ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸಾಕಷ್ಟು ಮಾಹಿತಿಯು ಕುಣಿಗಲ್ ಗಿರಿ ಹಾಗೂ ಆತನ ಸಹಚರರಿಗೆ ಗೊತ್ತಿರಬಹುದೆಂಬ ಶಂಕೆ ಪೊಲೀಸರಿಗಿದೆ. ಗೌರಿ ಹತ್ಯೆಯಾದ ಸೆ. 5ರಂದು ಕುಣಿಗಲ್ ಗಿರಿ ಗ್ಯಾಂಗ್'ನ ಐದಾರು ಹುಡುಗರು ಆಕೆಯ ಮನೆಯ ಸುತ್ತಮುತ್ತ ಸುತ್ತಾಡುತ್ತಿದ್ದುದು ಮೊಬೈಲ್ ನೆಟ್ವರ್ಕ್ ಸಿಗ್ನಲ್'ಗಳ ಮಾಹಿತಿಯಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಎಸ್'ಐಟಿ ಅಧಿಕಾರಿಗಳು ಕುಣಿಗಲ್ ಗಿರಿಯನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆನ್ನಲಾಗಿದೆ.

ಬೆಂಗಳೂರು(ಸೆ. 15): ಗೌರಿ ಲಂಕೇಶ್ ಹತ್ಯೆ ಪ್ರಕರಣದ ಗೋಜಲನನ್ನು ಬಿಡಿಸಲು ವಿಶೇಷ ತನಿಖಾ ತಂಡವು ಹರಸಾಹಸ ಮಾಡುತ್ತಿದೆ. ಆದರೆ, 10 ದಿನಗಳಾದರೂ ಹೆಚ್ಚೇನೂ ಸುಳಿವು ಸಿಕ್ಕಿಲ್ಲ. ಈ ಮಧ್ಯೆ ಕೆಲ ರೌಡಿ ಶೀಟರ್ಸ್, ರಿಯಲ್ ಎಸ್ಟೇಟ್ ಉದ್ಯಮಿಗಳ ಹೆಸರು ಪ್ರಕರಣದಲ್ಲಿ ತಳುಕುಹಾಕಿಕೊಂಡಿದೆ. ಎಸ್'ಐಟಿ ಅಧಿಕಾರಿಗಳು ಎಲ್ಲರನ್ನೂ ವಿಚಾರಣೆ ನಡೆಸುತ್ತಿದ್ದಾರೆ. ಈ ರೀತಿ ಎಸ್'ಐಟಿ ವಿಚಾರಣೆಯ ಪಟ್ಟಿಯಲ್ಲಿರುವವರ ಪೈಕಿ ಕುಣಿಗಲ್ ಗಿರಿ ಕೂಡ ಒಬ್ಬ. ರೌಡಿ ಶೀಟರ್ ಆಗಿರುವ ಕುಣಿಗಲ್ ಗಿರಿ ಈ ಬಗ್ಗೆ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದು, ತನಗೂ ಹಾಗೂ ಗೌರಿ ಕೊಲೆ ಪ್ರಕರಣಕ್ಕೂ ಸಂಬಂಧವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾನೆ.

ತಾನು ನಿನ್ನೆಯಷ್ಟೇ ಕಾರಾಗೃಹದಿಂದ ಹೊರಬಂದಿದ್ದೇನೆ. ತನ್ನ ಹೆಸರು ಈ ಕೇಸ್'ನಲ್ಲಿ ಹೇಗೆ ತಗುಲಿಹಾಕಿಕೊಂಡಿದೆ ಎಂಬುದು ಗೊತ್ತಿಲ್ಲ. ನನ್ನ ಕಡೆಯವರಾರೂ ಇದರಲ್ಲಿ ಭಾಗಿಯಾಗಿಲ್ಲ ಎಂದು ರೌಡಿಶೀಟರ್ ಕುಣಿಗಲ್ ಗಿರಿ ಹೇಳಿದ್ದಾನೆ.

