ನಗರದಲ್ಲಿ ಮಹದೇವಪುರ ಭಾಗವನ್ನು ಹೊರತುಪಡಿಸಿದರೆ ಬನ್ನೇರುಘಟ್ಟರಸ್ತೆಯಲ್ಲಿ ಹಲವು ಕಂಪನಿಗಳಿವೆ. 3758 ಐಟಿ ಕಂಪನಿಗಳು, 90ಕ್ಕೂ ಹೆಚ್ಚು ಬಿಟಿ ಕಂಪನಿಗಳು 1200ಕ್ಕಿಂತ ಬಿಪಿಓ ಸಂಸ್ಥೆಗಳಿವೆ. ಹೆಚ್ಚು ಉದ್ಯಮಗಳು ಸ್ಥಾಪನೆಯಾಗುತ್ತಿ​ರುವ ಕಾರಣ ಆ ಪ್ರದೇಶದಲ್ಲಿನ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಹೀಗಾಗಿ ಹಲವು ಅಪಾರ್ಟ್‌ಮೆಂಟ್‌ಗಳು ನಿರ್ಮಾಣವಾಗಿ ಮಾರಾಟವಾಗುತ್ತಿವೆ. ಅದರಲ್ಲಿ ರಾಬರ್ಟ್‌ ವಾದ್ರಾ ಅವರ ಪಾಲುದಾರಿ​ಕೆಯ ಡಿಎಲ್‌ಎಫ್‌ ಸಂಸ್ಥೆಯೂ ಒಂದಾಗಿದೆ.

ಬೆಂಗಳೂರು: ಸೋನಿಯಾ ಗಾಂಧಿ ಅಳಿಯ ರಾಬರ್ಟ್‌ ವಾದ್ರಾ ಅವರು ತಮ್ಮ ಪಾಲುದಾರಿಕೆಯ ಡಿಎಲ್‌ಎಫ್‌ ಸಂಸ್ಥೆಯ ಮೂಲಕ ಬೆಂಗ ಳೂರಿನ ಹೊರವಲಯದ ಬೇಗೂರು ಗ್ರಾಮದಲ್ಲಿ ರು.850 ಕೋಟಿ ಮೌಲ್ಯದ ಬೆಲೆಬಾಳುವ ಸರ್ಕಾರಿ ಭೂಮಿ ಕಬಳಿಸಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ವಕ್ತಾರ ಎನ್‌.ಆರ್‌.ರಮೇಶ್‌, ಈ ಸಂಬಂಧ ಭೂಕಬಳಿಕೆ ನಿಗ್ರಹ ವಿಶೇಷ ನ್ಯಾಯಾಲಯ ಮತ್ತು ಎಸಿಎಂಎಂ ನ್ಯಾಯಾಲ ಯಕ್ಕೆ ದೂರು ನೀಡಿದ್ದಾರೆ. 

ಎ ಖರಾಬು, ಬಿ ಖರಾಬು, ಮೀಸಲು ಅರಣ್ಯ ಪ್ರದೇಶ, ಗೋಮಾಳ, ಸ್ಮಶಾನ ಮತ್ತು ಗುಂಡು ತೋಪು ಪ್ರದೇಶಗಳನ್ನೊಂಡ ಸರ್ಕಾರಿ ಸ್ವತ್ತುಗಳನ್ನು ಕಬಳಿಸಲಾಗಿದೆ. ಈ ಹಗರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ವಹಿಸಬೇಕು ಹಾಗೂ ಸಿಬಿಐ ಅಥವಾ ಸಿಐಡಿಗೆ ತನಿಖೆ ನಡೆಸುವಂತೆ ಆದೇಶಿಸಬೇಕು ಎಂದು ಎನ್‌.ಆರ್‌.ರಮೇಶ್‌ ಆಗ್ರಹಿಸಿದರು. 

