ಬೆಂಗಳೂರು (ಮಾ. 06): ಕರ್ನಾಟಕದಲ್ಲಿ ಕೇಂದ್ರ ಸಚಿವ ಅನಂತ ಕುಮಾರ್‌ ಹೆಗಡೆ ಮತ್ತು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಕಟುವಾಗಿ ಹಿಂದುತ್ವದ ಬಗ್ಗೆ ಮಾತನಾಡುವವರು. ಆದರೆ ಕುತೂಹಲ ಎಂದರೆ ಇವರಿಬ್ಬರೂ ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಂದವರೇ ಆದರೂ, ಈಗ ಇವರಿಗೆ ಸ್ಥಳೀಯವಾಗಿ ಆರ್‌ಎಸ್‌ಎಸ್‌ ವಿರೋಧವೇ ಜಾಸ್ತಿ ಇದ್ದಂತಿದೆ.

'ಚೂರು ಉಸಿರುಗಟ್ಟಿಸಿದ್ರೆ ಸಿದ್ದರಾಮಯ್ಯ ವಿಶ್ರಾಂತಿ ಪಡಿಬೇಕಿತ್ತು'

ಅನಂತ್‌ ಕುಮಾರ್‌ ಹೆಗಡೆ ಮತ್ತು ಯತ್ನಾಳ್‌ ಜೊತೆಗೆ ಆರ್‌ಎಸ್‌ಎಸ್‌ ಸಂಬಂಧ ಪೂರ್ತಿ ಹರಿದೇ ಹೋಗಿದೆ. ಆದರೆ, ಇಬ್ಬರ ಜನಪ್ರಿಯತೆ ಕಾರಣದಿಂದ ಆರ್‌ಎಸ್‌ಎಸ್‌ಗೆ ಏನೂ ಮಾಡಲು ಆಗಿಲ್ಲ. 2014ರಲ್ಲಿ ಅನಂತ ಹೆಗಡೆಯವರಿಗೆ ಟಿಕೆಟ್‌ ತಪ್ಪಿಸಿ, ಚಕ್ರವರ್ತಿ ಸೂಲಿಬೆಲೆಗೆ ಟಿಕೆಟ್‌ ಕೊಡಲು ಪ್ರಯತ್ನ ನಡೆಸಿದ್ದರೂ ಚಕ್ರವರ್ತಿ ಒಪ್ಪಲಿಲ್ಲ.

ಕಳೆದ ತಿಂಗಳು ಹುಬ್ಬಳ್ಳಿಯ ಮೋದಿ ಕಾರ್ಯಕ್ರಮಕ್ಕೆ ಸ್ವಲ್ಪ ಹಣ ಸಂಗ್ರಹಿಸಿ ಕೊಡಿ ಎಂದು ಬಿಜೆಪಿ ನಾಯಕರು ಕೇಳಿದರೆ ಅನಂತ ಹೆಗಡೆ, ‘ಅಯ್ಯೋ ಹೋಗ್ರಿ ನನ್ನ ಬಳಿ ದುಡ್ಡು ಇಲ್ಲ. ಬೇಕಿದ್ದರೆ ನನಗೆ ಟಿಕೆಟ್‌ ತಪ್ಪಿಸಿ ಬೇರೆಯವರಿಗೆ ಕೊಡಿ ನೋಡೋಣ’ ಎಂದರಂತೆ. ಒಟ್ಟಿನಲ್ಲಿ ಹಿಂದುತ್ವವಾದಿಗಳು ವರ್ಸಸ್‌ ಆರ್‌ಎಸ್‌ಎಸ್‌! ರಾಜಕೀಯದಲ್ಲಿ ಇದು ವಿಚಿತ್ರವಾದರೂ ಸತ್ಯ.

62 ವರ್ಷಗಳಿಂದ ಎಲೆಕ್ಷನ್ ನಿಲ್ಲೋದೆ ಕಾಯಕ: ಪ್ರಜೆಗಳ ಪ್ರಭುವಾಗದ ಶ್ಯಾಂ ಬಾಬು!

ಬಸನಗೌಡರನ್ನು ಕಂಟ್ರೋಲ್ ಮಾಡಿ

ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ತನಗೆ ತೀವ್ರ ತೊಂದರೆ ಕೊಡುತ್ತಿದ್ದು, ದಿಲ್ಲಿ ನಾಯಕರು ಹಿಂದೆ ಮಾತು ಕೊಟ್ಟಂತೆ ಅವರನ್ನು ಕಂಟ್ರೋಲ್ ಮಾಡಬೇಕೆಂದು ಕೇಂದ್ರ ಸಚಿವ ರಮೇಶ್‌ ಜಿಗಜಿಣಗಿ, ಪಿಯೂಷ್‌ ಗೋಯಲ್ ಮತ್ತು ಮುರಳೀಧರ ರಾವ್‌ ಅವರಿಗೆ ಕೇಳುತ್ತಿದ್ದಾರೆ.

ಬಸನಗೌಡರನ್ನು ಕಂಟ್ರೋಲ್ ಮಾಡದೇ ಇದ್ದರೆ, ವಿಜಯಪುರ ಗೆಲ್ಲೋದು ಕಷ್ಟಎಂದು ಸ್ಥಳೀಯ ಆರ್‌ಎಸ್‌ಎಸ್‌ ಕೂಡ ಜಿಗಜಿಣಗಿ ಮತ್ತು ಕಾರಜೋಳರಿಗೆ ಬೆಂಬಲ ನೀಡುತ್ತಿದೆ. ಆದರೆ ಕಳೆದ ತಿಂಗಳು ನೇಮಕವಾಗಿರುವ ತನ್ನ ಕಟು ವಿರೋಧಿ ಚಂದ್ರಶೇಖರ ಕವಟಗಿಯನ್ನು ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ತೆಗೆಯಿರಿ ನಾನು ಸುಮ್ಮನಾಗುತ್ತೇನೆ ಎಂದು ಯತ್ನಾಳ್‌ ಮಧ್ಯಸ್ಥಿಕೆ ವಹಿಸಲು ಹೋದವರಿಗೆ ಹೇಳಿ ಕಳುಹಿಸಿದ್ದಾರೆ ಎಂಬ ಸುದ್ದಿಗಳಿವೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