ಎಸ್'ಐಟಿಯವರು ಹಾಜರಾಗುವಂತೆ ತನಗೆ ಸಮನ್ಸ್ ಕೊಟ್ಟಿಲ್ಲ. ಪ್ರಕರಣದಲ್ಲಿ ನನ್ನ ಹೆಸರು ಕೇಳಿಬಂದಿದ್ದರಿಂದ ನಾನೇ ಸ್ವಯಂಪ್ರೇರಿತವಾಗಿ ಎಸ್'ಐಟಿ ಮುಂದೆ ಹಾಜರಾಗಿದ್ದೇನೆ ಎಂದು ಆತ ತಿಳಿಸಿದ್ದಾನೆ.

ಕೆಲ ಮಾಧ್ಯಮಗಳಲ್ಲಿ ಬಂದ ವರದಿ ಪ್ರಕಾರ, ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸಾಕಷ್ಟು ಮಾಹಿತಿಯು ಕುಣಿಗಲ್ ಗಿರಿ ಹಾಗೂ ಆತನ ಸಹಚರರಿಗೆ ಗೊತ್ತಿರಬಹುದೆಂಬ ಶಂಕೆ ಪೊಲೀಸರಿಗಿದೆ. ಗೌರಿ ಹತ್ಯೆಯಾದ ಸೆ. 5ರಂದು ಕುಣಿಗಲ್ ಗಿರಿ ಗ್ಯಾಂಗ್'ನ ಐದಾರು ಹುಡುಗರು ಆಕೆಯ ಮನೆಯ ಸುತ್ತಮುತ್ತ ಸುತ್ತಾಡುತ್ತಿದ್ದುದು ಮೊಬೈಲ್ ನೆಟ್ವರ್ಕ್ ಸಿಗ್ನಲ್'ಗಳ ಮಾಹಿತಿಯಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಎಸ್'ಐಟಿ ಅಧಿಕಾರಿಗಳು ಕುಣಿಗಲ್ ಗಿರಿಯನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆನ್ನಲಾಗಿದೆ. ಇಂದು ಕುಣಿಗಲ್ ಗಿರಿ ತನ್ನ ತಂದೆ-ತಾಯಿ ಜೊತೆ ಎಸ್'ಐಟಿ ಅಧಿಕಾರಿಗಳ ಮುಂದೆ ಹಾಜರಾದನಾದರೂ ತನಿಖಾಧಿಕಾರಿಗಳು ಇರದೇ ಇದ್ದರಿಂದ ವಾಪಸ್ ಹೋದನೆನ್ನಲಾಗಿದೆ.

ಹಫ್ತಾ ವಸೂಲಿ, ದರೋಡೆ, ಕೊಲೆ ಯತ್ನ ಮೊದಲಾದ ಹಲವಾರು ಪ್ರಕರಣಗಳಲ್ಲಿ ಕುಣಿಗಲ್ ಗಿರಿ ಹೆಸರಿದೆ. ಈತನ ಹುಡುಗರು ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ಗನ್ ಹಿಡಿದು ಬೆದರಿಸಿ ದರೋಡೆ, ಹಫ್ತಾ ಇತ್ಯಾದಿ ಕೃತ್ಯಗಳಲ್ಲಿ ಭಾಗಿಯಾಗಿರುವ ಅರೋಪವಿದೆ. ಅಲ್ಲದೇ, ಹಲವು ಸುಪಾರಿ ಹತ್ಯೆ ಪ್ರಕರಣಗಳಲ್ಲೂ ಕುಣಿಗಲ್ ಗಿರಿ ಹೆಸರು ತಳುಕುಹಾಕಿಕೊಂಡಿವೆ. 2014ರಲ್ಲಿ ಆಂಧ್ರದ ಅನಂತಪುರದಲ್ಲಿ ಕುಣಿಗಲ್ ಗಿರಿಯನ್ನು ಬಂಧಿಸಲಾಗಿತ್ತು. ಆ ನಂತರ ರಾಮನಗರದ ಕಾರಾಗೃಹದಲ್ಲಿ ಗಿರಿಯನ್ನಿಡಲಾಗಿತ್ತು. ನಿನ್ನೆಯಷ್ಟೇ ಆತ ಜಾಮೀನಿನ ಮೇಲೆ ಹೊರಬಂದಿದ್ದಾನೆ,