ಶನಿವಾರ ಹಗರಣದ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಅವರು, 2350 ಪುಟಗಳ ದಾಖಲೆಗಳನ್ನು ಬಿಡುಗಡೆ ಮಾಡಿದರು. ರಾಬರ್ಟ್‌ ವಾದ್ರಾ ಪಾಲುದಾರಿಕೆಯ ಕಂಪನಿಗೆ ಅನುಕೂಲವಾಗಲು ಸರ್ಕಾರಿ ಸ್ವತ್ತುಗಳನ್ನು ಗುರುತಿಸದೆ ಬೃಹತ್‌ ಯೋಜನೆಗೆ ಬಿಡಿಎ ಅಧಿಕಾರಿಗಳು ‘ಯೋಜನಾ ನಕ್ಷೆ' ಮಂಜೂರು ಮಾಡಿದ್ದಾರೆ. ನೆಲಗಳ್ಳರ ಹೆಸರಿಗೆ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಬೆಂಗಳೂರು ದಕ್ಷಿಣ ತಾಲೂಕು ತಹಶೀಲ್ದಾರ್‌ ಕಚೇರಿ ಅಧಿಕಾರಿಗಳು ಮ್ಯೂಟೇಷನ್‌ ಮಾಡಿಕೊಟ್ಟಿದ್ದಾರೆ. ನೂರಾರು ಮಂದಿ ವ್ಯವಸಾಯಗಾರರ ಹೆಸರುಗಳಲ್ಲಿ ಇದ್ದಂತಹ ಸ್ವತ್ತುಗಳಿಗೆ ಬಿಬಿಎಂಪಿ ಭ್ರಷ್ಟಕಂದಾಯ ಅಧಿಕಾರಿಗಳು ಕಾನೂನು ಬಾಹಿರವಾಗಿ ‘ಖಾತಾ ಒಂದುಗೂಡಿಸುವಿಕೆ' ಮಾಡಿದ್ದಾರೆ. ಇವರೆಲ್ಲರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. 

ಡಿಎಲ್‌'ಎಫ್‌ ಸಂಸ್ಥೆಯು ವೆಸ್ಟೆಂಡ್‌ ಹೈಟ್ಸ್‌ ಹೆಸರಲ್ಲಿ 18 ಅಂತಸ್ತಿನ ಬೃಹತ್‌ ಅಪಾರ್ಟ್‌'ಮೆಂಟನ್ನು 60.04 ಎಕರೆಯಲ್ಲಿ ನಿರ್ಮಿಸಿದೆ. ಅಪಾರ್ಟ್‌'ಮೆಂಟ್‌'ನಲ್ಲಿ 2345 ಕಾರುಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ 19.37 ಎಕರೆ ಸರ್ಕಾರಿ ಭೂಮಿ ಮತ್ತು ಹೆಚ್ಚುವರಿಯಾಗಿ ಆಕ್ರಮಿಸಿಕೊಂಡ 14 ಎಕರೆ ಸರ್ಕಾರಿ ಜಮೀನು, ಕೆಐಎಡಿಬಿಗೆ ಸೇರಿದ 3.26 ಎಕರೆ, ಸರ್ವೇ ನಂ.369ರಲ್ಲಿನ 1.26 ಗುಂಡುತೋಪು, 1.17 ಎಕರೆ ಮೀಸಲು ಅರಣ್ಯ, 1.25 ಎಕರೆ ಸರ್ಕಾರಿ ಸ್ಮಶಾನ ಸೇರಿದಂತೆ ರು.850 ಕೋಟಿ ಮೌಲ್ಯದ ಭೂಮಿಯನ್ನು ಕಾನೂನು ಬಾಹಿರವಾಗಿ ಕಬಳಿಸಲಾಗಿದೆ. ನಕಲಿ ದಾಖಲೆ ಸೃಷ್ಟಿಸಿ ವಶಪಡಿಸಿಕೊಂಡಿರುವ 19.37 ಎಕರೆ ಸರ್ಕಾರಿ ಭೂಮಿಯು ರು.500-600 ಕೋಟಿಗಿಂತ ಹೆಚ್ಚು ಮೌಲ್ಯ ಇದ್ದು, ಕೆ.ಕಿರಣ್‌ ಮತ್ತು ಎಚ್‌.ಆರ್‌.ರವಿಚಂದ್ರ ಸೇರಿದಂತೆ ಕೆಲವು ಮಂದಿಯ ಹೆಸರಲ್ಲಿ ಸೃಷ್ಟಿಸಿರುವುದು ದಾಖಲೆಗಳಿಂದ ಬಹಿರಂಗಗೊಂಡಿದೆ ಎಂದು ಆರೋಪಿಸಿದರು. 

