ಬೆಂಗಳೂರು (ಮಾ. 03): ಸಾರ್ವಜನಿಕ ಶಿಕ್ಷಣ ಇಲಾಖೆಯು 2019-20ನೇ ಸಾಲಿಗೆ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ ಅರ್ಜಿ ಸಲ್ಲಿಸಲು ವೇಳಾಪಟ್ಟಿಬಿಡುಗಡೆ ಮಾಡಿದೆ. ಸರ್ಕಾರಿ ಶಾಲೆಗಳು ಇರದ ಕಡೆ ಅನುದಾನ ಮತ್ತು ಅನುದಾನರಹಿತ ಶಾಲೆಗಳಲ್ಲಿ ಶೇ.25ರಷ್ಟುಸೀಟು ಪಡೆಯಬಹುದು. ಮಾ.20ರಿಂದ ಏ.15 ರ ವರೆಗೆ ಪೋಷಕರು ಅರ್ಜಿ ಸಲ್ಲಿಸಬಹುದು.

ಈ ಕುರಿತು ಸಾರ್ವಜನಿಕ ಶಿಕ್ಷಣ ಶನಿವಾರ ಅಧಿಸೂಚನೆ ಹೊರಡಿಸಿದೆ. ಈಗಾಗಲೇ ಮಾರ್ಗಸೂಚಿ ಪ್ರಕಟಿಸಲಾಗಿದ್ದು, ಮೇ 1ರಂದು ಆನ್‌ಲೈನ್‌ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ಮಾಡಲಿದ್ದು, ಎರಡನೇ ಸುತ್ತಿನ ಸೀಟು ಹಂಚಿಕೆ ಮೇ 25ರಂದು ನಡೆಯಲಿದೆ ಎಂದು ಶಿಕ್ಷಣ ಇಲಾಖೆ ಆಯುಕ್ತ ಪಿ.ಸಿ. ಜಾಫರ್‌ ತಿಳಿಸಿದ್ದಾರೆ.

ಮೊದಲ ಆದ್ಯತೆ ಯಾರಿಗೆ:

2015ರ ಏ.1ರ ನಂತರ ಬರಗಾಲದ ಕಾರಣ ಆತ್ಯಹತ್ಯೆ ಮಾಡಿಕೊಂಡ ರೈತರ ಮಕ್ಕಳು, ವಿಶೇಷ ಪ್ರವರ್ಗಕ್ಕೆ ಸೇರಿಗೆ ಅನಾಥ ಮಗು, ಎಚ್‌ಐವಿ ಬಾಧಿತ/ಸೋಂಕಿತ ಮಗು, ಮಂಗಳಮುಖಿ ಮಗು, ವಿಶೇಷ ಅಗತ್ಯತೆಯುಳ್ಳ ಮಗು, ವಲಸೆ ಮತ್ತು ಬೀದಿ ಮಗು ಈ ವರ್ಗಕ್ಕೆ ಸೇರಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಅವಶ್ಯವಿರುವ ದಾಖಲೆಗಳು:

ಅರ್ಜಿ ಸಲ್ಲಿಸಲು ಪೋಷಕರ ಆಧಾರ್‌ ಕಾರ್ಡ್‌, ಜಾತಿ ಮತ್ತು ಆದಾಯ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಬಳಿಕ ದಾಖಲೆಗಳಲ್ಲಿ ದೋಷಗಳಲ್ಲಿ ಸರಿಪಡಿಸುವಂತೆ ಪೋಷಕರ ಮೊಬೈಲ್‌ ಸಂಖ್ಯೆಗೆ ಮೆಸೇಜ್‌ ಕಳುಹಿಸಲಾಗುತ್ತದೆ.

ಅರ್ಜಿ ಸಲ್ಲಿಕೆ ಸ್ಥಳ:

ಬೆಂಗಳೂರು ಒನ್‌, ಕರ್ನಾಟಕ ಒನ್‌, ಅಟಲ್‌ಜೀ ಜನಸ್ನೇಹಿ ಕೇಂದ್ರಗಳ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಶಾಲೆಗಳ ವ್ಯಾಪ್ತಿ:

ಗ್ರಾಮೀಣ ಪ್ರದೇಶಗಳಲ್ಲಿ ಕಂದಾಯ ಗ್ರಾಮದ ಭೌಗೋಳಿಕ ಗಡಿ, ನಗರಸಭೆ ಮತ್ತು ಪಟ್ಟಣ ಪಂಚಾಯತಿ ಹಾಗೂ ಮಹಾನಗರ ಪಾಲಿಕೆಗಳಲ್ಲಿ ಆಯಾ ವಾರ್ಡಿನ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಬಹುದು.

ಹೀಗಿದೆ ವೇಳಾಪಟ್ಟಿ

ಮಾ.5    ಆರ್‌ಟಿಇ ಪ್ರವೇಶ ಪ್ರಕ್ರಿಯೆ ಮಾರ್ಗಸೂಚಿ ತಂತ್ರಾಂಶದ ಡೆಮೋ ಪರಿಶೀಲನೆ

ಮಾ.6    ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ತಾತ್ಕಾಲಿಕ ಪಟ್ಟಿಪ್ರಕಟ

ಮಾ.8    ಪರಿಷ್ಕೃತ ತಂತ್ರಾಂಶ ಡೆಮೋ ಪ್ರಕಟ

ಮಾ.12    ನೆರೆಹೊರೆ ಶಾಲೆಗಳ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಕೊನೆಯ ಅವಕಾಶ

ಮಾ.15    ನೆರೆಹೊರೆ ಶಾಲೆಗಳ ಅಂತಿಮ ಪಟ್ಟಿಮತ್ತು ಶಾಲೆಗಳಲ್ಲಿ ಲಭ್ಯವಿರುವ ಸೀಟುಗಳ ಪ್ರಕಟ

ಮಾ.18, 19    ಪ್ರಾಯೋಗಿಕ ಅರ್ಜಿ ಸಲ್ಲಿಕೆ

ಮಾ.20 ರಿಂದ ಏ.15 ರ ವರೆಗೆ ಅರ್ಜಿ ಸಲ್ಲಿಕೆ ಅವಧಿ

ಏ.20 ರ ವರೆಗೆ ಅರ್ಜಿಗಳ ನೈಜತೆ ಪರಿಶೀಲನೆ

ಏ.25    ಲಾಟರಿ ಪ್ರಕ್ರಿಯೆ ಮೂಲಕ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿಪ್ರಕಟ

ಮೇ 1    ಆನ್‌ಲೈನ್‌ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ

ಮೇ 8    ಮೊದಲ ಸುತ್ತಿನ ಮಕ್ಕಳ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ಗೆ ಕೊನೇ ದಿನ

ಮೇ 25    ಎರಡನೇ ಸುತ್ತಿನ ಸೀಟು ಹಂಚಿಕೆ.

ಮೇ 30    ಶಾಲೆಗಳಲ್ಲಿ ದಾಖಲಾತಿ ಪಡೆಯಲು ಅವಕಾಶ

ಮೇ 31    ಎರಡನೇ ಸುತ್ತಿನ ವಿವರಗಳನ್ನು ಅಪ್‌ಲೋಡ್‌ ಮಾಡಲು ಕೊನೇ ದಿನ