ನಟೋರಿಯಸ್ ರೌಡಿ ಶೀಟರ್‌ಗೂ ಸ್ಯಾಂಡಲ್ ವುಡ್‌ಗೂ ನಂಟು

Rowdy-Sheeter Cycle Ravi Connection With Sandalwood Stars
Highlights

ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ರೌಡಿಶೀಟರ್ ನಟೋರಿಯಸ್ ವ್ಯಕ್ತಿಗೂ ಕನ್ನಡ ಚಿತ್ರರಂಗಕ್ಕೂ ಕೂಡ ನಂಟು ಇರುವುದು ಇದೀಗ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. 

ಬೆಂಗಳೂರು: ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ರೌಡಿಶೀಟರ್ ನಟೋರಿಯಸ್ ಸೈಕಲ್ ರವಿಗೆ ಕನ್ನಡ ಚಿತ್ರರಂಗದ ನಿರ್ಮಾಪಕರು, ನಿರ್ದೇಶಕರು ಹಾಗೂ ಹಲವು ರಾಜಕಾರಣಿಗಳೊಂದಿಗೆ ಸಂಬಂಧವಿತ್ತು ಎಂದು ತಿಳಿದು ಬಂದಿದೆ. ಭೂ ವ್ಯವಹಾರದಲ್ಲಿ ತೊಡಗಿದ್ದ ಆರೋಪಿ ಸೈಕಲ್ ರವಿ ಹಲವು ರಾಜಕಾರಣಿಗಳು ಮತ್ತು ನಿರ್ಮಾಪಕರೊಂದಿಗೆ ನಂಟು ಹೊಂದಿದ್ದ ಎನ್ನಲಾಗಿದೆ.

ಆತನೊಂದಿಗೆ ನಂಟು ಹೊಂದಿರುವ ರಾಜಕಾರಣಿಗಳು ಮತ್ತು ನಿರ್ಮಾಪಕರ ಬಗ್ಗೆ ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಕಳೆದ ಆರು ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಆರೋಪಿ ಬೆದರಿಸಿ ಭೂ ವ್ಯವಹಾರ ನಡೆಸುತ್ತಿದ್ದ. ಭೂ ವ್ಯವಹಾರದ ವಿಚಾರವಾಗಿ ಹಲವು ಮಂದಿಯ ಜತೆ ಸಂಬಂಧ ಹೊಂದಿದ್ದ. ಇತ್ತೀಚೆಗೆ ಚಿತ್ರರಂಗದ ನಟರೊಬ್ಬರು ಹಲವು ಬಾರಿ ಆರೋಪಿಗೆ ಕರೆ ಮಾಡಿದ್ದರು ಎನ್ನಲಾಗಿದೆ. ಈತನ ಬಳಿ ಜಪ್ತಿ ಮಾಡಲಾಗಿರುವ 11 ಕ್ಕೂ ಹೆಚ್ಚು ಮೊಬೈಲ್‌ಗಳ ಕರೆ ವಿವರಗಳನ್ನು ಕಲೆ ಹಾಕಿದಾಗ ಇತರರೊಂದಿಗೆ ಹೊಂದಿರುವ ಸಂಬಂಧ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ. ಬೆಂಗಳೂರು ದಕ್ಷಿಣ ಭಾಗದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸಿ ಅಕ್ರಮವಾಗಿ ಕೋಟ್ಯಂತರ ರುಪಾಯಿ ಗಳಿಸಿದ್ದ. 

ಭೂ ವ್ಯಾಜ್ಯಗಳ ಬಗ್ಗೆ ಮಾತುಕತೆ ನಡೆಸಲು ಮತ್ತು ವ್ಯಾಪಾರ ಕುದುರಿಸಲು 11 ಕ್ಕೂ ಅಧಿಕ ಮೊಬೈಲ್ ಫೋನ್ ಬಳಸುತ್ತಿದ್ದ. ನಗರದಲ್ಲಿ ಕೊಲೆ, ಕೊಲೆ ಯತ್ನ, ಹಲ್ಲೆ ಸೇರಿದಂತೆ 30ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಸೈಕಲ್ ರವಿಯನ್ನು ಸಿಸಿಬಿ ಪೊಲೀಸರು ಕಳೆದ ಜೂ.27 ರಂದು ಕೆಂಗೇರಿಯ ನೈಸ್ ರಸ್ತೆ ಬಳಿ ಗುಂಡು ಹಾರಿಸಿ ಬಂಧಿಸಿದ್ದರು. ಈ ವೇಳೆ ಫಾರ್ಚೂನರ್ ಕಾರು ಹಾಗೂ 25 ಕೋಟಿ ಮೌಲ್ಯದ ಆಸ್ತಿಪತ್ರ ವಶಪಡಿಸಿಕೊಂಡಿದ್ದರು. ಸದ್ಯ ರವಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈ ನಡುವೆ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಈತನ ವ್ಯವಹಾರದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

loader