ್ದು ಮಾಡಲಾಗಿದೆ. ಇಂತಹ ಪ್ರದೇಶಗಳಲ್ಲಿರುವ ಮಕ್ಕಳು ಏನು ಮಾಡಬೇಕು ಎಂಬುದು ಪೋಷಕರ ಪ್ರಶ್ನೆಯಾಗಿದೆ.

ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಅಂಗನವಾಡಿ ಕೇಂದ್ರಗಳಿವೆ. ಹೀಗಿದ್ದರೂ ಅಂಗನವಾಡಿಗಿಂತ ಪೂರ್ವ ಪ್ರಾಥಮಿಕ ತರಗತಿಗಳಿಗೆ ಬಹುತೇಕ ಪೋಷಕರು ಮಕ್ಕಳನ್ನು ಸೇರಿಸುತ್ತಾರೆ. ಆದರೆ, ಈ ವರ್ಷ ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸದಿರುವುದರಿಂದ ಪರೋಕ್ಷವಾಗಿ ಖಾಸಗಿಯತ್ತ ವಾಲಬೇಕಿದೆ. ನಗರ ಪ್ರದೇಶಗಳಲ್ಲಿರುವ ಭಾಗಶಃ ಪೋಷಕರು ಉದ್ಯೋಗಕ್ಕೆ ಹೋಗುವುದರಿಂದ ಎರಡು ವರ್ಷಗಳ ಕಾಲ ಮಕ್ಕಳನ್ನು ಮನೆಗಳಲ್ಲಿಯೇ ಉಳಿಸಿಕೊಳ್ಳುವುದು ಸಹ ಕಷ್ಟದ ಕೆಲಸವಾಗಿದೆ. ಈ ಕಾರಣದಿಂದಲೂ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವ ಸಾಧ್ಯತೆಗಳಿವೆ.

ಎಲ್‌ಕೆಜಿ ಆರಂಭಿಸದ ಸರ್ಕಾರ:

ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಎಸ್‌.ಜಿ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ 21 ಅಂಶಗಳನ್ನು ಒಳಗೊಂಡ ವರದಿಯನ್ನು 2017ರಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ಇದರಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸುವುದು ಕೂಡ ಪ್ರಮುಖ ಅಂಶಗಳಲ್ಲಿ ಒಂದಾಗಿತ್ತು. 2018-19ನೇ ಸಾಲಿನಿಂದ ಅನುಷ್ಠಾನ ಮಾಡುವುದಾಗಿ ಭರವಸೆ ನೀಡಿದ್ದ ರಾಜ್ಯ ಸರ್ಕಾರ, ಎರಡು ವರ್ಷಗಳಾದರೂ ಈ ವರೆಗೆ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವತ್ತ ಗಮನ ಹರಿಸಿಲ್ಲ.

ಸರ್ಕಾರಿ ಪೂರ್ವ ಪ್ರಾಥಮಿಕ ಶಾಲೆಗಳು ಇಲ್ಲದಿರುವುದರಿಂದಲೇ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಸಿತವಾಗುತ್ತಿದೆ. ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಿದರೆ, ಆ ಮಕ್ಕಳು ಒಂದನೇ ತರಗತಿಗೂ ಸರ್ಕಾರಿ ಶಾಲೆಗಳಲ್ಲಿಯೇ ಮುಂದುವರಿಯುತ್ತಾರೆ ಎಂದು ವರದಿ ಉಲ್ಲೇಖಿಸಿತ್ತು. ವರದಿ ಪ್ರಕಾರ 2018-19ನೇ ಸಾಲಿನಿಂದ ಪ್ರಾರಂಭಿಕ ಹಂತದಲ್ಲಿ 101 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸುವುದಾಗಿ ಹೇಳಿದ್ದ ಶಿಕ್ಷಣ ಇಲಾಖೆ, ಇದೀಗ ಅತ್ತ ಗಮನ ಹರಿಸಿಲ್ಲ.

ಶೇ.50ಕ್ಕಿಂತ ಹೆಚ್ಚಿನ ಮಕ್ಕಳು ಎಲ್‌ಕೆಜಿ:

ರಾಜ್ಯ ಸರ್ಕಾರವು ಆರ್‌ಟಿಇ ಮೂಲಕ ಪ್ರತಿ ವರ್ಷ ನೀಡುತ್ತಿರುವ ಶೇ.50ಕ್ಕಿಂತ ಹೆಚ್ಚಿನ ಸೀಟುಗಳು ಪೂರ್ವ ಪ್ರಾಥಮಿಕ (ಎಲ್‌ಕೆಜಿ) ತರಗತಿಗೆ ದಾಖಲಾಗುತ್ತಿದ್ದಾರೆ. ಪ್ರತಿ ವರ್ಷ ಆರ್‌ಟಿಇ ಮೂಲಕ ಕನಿಷ್ಠ ಒಂದು ಲಕ್ಷದಿಂದ 1.20 ಲಕ್ಷ ವರೆಗೆ ಸೀಟುಗಳನ್ನು ನೀಡುತ್ತಿತ್ತು. ಈ ಪೈಕಿ ಶೇ.50 ಅಂದರೆ, ಕನಿಷ್ಠ 50 ಸಾವಿರ ಮಕ್ಕಳು ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆಯುತ್ತಿದ್ದರು. ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಮಾತ್ರ ಬೋಧನೆ ಮಾಡುತ್ತಿರುವುದು ಕೂಡ ದಾಖಲಾತಿ ಕುಸಿತಕ್ಕೆ ಕಾರಣವಾಗಲಿದೆ.