ನವದೆಹಲಿ[ಸೆ.27]: ಕಾಂಗ್ರೆಸ್ಸಿನ ಘಟಾನುಘಟಿ ನಾಯಕರಾದ ಪಿ. ಚಿದಂಬರಂ ಹಾಗೂ ಡಿ.ಕೆ. ಶಿವಕುಮಾರ್‌ ಅವರು ವಿವಿಧ ಆರೋಪಗಳಡಿ ಸಿಬಿಐ, ಜಾರಿ ನಿರ್ದೇಶನಾಲಯ (ಇ.ಡಿ.)ದಿಂದ ಬಂಧನಕ್ಕೆ ಒಳಗಾಗಿ, ತಿಹಾರ್‌ ಜೈಲು ಸೇರಿರುವಾಗಲೇ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯನಿಗೂ ಕೂಡ ಬಂಧನ ಭೀತಿ ಎದುರಾಗಿದೆ. ಲಂಡನ್‌ನಲ್ಲಿ 17 ಕೋಟಿ ರು. ವೆಚ್ಚದಲ್ಲಿ ಬಂಗಲೆ ಖರೀದಿಸಿದ ಆರೋಪ ಸಂಬಂಧ ವಿಚಾರಣೆಗೆ ಉದ್ಯಮಿ ರಾಬರ್ಟ್‌ ವಾದ್ರಾ ಸಹಕರಿಸುತ್ತಿಲ್ಲ. ಹೀಗಾಗಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಾಗಿದೆ ಎಂದು ದೆಹಲಿ ಹೈಕೋರ್ಟ್‌ನಲ್ಲಿ ಗುರುವಾರ ಇ.ಡಿ. ವಕೀಲರು ಮನವಿ ಮಾಡಿದ್ದಾರೆ.

ಲಂಡನ್‌ನ 12, ಬ್ರಯಾನ್‌ಸ್ಟನ್‌ ಸ್ಕೆ$್ವೕರ್‌ನಲ್ಲಿ 17 ಕೋಟಿ ರು. ವೆಚ್ಚದಲ್ಲಿ ಬಂಗಲೆ ಖರೀದಿ ಕುರಿತ ತನಿಖೆ ವೇಳೆ ಹಣ ವರ್ಗಾವಣೆ ಕೊಂಡಿ ವಾದ್ರಾ ಅವರ ಜತೆಗೇ ನೇರ ಥಳುಕು ಹಾಕಿಕೊಂಡಿದೆ. ಹೀಗಾಗಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಾಗಿದೆ ಎಂದು ಇ.ಡಿ. ವಕೀಲರು ನ್ಯಾ| ಚಂದ್ರಶೇಖರ್‌ ಮುಂದೆ ಬಿನ್ನವಿಸಿಕೊಂಡರು.

ಈ ವೇಳೆ ಇದಕ್ಕೆ ಆಕ್ಷೇಪ ಎತ್ತಿದ ವಾದ್ರಾ ಪರ ವಕೀಲರು, ತನಿಖಾ ಸಂಸ್ಥೆ ಕರೆದಾಗಲೆಲ್ಲಾ ತಮ್ಮ ಕಕ್ಷಿದಾರರು ವಿಚಾರಣೆಗೆ ಹಾಜರಾಗಿ ಸಹಕರಿಸಿದ್ದಾರೆ. ಕೇಳಿರುವ ಪ್ರಶ್ನೆಗಳಿಗೆಲ್ಲಾ ಉತ್ತರ ನೀಡಿದ್ದಾರೆ. ಆರೋಪಗಳನ್ನು ಒಪ್ಪಿಕೊಂಡಿಲ್ಲ ಎಂಬ ಕಾರಣಕ್ಕೆ ಅವರು ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂದು ಹೇಳುವುದು ಸರಿಯಲ್ಲ ಎಂದು ವಾದಿಸಿದರು.

ಇದನ್ನು ಆಲಿಸಿದ ನ್ಯಾಯಾಲಯ, ಅಂತಿಮ ಹಂತದ ವಾದ ಮಂಡನೆಯನ್ನು ನ.5ಕ್ಕೆ ಮುಂದೂಡಿದೆ. ಇ.ಡಿ. ಪ್ರಕರಣ ಸಂಬಂಧ ವಿಚಾರಣಾ ನ್ಯಾಯಾಲಯದಲ್ಲಿ ವಾದ್ರಾ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ. ಅದನ್ನು ರದ್ದುಗೊಳಿಸಬೇಕು ಎಂದು ಇ.ಡಿ. ದೆಹಲಿ ಹೈಕೋರ್ಟ್‌ ಮೊರೆ ಹೋಗಿದೆ. ಆದರೆ ಪ್ರಕರಣದ ವಿಚಾರಣೆ ನ.5ಕ್ಕೆ ಮುಂದೂಡಿಕೆಯಾಗಿರುವುದರಿಂದ ವಾದ್ರಾ ಅಲ್ಲಿವರೆಗೂ ನಿರಾಳರಾಗುವಂತಾಗಿದೆ.