ಪಣಜಿ: ಸಾರ್ವಜನಿಕವಾಗಿ ರಾಜ್ಯ ಬಿಜೆಪಿ ಸರ್ಕಾರ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರಿಗೆ ಕಪ್ಪು ಬಾವುಟ ಪ್ರದರ್ಶಿಸಿದ್ದ ಆರ್‌ಎಸ್‌ಎಸ್ ಗೋವಾ ಮುಖ್ಯಸ್ಥ ಸುಭಾಷ್ ವೆಲಿಂಗ್ಕರ್ ಅವರನ್ನು ವಜಾ ಮಾಡಲಾಗಿದೆ. ‘‘ವೆಲಿಂಗ್ಕರ್ ಅವರನ್ನು ಎಲ್ಲ ಜವಾಬ್ದಾರಿಗಳಿಂದ ಮುಕ್ತಗೊಳಿಸಲಾಗಿದೆ. ಸಂಘದ ಕಾರ್ಯಕರ್ತರಾಗಿದ್ದುಕೊಂಡು ಈ ರೀತಿಯ ಚಟುವಟಿಕೆಗಳಲ್ಲಿ ಭಾಗಿಯಾಗುವಂತಿಲ್ಲ. ಅವರಿಗೆ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗುವ ಹಂಬಲವಿರಬಹುದು,’’ ಎಂದು ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಮನಮೋಹನ್ ವೈದ್ಯ ಹೇಳಿದ್ದಾರೆ.

ಸ್ಥಳೀಯ ಭಾಷೆಗಳನ್ನು ಶಾಲಾ ಸೂಚನಾ ಮಾಧ್ಯಮವಾಗಿ ಮಾಡುತ್ತೇವೆಂದು ನೀಡಿದ್ದ ವಾಗ್ದಾನ ಬಿಜೆಪಿ ಪೂರೈಸದೆ ನಂಬಿಕೆದ್ರೋಹವೆಸಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಜಯ ಸಾಧಿಸುವುದಿಲ್ಲ ಎಂದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಲಕ್ಷ್ಮಿ ಪರ್ಸೇಕರ್, ‘‘ವೆಲಿಂಗ್ಕರ್ ಅವರನ್ನು ವಜಾಗೊಳಿಸಿರುವುದು ಆರ್‌ಎಸ್‌ಎಸ್ ಆಂತರಿಕ ಅಂಶವಾಗಿದ್ದು, ಅದಕ್ಕೂ ಬಿಜೆಪಿಗೂ ಸಂಬಂಧವಿಲ್ಲ,’’ ಎಂದಿದ್ದಾರೆ.

ಪಿಟಿಐ ವರದಿ