ತನ್ನ ಗೆಳೆಯರ ಜತೆ ಜಗಳ ಮಾಡಿಕೊಂಡು ಓಡಿ ಹೋಗುತ್ತಿದ್ದ ಅಪರಿಚಿತನನ್ನು ಸರಗಳ್ಳನೆಂದು ಶಂಕಿಸಿ ಸಾರ್ವಜನಿಕರು ಥಳಿಸಿದಾಗ ಸಿಕ್ಕಿದ್ದು ಬರೋಬ್ಬರೀ 1 ಕೋಟಿ ರೂಪಾಯಿ ಮೊತ್ತದ ನೋಟು! ಇದು ಭಾನುವಾರ ಸಂಜೆ ಗಾಯತ್ರಿನಗರದಲ್ಲಿ ನಿಷೇಧಿತ ನೋಟು ಬದಲಾವಣೆ ಯತ್ನಿಸಿ ಸೆರೆಯಾದವನ ಅಸಲಿ ಕತೆ.
ಬೆಂಗಳೂರು: ತನ್ನ ಗೆಳೆಯರ ಜತೆ ಜಗಳ ಮಾಡಿಕೊಂಡು ಓಡಿ ಹೋಗುತ್ತಿದ್ದ ಅಪರಿಚಿತನನ್ನು ಸರಗಳ್ಳನೆಂದು ಶಂಕಿಸಿ ಸಾರ್ವಜನಿಕರು ಥಳಿಸಿದಾಗ ಸಿಕ್ಕಿದ್ದು ಬರೋಬ್ಬರೀ 1 ಕೋಟಿ ರೂಪಾಯಿ ಮೊತ್ತದ ನೋಟು!
ಇದು ಭಾನುವಾರ ಸಂಜೆ ಗಾಯತ್ರಿನಗರದಲ್ಲಿ ನಿಷೇಧಿತ ನೋಟು ಬದಲಾವಣೆ ಯತ್ನಿಸಿ ಸೆರೆಯಾದವನ ಅಸಲಿ ಕತೆ.
ದೊಡ್ಡ ಬಾಣಸವಾಡಿ ನಿವಾಸಿ ಪ್ರಭಾಕರನ್ ದಾಸ್’ನನ್ನು ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರರು ಬಂಧಿಸಿದ್ದು, ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ದಾಸ್ ಗೆಳೆಯರಾದ ಅಲ್ತಾಫ್, ರಿಜ್ವಾನ್, ಸುನೀಲ್ ಹಾಗೂ ಉಲ್ಲಾಸ್ ಪತ್ತೆಗೆ ತನಿಖೆ ಮುಂದುವರೆದಿದೆ.
ಆರೋಪಿಯಿಂದ 500 ಮತ್ತು 100 ರೂ. ಮುಖಬೆಲೆಯ ಒಂದು ಕೋಟಿ ರೂ. ಮೌಲ್ಯದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಗಾಯತ್ರಿನಗರ ಬಳಿ ಬಾನುವಾರ ಸಂಜೆ 6.45ರ ಹೊತ್ತಿಗೆ ಉಲ್ಲಾಸ್ ಜತೆ ಹಣ ಬದಲಾವಣೆಗೆ ದಾಸ್ ಬಂದಿದ್ದು, ಆಗ ಅವರಲ್ಲಿ ಹಣದ ವಿಚಾರವಾಗಿ ಜಗಳವಾಗಿದೆ. ಬಳಿಕ ಕೋಪಗೊಂಡ ದಾಸ್, ಅಲ್ಲಿಂದ ಹಣ ಸಮೇತ ಪರಾರಿಯಾಗಲು ಯತ್ನಿಸಿದ್ದ. ರಸ್ತೆಯಲ್ಲಿ ಗಡ್ಡಧಾರಿಯೊಬ್ಬ ಸೂಟ್’ಕೇಸ್ ಹಿಡಿದು ಓಡುತ್ತಿದ್ದವನನ್ನು ಕಂಡು ಸ್ಥಳೀಯರು, ಆತನು ಸರಗಳ್ಳನಿರಬಹುದೆಂದು ಅನುಮಾನಿಸಿ ಬೆನ್ನಟ್ಟಿ ಹಿಡಿದಿದ್ದಾರೆ. ಅಷ್ಟರಲ್ಲಿ ಮಹಿಳೆಯೊಬ್ಬರು ಆ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಆನಂತರ ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ತೆರಳಿದ ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬ್ಲಾಕ್ & ವೈಟ್ ದಂಧೆ ಬೆಳಕಿಗೆ ಬಂದಿದೆ ಎಂದು ಅಧೀಕಾರಿಗಳು ಮಾಹಿತಿ ನೀಡಿದ್ದಾರೆ.
ರೆಸಿಡೆನ್ಸಿ ರಸ್ತೆ ಸಮೀಪದ ಖಾಸಗಿ ಕಂಪನಿಯಲ್ಲಿ ಪ್ರಭಾಕರನ್ ದಾಸ್ ಕೆಲಸ ಮಾಡುತ್ತಿದ್ದ. ಮೂರು ತಿಂಗಳ ಹಿಂದೆ ಅಲ್ಲಿ ಕೆಲಸ ತೊರೆದಿರುವ ಆತ ಹಣ ಬದಲಾವಣೆ ದಂಧೆಯಲ್ಲಿ ತೊಡಗಿದ್ದ ಸಂಗತಿ ಬೆಳಕಿಗೆ ಬಂದಿದೆ.
ಈಗ ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನ ಬಳಿಕ ದಂಧೆಯ ಸಂಪೂರ್ಣ ವಿವರ ಸಿಗಲಿದೆ. ಅಲ್ಲದೇ ಇತರೇ ಆರೊಪಿಗಳ ಬಗ್ಗೆ ದಾಸ್ ಖಚಿತ ಮಾಹಿತಿ ನೀಡುತ್ತಿಲ್ಲ. ಅವನು ನೀಡಿರುವ ಮೊಬೈಲ್ ಸಂಖ್ಯೆಗಳು ಕೂಡಾ ಕಾರ್ಯಸ್ಥಗಿತಗೊಂಡಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
(ಸಾಂದರ್ಭಿಕ ಚಿತ್ರ)
