ನವದೆಹಲಿ: 2014ರ ಲೋಕಸಭಾ ಚುನಾವಣೆ ವೇಳೆ ನರೇಂದ್ರ ಮೋದಿ ಪರ, ಬಳಿಕ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್‌ ಕುಮಾರ್‌ ಪರ ವಿಶಿಷ್ಟರೀತಿಯಲ್ಲಿ ಚುನಾವಣಾ ರಣತಂತ್ರ ರೂಪಿಸಿ ಗೆಲುವಿನ ರೂವಾರಿ ಎನ್ನಿಸಿಕೊಂಡಿದ್ದ ರಾಬಿನ್‌ ಶರ್ಮಾ, ಇದೀಗ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಬಣ ಸೇರಿಕೊಂಡಿದ್ದಾರೆ.

ಹಾಲಿ ಜೆಡಿಯು ಉಪಾಧ್ಯಕ್ಷರಾಗಿರುವ ಪ್ರಶಾಂತ್‌ ಕಿಶೋರ್‌ ಜೊತೆಗೂಡಿ ರಾಬಿನ್‌ ಶರ್ಮಾ, ಸಿಟಿಜನ್ಸ್‌ ಫಾರ್‌ ಅಕೌಂಟಬಲ್‌ ಗವರ್ನನೆನ್ಸ್‌ ಎಂಬ ಸಂಸ್ಥೆ ಸ್ಥಾಪಿಸಿದ್ದರು. ಈ ಸಂಸ್ಥೆಯೇ ಮೋದಿ ಮತ್ತು ನಿತೀಶ್‌ ಪರ ಪ್ರಚಾರ ತಂತ್ರ ರೂಪಿಸಿತ್ತು. ಬಳಿಕ ಪ್ರಶಾಂತ್‌ ಜೆಡಿಯು ಸೇರಿದರು.

ಈ ಹಿನ್ನೆಲೆಯಲ್ಲಿ ರಾಬಿನ್‌ ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಪ್ರಿಯಾಂಕಾ ಅವರ ಚುನಾವಣಾ ರಣತಂತ್ರ ರೂಪಿಸುವ ಹೊಣೆ ಹೊತ್ತುಕೊಂಡಿದ್ದಾರೆ ಎನ್ನಲಾಗಿದೆ.