ಬಿಜೆಪಿಗೆ ಆರ್‌.ಎನ್‌. ನಾಯ್ಕ ವಿದಾಯ: ಕಾಂಗ್ರೆಸ್ಸಿಗೆ ಸೇರ್ಪಡೆ

First Published 9, Mar 2018, 7:08 AM IST
RN Nailk Join Congress
Highlights

ಹೊನ್ನಾವರದ ಹಿರಿಯ ರಾಜಕಾರಣಿ, ಮಾಜಿ ಸಚಿವ ಆರ್‌.ಎನ್‌. ನಾಯ್ಕ ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್‌ ಸೇರಿದ್ದಾರೆ. ಇದರಿಂದ ಭಟ್ಕಳ-ಹೊನ್ನಾವರ ಕ್ಷೇತ್ರದಲ್ಲಿನ ರಾಜಕೀಯ ರಣಾಂಗಣದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.

ಹೊನ್ನಾವರ : ಹೊನ್ನಾವರದ ಹಿರಿಯ ರಾಜಕಾರಣಿ, ಮಾಜಿ ಸಚಿವ ಆರ್‌.ಎನ್‌. ನಾಯ್ಕ ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್‌ ಸೇರಿದ್ದಾರೆ. ಇದರಿಂದ ಭಟ್ಕಳ-ಹೊನ್ನಾವರ ಕ್ಷೇತ್ರದಲ್ಲಿನ ರಾಜಕೀಯ ರಣಾಂಗಣದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.

ಗುರುವಾರ ತಮ್ಮ ಮನೆಯಲ್ಲಿ ಕಾಂಗ್ರೆಸ್‌ನ ಮುಖಂಡರು, ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದ ಆರ್‌.ಎನ್‌.ನಾಯ್ಕ, ಬಿಜೆಪಿಗೆ ವಿದಾಯ ಹೇಳುವ ನಿರ್ಧಾರ ಪ್ರಕಟಿಸಿದರು. ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡ ಆರ್‌.ಎನ್‌. ನಾಯ್ಕ, ತಮಗೆ ಕಾಂಗ್ರೆಸ್‌ ಅವಶ್ಯಕತೆ ಇದೆ. ಪಕ್ಷಕ್ಕೂ ನನ್ನ ಅವಶ್ಯಕತೆ ಇದೆ. ಪಕ್ಷದ ತತ್ವ-ಸಿದ್ಧಾಂತ ಒಪ್ಪಿ ಪುನಃ ಹಳೆಯ ಮನೆಗೆ ಹಿಂದಿರುಗಿದ್ದೇನೆ ಎಂದರು.

ಇದೇ ವೇಳೆ, ಇಂದಿನ ದಿನಗಳಲ್ಲಿ ಪಕ್ಷದಿಂದ ಟಿಕೆಟ್‌ ಪಡೆಯುವುದು ಸುಲಭವಲ್ಲ. ಪಕ್ಷದ ಹಾಲಿ ಶಾಸಕರಿಗೆ ಟಿಕೆಟ್‌ ಖಚಿತ ಎಂಬ ಮಾಹಿತಿ ಇದೆ. ಆದರೆ, ನಾನು ಕಾಂಗ್ರೆಸ್‌ ಹೈಕಮಾಂಡ್‌ ಜೊತೆ ಸಂಪರ್ಕದಲ್ಲಿದ್ದೇನೆ. ಎಂದೂ ಜಾತಿ ಆಧಾರಿತ ರಾಜಕಾರಣ ಮಾಡಿಲ್ಲ. ಪ್ರಸ್ತುತ ಅಧಿಕಾರದಲ್ಲಿ ಇರದಿದ್ದರೂ ಎಲ್ಲರನ್ನು ಕೂಡಿಸಿಕೊಂಡು ಹೋಗಬೇಕೆನ್ನುವುದು ನನ್ನ ಅಭಿಮತ ಎಂದು ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದೀರಾ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಏತನ್ಮಧ್ಯೆ, ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಜೊತೆ ವೈಯಕ್ತಿಕ ದ್ವೇಷವಿಲ್ಲ. ಆದರೆ, ಮನುವಾದದ ಕುರಿತು ಹಾಗೂ ನಾಮಧಾರಿ ಮುಖಂಡರಲ್ಲಿ ಒಬ್ಬರಿಗೊಬ್ಬರಿಗೆ ಜಗಳ ಹೆಚ್ಚಿಸುವುದನ್ನು ನಾನು ದ್ವೇಷಿಸುತ್ತೇನೆ. ಆದ್ದರಿಂದ ಅವರು ಮುಂದಿನ ದಿನಗಳಲ್ಲಿ ಗೆಲ್ಲಬಾರದೆಂಬ ನಿಟ್ಟಿನಲ್ಲಿ ನನ್ನ ಪ್ರಯತ್ನವಿದೆ. ಎಲ್ಲ ಹಿಂದುಳಿದ ವರ್ಗದವರನ್ನು ಒಟ್ಟುಗೂಡಿಸಿ ಉತ್ತರ ಕನ್ನಡ ಜಿಲ್ಲೆಯನ್ನು ಬಿಜೆಪಿ ಮುಕ್ತ ಮಾಡುವ ಉದ್ದೇಶವಿದೆ ಎಂದು ತಿಳಿಸಿದರು.

loader