ಕೆರೂರ[ಜು.13]: ಸಾರ್ವಜನಿಕರಿಗೆ ರಕ್ಷಣೆ ನೀಡುವ ಪೊಲೀಸ್ ಅಧಿಕಾರಿ ಮನೆಯಲ್ಲೆ ಕಳ್ಳರು 1.40 ಲಕ್ಷ ಮೌಲ್ಯದ 850 ಗ್ರಾಂ ಚಿನ್ನಾಭರಣ ಹಾಗೂ ಒಂದು ವಾಕಿಟಾಕಿ ಕಳ್ಳತನ ಮಾಡಿದ ಘಟನೆ ಪಟ್ಟಣದಲ್ಲಿ ಬುಧವಾರ ನಡೆದಿದ್ದು, ಗುರುವಾರ ಈ ಕುರಿತು ಪ್ರಕರಣ ದಾಖಲಾಗಿದೆ.

ಪಟ್ಟಣದ ಪೊಲೀಸ್ ಕಚೇರಿಯಲ್ಲಿ ಎಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿರುವ ಐ.ಎಂ ಹಿರೇಗೌಡರ ಮನೆಯಲ್ಲಿ ಕಳ್ಳತನವಾಗಿದೆ. ಪಟ್ಟಣದ ನೆಹರು ನಗರದಲ್ಲಿ ವಾಸಿಸುತ್ತಿದ್ದ ಹಿರೇಗೌಡರ ಬೆಳಗಾವಿ ಜಿಲ್ಲೆ ಖಾನಾಪೂರದಲ್ಲಿ ನಡೆಯುತ್ತಿರುವ ಪುನಶ್ಚೇತನ ತರಬೇತಿಗೆ ಜು.8ರಂದು ಹೋಗಿದ್ದರು.

ಅವರ ಪತ್ನಿ ಶಾಂತಾ ಹಿರೇಗೌಡರ ಹಾಗೂ ಮಗ ರಾಹುಲ ಜು.10 ರಂದು ಬೆಳಗ್ಗೆ 11 ಗಂಟೆಗೆ ಕಮತಗಿಯಲ್ಲಿರುವ ತಮ್ಮ ಸಂಬಂಧಿಕರ ಸೀಮಂತ ಕಾರ್ಯಕ್ಕೆ ತೆರಳಿದ್ದರು. ಇದೇ ಸಮಯವನ್ನು ನೋಡಿ ಕಳ್ಳರು ಮನೆಯ ಕೀಲಿ ಮುರಿದು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಬುಧವಾರ ಸಂಜೆ 7ಕ್ಕೆ ತಾಯಿ ಮಗ ಇಬ್ಬರು ಮನೆಗೆ  ವಾಪಸಾದಾಗ ಮನೆಗೆ ಕೀಲಿ ಹಾಕಿದ ಕೊಂಡಿ ಮುರಿದು ಕೀಲಿ ಕಳಚಿ ಬಿದ್ದಿತ್ತು. ಬಾಗಿಲು ತೆಗೆದು ಒಳ ಹೋದಾಗ ಸೀರೆ ಪ್ಯಾಂಟ್, ಶರ್ಟ್ ಸೇರಿದಂತೆ ವಿವಿಧ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಸುದ್ದಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.

ಗುರುವಾರ ಬೆಳಗ್ಗೆ ಶ್ವಾನದಳ ಹಾಗೂ ಬೆರಳಚ್ಚುಗಾರರನ್ನು ಕರೆಸಿ ಕಳ್ಳರನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ನಡೆಯಿತು. ಸ್ಥಳಕ್ಕೆ ಡಿಎಸ್‌ಪಿ, ಸಿಪಿಐ ಸೇರಿದಂತೆ ನಾನಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಎಸ್‌ಐ ಐ.ಎಂ ಹಿರೇಗೌಡರ ಮನೆಯ ಕಳುವಿನ ಪ್ರಕರಣದ ತನಿಖೆಗೆ ವಿಶೇಷ ತಂಡ ನಿಯೋಜಿಸಲಾಗಿದೆ. ಪಿಎಸ್‌ಐ ಚಂದ್ರಶೇಖರ ಹೆರಕಲ್ ನೇತೃತ್ವದಲ್ಲಿ 5 ಜನ ಪೊಲೀಸರ ತಂಡವನ್ನು ರಚಿಸಲಾಗಿದ್ದು ಶೀಘ್ರವಾಗಿ ಕಳ್ಳರನ್ನು ಹಿಡಿದು ತನಿಖೆ ಮಾಡಲಾಗುವುದೆಂದು ಸಿಪಿಐ ಕೆ.ಎಸ್ ಹಟ್ಟಿ ಹೇಳಿದರು.