ನವದೆಹಲಿ: ಹಿಂದುಳಿದ ಜಾತಿ ಹಾಗೂ ಪಂಗಡಗಳಿಗೆ ಮೀಸಲಾತಿ ಒದಗಿಸುವ ವಿಚಾರದಲ್ಲಿ ಮೋದಿ ಸರ್ಕಾರದ ಮೇಲೆ ಆರೆಸ್ಸೆಸ್ ಧೋರಣೆಯ ಪ್ರಭಾವ ಇಲ್ಲ ಎಂದು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.

ಸರ್ಕಾರವು ಮೀಸಲಾತಿ ವ್ಯವಸ್ಥೆಯಿಂದ ದೂರ ಸರಿಯುವುದನ್ನೂ ಯೋಚಿಸಲಾಗದು, ಎಂದು ಹಿಂದೂಸ್ತಾನ್ ಟೈಮ್ಸ್’ಗೆ ನೀಡಿರುವ ಸಂದರ್ಶನದಲ್ಲಿ ಪಾಸ್ವಾನ್ ಹೇಳಿದ್ದಾರೆ.

ಮೀಸಲಾತಿ ಬಗ್ಗೆ ಆರೆಸ್ಸೆಸ್ ಧೋರಣೆ ಬಗ್ಗೆ ಪ್ರತಿಕ್ರಿಯಿಸಿದ ಪಾಸ್ವಾನ್, ಹೊರಗಡೆ ಮೀಸಲಾತಿ ಬಗ್ಗೆ ಯಾರ್ಯಾರು ಏನೇನು ಹೇಳುತ್ತಾರೆ ಎಂಬುವುದು ಸರ್ಕಾರಕ್ಕೆ ಸಂಬಂಧಪಟ್ಟುದುದಲ್ಲ. ಮೀಸಲಾತಿ ಬಗ್ಗೆ ಮರು ಚಿಂತನೆ ಇಲ್ಲ, ಎಂದು ಪಾಸ್ವಾನ್ ಹೇಳಿದ್ದಾರೆ.

ಎಲ್ಲಾ ಹಿಂದುಳಿದ ವರ್ಗಗಳಿಗೆ ಸರಿಯಾದ ಪ್ರಾತಿನಿಧ್ಯ ದೊರಕಿಸುವ ನಿಟ್ಟಿನಲ್ಲಿ ಒಳ-ವರ್ಗೀಕರಣದ ಬಗ್ಗೆ ಅಧ್ಯಯನ ನಡೆಸಲು ಆಯೋಗವನ್ನು ರಚಿಸಲು ಕೇಂದ್ರ ಸಚಿವ ಸಂಪುಟವು ಬುಧವಾರ ನಿರ್ಧರಿಸಿದೆ.

ಹಿಂದುಳಿದ ವರ್ಗಗಳ ಕೆನೆಪದರದ ಆದಾಯ ಮಾನದಂಡವನ್ನು ಕೂಡಾ ರೂ. 6 ಲಕ್ಷದಿಂದ ರೂ. 8 ಲಕ್ಷಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿತ್ತು.

ಬಿಜೆಪಿಯ ಸೈದ್ಧಾಂತಿಕ ಮಾತೃಸಂಸ್ಥೆಯಾಗಿರುವ ಆರೆಸ್ಸೆಸ್ ದೇಶದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಕೊನೆಗೊಳಿಸಬೇಕೆಂದು ಆಗ್ರಹಿಸುತ್ತಲೇ ಬಂದಿದೆ.

ಮೋದಿ ಸರ್ಕಾರವು ಮೀಸಲಾತಿ ನೀತಿಯನ್ನು ಮರುಪರಿಶೀಲಿಸಬೇಕೆಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕಳೆದ ವರ್ಷ ಕರೆನೀಡಿದ್ದರು.