ನಗರದಲ್ಲಿ ಮಹದೇವಪುರ ಭಾಗವನ್ನು ಹೊರತುಪಡಿಸಿದರೆ ಬನ್ನೇರುಘಟ್ಟರಸ್ತೆಯಲ್ಲಿ ಹಲವು ಕಂಪನಿಗಳಿವೆ. 3758 ಐಟಿ ಕಂಪನಿಗಳು, 90ಕ್ಕೂ ಹೆಚ್ಚು ಬಿಟಿ ಕಂಪನಿಗಳು 1200ಕ್ಕಿಂತ ಬಿಪಿಓ ಸಂಸ್ಥೆಗಳಿವೆ. ಹೆಚ್ಚು ಉದ್ಯಮಗಳು ಸ್ಥಾಪನೆಯಾಗುತ್ತಿ​ರುವ ಕಾರಣ ಆ ಪ್ರದೇಶದಲ್ಲಿನ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಹೀಗಾಗಿ ಹಲವು ಅಪಾರ್ಟ್‌ಮೆಂಟ್‌ಗಳು ನಿರ್ಮಾಣವಾಗಿ ಮಾರಾಟವಾಗುತ್ತಿವೆ. ಅದರಲ್ಲಿ ರಾಬರ್ಟ್‌ ವಾದ್ರಾ ಅವರ ಪಾಲುದಾರಿ​ಕೆಯ ಡಿಎಲ್‌ಎಫ್‌ ಸಂಸ್ಥೆಯೂ ಒಂದಾಗಿದೆ. ಯೋಜನೆಗಾಗಿ ಐತಿಹಾಸಿಕ ಬೇಗೂರು ಕೆರೆಯಿಂದ ಹುಳಿಮಾವು ಕೆರೆಗೆ ಸಂಪರ್ಕ ಕಲ್ಪಿಸುವ ರಾಜಾಕಾಲುವೆ​ಯನ್ನು ಸಂಪೂರ್ಣವಾಗಿ ಮುಚ್ಚಿಹಾಕಿ ಕಬಳಿ​ಸಲಾಗಿದೆ. ಸರ್ಕಾರಿ ಭೂಮಿ ಒತ್ತುವರಿ ಕುರಿತು ಈಗಾಗ​ಲೇ ಜಿಲ್ಲಾಧಿಕಾರಿಗಳಿಗೆ, ಬಿಎಂಟಿಎಫ್‌, ಎಸಿಬಿ, ಜಾರಿ ನಿರ್ದೇಶನಾಲಯ ಮತ್ತು ಇದಕ್ಕೆ ಸಂಬಂಧಿಸಿದಂತೆ ರಚನೆಯಾಗಿರುವ ನ್ಯಾ.ಎಸ್‌.ಎನ್‌.ಧಿಂಗ್ರಾ ನೇತೃತ್ವದ ಆಯೋಗಕ್ಕೆ ದಾಖಲೆಗಳನ್ನು ನೀಡಲಾಗಿದೆ ಎಂದು ಹೇಳಿದರು.

ಸರ್ಕಾರಿ ಅಧಿಕಾರಿ ಚಿಕ್ಕರಾಯಪ್ಪ ಭಾಗಿ:
ಆದಾಯ ತೆರಿಗೆ ಅಧಿಕಾರಿಗಳ ದಾಳಿಗೊಳಗಾಗಿದ್ದ ಸರ್ಕಾರಿ ಅಧಿಕಾರಿ ಚಿಕ್ಕರಾಯಪ್ಪ ಅವರು ಸಹ ಡಿಎಲ್‌ಎಫ್‌ ಸಂಸ್ಥೆಯ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಬೆಂಗಳೂರು ನಗರ ಬಿಜೆಪಿ ವಕ್ತಾರ ಎನ್‌.ಆರ್‌.ರಮೇಶ್‌ ತಿಳಿಸಿದ್ದಾರೆ. ಡಿಎಲ್‌ಎಫ್‌ ಸಂಸ್ಥೆ ನಿರ್ಮಿಸಿರುವ ಅಪಾರ್ಟ್‌ಮೆಂಟ್‌'ಗೆ ಉತ್ತಮ ಬೆಲೆ ಬರಲಿ ಎಂಬ ಉದ್ದೇಶದಿಂದ ಚಿಕ್ಕರಾಯಪ್ಪ ಅವರು 30 ಅಡಿಗಳಷ್ಟು ಅಗಲವಿದ್ದ ರಸ್ತೆಯನ್ನು 80 ಅಡಿ ಅಗಲಕ್ಕೆ ವಿಸ್ತರಿಸಿದ್ದಾರೆ. ಈ ಮೂಲಕ ಪಾಲಿಕೆಗೆ ನೂರಾರು ಕೋಟಿ ರು. ನಷ್ಟವನ್ನುಂಟು ಮಾಡಿದ್ದಾರೆ ಎಂದು ಹೇಳಿದ್ದಾರೆ. ಸಂಸ್ಥೆಯಿಂದ ಅಪಾರ ಪ್ರಮಾಣದ ಹಣವನ್ನು ಪಡೆದು ಈ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ
epaper.kannadaprabha.in