- ಮೋದಿ ಸರ್ಕಾರದ ಹಿಂದಿನ ಸಾಧನೆ, ಮುಂದಿನ ತಯಾರಿಯ ಪರಾಮರ್ಶೆ- 17ರಿಂದ 21ರವರೆಗೆ ಪುಣೆಯಲ್ಲಿ ಭಾಗವತ್‌ ನೇತೃತ್ವದಲ್ಲಿ ಸಭೆ: ಮೂಲಗಳು
ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್)ದ ಹಿರಿಯ ಮುಖಂಡರು ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಂತ್ರಗಾರಿಕೆ ರೂಪಿಸಲು ಐದು ದಿನಗಳ ಮಹತ್ವದ ಸಭೆ ನಡೆಸಲಿದ್ದಾರೆ. ಏ.17ರಿಂದ 21ರವರೆಗೆ ಮಹಾರಾಷ್ಟ್ರದ ಪುಣೆಯಲ್ಲಿ ಈ ಸಭೆ ನಡೆಯಲಿದೆ.
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಇಲ್ಲಿಯವರೆಗಿನ ಸಾಧನೆ-ವೈಫಲ್ಯಗಳು ಹಾಗೂ ಮುಂದಿನ ಚುನಾವಣೆಗೆ ಮಾಡಿಕೊಳ್ಳುತ್ತಿರುವ ತಯಾರಿ ಕುರಿತು ಈ ಬೈಠಕ್ನಲ್ಲಿ ವಿಚಾರ ವಿಮರ್ಶೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢದಂತಹ ಬಿಜೆಪಿ ಆಳ್ವಿಕೆಯ ರಾಜ್ಯಗಳು ವಿಧಾನಸಭೆ ಚುನಾವಣೆಗೆ ಹೋಗುತ್ತಿರುವ ಈ ಸಮಯದಲ್ಲಿ ಬಿಜೆಪಿ ವಿರುದ್ಧ ಅಲ್ಲಿ ಕಾಣಿಸುತ್ತಿರುವ ಆಡಳಿತ ವಿರೋಧಿ ಅಲೆಯ ಬಗ್ಗೆ ಆರ್ಎಸ್ಎಸ್ನ ತಳಮಟ್ಟದ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ ಭಾಗವತ್ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಈ ಸಭೆಗೆ ಬಿಜೆಪಿ ಹೈಕಮಾಂಡ್ಗೆ ಆಹ್ವಾನವಿದೆಯೇ ಎಂಬುದು ತಿಳಿದುಬಂದಿಲ್ಲ. ಆರ್ಥಿಕತೆಗೆ ಸಂಬಂಧಿಸಿದ ವಿಚಾರಗಳಲ್ಲಿ ಜನರ ಅಸಮಾಧಾನ, ಉದ್ಯೋಗ ಕಡಿತ, ಇತ್ತೀಚಿನ ಬ್ಯಾಂಕಿಂಗ್ ಹಗರಣಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ಹಾಗೆಯೇ, ಬಿಜೆಪಿ ವಿರುದ್ಧ ಸಂಘಟಿತರಾಗುತ್ತಿರುವ ಪ್ರಾದೇಶಿಕ ಪಕ್ಷಗಳ ಒಕ್ಕೂಟ ರಾಜಕಾರಣದ ಬಗ್ಗೆಯೂ ಚರ್ಚೆ ನಡೆಯಲಿದೆ ಎನ್ನಲಾಗಿದೆ.
ದೇಶದ 21 ರಾಜ್ಯಗಳಲ್ಲಿ ತಾನು ಅಧಿಕಾರದಲ್ಲಿರುವುದಾಗಿ ಬಿಜೆಪಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರೂ ಇತ್ತೀಚೆಗೆ ಕೆಲ ರಾಜ್ಯಗಳಲ್ಲಿ ನಡೆದ ಲೋಕಸಭೆ ಹಾಗೂ ವಿಧಾನಸಭೆ ಉಪ ಚುನಾವಣೆಗಳಲ್ಲಿ ಪಕ್ಷ ಸೋತಿದೆ. ಹೀಗಾಗಿ ಮುಂದಿನ ಲೋಕಸಭೆ ಚುನಾವಣೆಗೆ ಬಿಜೆಪಿ ಅತಿಯಾದ ಆತ್ಮವಿಶ್ವಾಸದಿಂದ ಹೋಗುವುದು ದುಬಾರಿಯಾದೀತು ಎಂಬ ಭಾವನೆ ಆರ್ಎಸ್ಎಸ್ನಲ್ಲಿದೆ ಎಂದು ಹೇಳಲಾಗಿದೆ.
