Asianet Suvarna News Asianet Suvarna News

ಚನ್ನಪಟ್ಟಣದಿಂದ ಕಾಂಗ್ರೆಸ್’ನಿಂದ ರೇವಣ್ಣ ಸ್ಪರ್ಧೆ..?

ರಾಜ್ಯದಲ್ಲೇ ತೀವ್ರ ಹಣಾಹಣಿಯಿರುವ ಕ್ಷೇತ್ರವೆನಿಸಿದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನಿಂದ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಅವರ ಹೆಸರು ಕೇಳಿಬಂದಿದೆ.

Revanna Contest From Channapatna

ಬೆಂಗಳೂರು : ರಾಜ್ಯದಲ್ಲೇ ತೀವ್ರ ಹಣಾಹಣಿಯಿರುವ ಕ್ಷೇತ್ರವೆನಿಸಿದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನಿಂದ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಅವರ ಹೆಸರು ಕೇಳಿಬಂದಿದೆ. ರಾಜ್ಯ ನಾಯಕತ್ವ ರೇವಣ್ಣ ಅವರನ್ನು ಈ ಪ್ರತಿಷ್ಠಿತ ಕ್ಷೇತ್ರದಲ್ಲಿ ಕಣಕ್ಕೆ ಇಳಿಸಲು ಬಯಸಿದೆ. ಆದರೆ, ರೇವಣ್ಣ ಮಾತ್ರ ಈ ಕಣದಲ್ಲಿ ಧುಮುಕಲು ತಯಾರಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

ಬಿಜೆಪಿಯಿಂದ ಸಿ.ಪಿ. ಯೋಗೇಶ್ವರ್‌ ಹಾಗೂ ಜೆಡಿಎಸ್‌ನಿಂದ ಎಚ್‌.ಡಿ. ಕುಮಾರಸ್ವಾಮಿ ಅವರು ಕಣಕ್ಕೆ ಇಳಿಯುವ ಮೂಲಕ ಪ್ರತಿಷ್ಠೆಯ ಕ್ಷೇತ್ರವಾಗಿರುವ ಚನ್ನಪಟ್ಟಣಕ್ಕೆ ಪ್ರಬಲ ಅಭ್ಯರ್ಥಿಯ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಹಠಾತ್ತಾಗಿ ರೇವಣ್ಣ ಅವರ ಹೆಸರು ಕೇಳಿಬಂದಿದೆ. ದೆಹಲಿಯಲ್ಲಿ ನಡೆದ ಕಾಂಗ್ರೆಸ್‌ ಸ್ಕ್ರೀನಿಂಗ್‌ ಕಮಿಟಿ ಸಭೆಯಲ್ಲಿ ರೇವಣ್ಣ ಅವರನ್ನು ಕಣಕ್ಕೆ ಇಳಿಸುವ ಬಗ್ಗೆ ಚರ್ಚೆ ನಡೆಯಿತು ಎನ್ನಲಾಗಿದೆ.

ಇದಕ್ಕೆ ಕಾರಣ ಸ್ಕ್ರೀನಿಂಗ್‌ ಕಮಿಟಿ ಮುಂದೆ ಹೋಗಿದ್ದ ಚನ್ನಪಟ್ಟಣದ ಪ್ಯಾನಲ್‌ನಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರೊಬ್ಬರ ಹೆಸರು ಮಾತ್ರ ಇತ್ತು. ಆದರೆ, ಆ ಆಕಾಂಕ್ಷಿ ಪ್ರಬಲ ಪೈಪೋಟಿ ನೀಡುವ ಸಾಮರ್ಥ್ಯ ಹೊಂದಿಲ್ಲ ಎಂಬುದೇ ನಾಯಕರ ಅಭಿಪ್ರಾಯ. ಹೀಗಾಗಿ ಈ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಯಾಗಿ ಯಾರನ್ನು ಇಳಿಸಬೇಕು ಎಂಬ ಬಗ್ಗೆ ಚರ್ಚೆ ನಡೆದಾಗ ರೇವಣ್ಣ ಹೆಸರು ಕೇಳಿ ಬಂದಿದೆ.

ಒಕ್ಕಲಿಗ ಪ್ರಾಬಲ್ಯದ ಚನ್ನಪಟ್ಟಣ ಕ್ಷೇತ್ರದಲ್ಲಿ ಕುರುಬರು ಹಾಗೂ ಅಹಿಂದ ವರ್ಗದವರು ಉತ್ತಮ ಸಂಖ್ಯೆಯಲ್ಲಿದ್ದಾರೆ. ಜೆಡಿಎಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳು ಒಕ್ಕಲಿಗ ಸಮುದಾಯದವರಾಗಿರುವುದರಿಂದ ಆ ಮತಗಳು ವಿಭಜನೆಗೊಳ್ಳಬಹುದು. ಆಗ ಕುರುಬ ಮತ್ತು ಅಹಿಂದ ಮತಗಳು ಒಗ್ಗೂಡಿದರೆ ಕಾಂಗ್ರೆಸ್‌ಗೆ ಗೆಲ್ಲುವ ಒಂದು ಅವಕಾಶವಿದೆ. ಹೀಗಾಗಿ ಕುರುಬ ಸಮುದಾಯದಲ್ಲಿ ಪ್ರಭಾವಿಯಾಗಿರುವ ರೇವಣ್ಣ ಅವರನ್ನು ಕಣಕ್ಕೆ ಇಳಿಸುವುದು ಸೂಕ್ತ ಎಂದು ಚರ್ಚೆ ನಡೆಯಿತು ಎನ್ನಲಾಗಿದೆ.

ಇನ್ನೊಂದು ಮೂಲದ ಪ್ರಕಾರ, ಈ ಭಾಗದಲ್ಲಿ ಅಭ್ಯರ್ಥಿ ಆಯ್ಕೆಯ ಹೊಣೆ ಹೊತ್ತಿದ್ದ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರು ತಮ್ಮ ವಿರೋಧಿ ಎನಿಸಿದ ಯೋಗೇಶ್ವರ್‌ರನ್ನು ಸೋಲಿಸಲು ಜೆಡಿಎಸ್‌ನ ಕುಮಾರಸ್ವಾಮಿ ಅವರಿಗೆ ಸಹಕರಿಸಲು ಮುಂದಾಗಿದ್ದು, ಹೀಗಾಗಿಯೇ ದುರ್ಬಲ ಅಭ್ಯರ್ಥಿಯನ್ನು ಸೂಚಿಸಿದ್ದಾರೆ. ಆದರೆ, ಈ ನಡೆಗೆ ಸಿದ್ದರಾಮಯ್ಯ ಅವರ ಆಕ್ಷೇಪವಿದೆ. ಹೀಗಾಗಿ ಅವರು ಕುರುಬ ಹಾಗೂ ಅಹಿಂದ ಮತಗಳ ಒಗ್ಗೂಡುವಿಕೆಯ ತಂತ್ರ ಮುಂದಿಟ್ಟಿದ್ದು, ರೇವಣ್ಣ ಅವರನ್ನು ಕಣಕ್ಕೆ ಇಳಿಸವುದು ಸೂಕ್ತ ಎಂದು ಸ್ಕ್ರೀನಿಂಗ್‌ ಕಮಿಟಿಯಲ್ಲಿ ಸಲಹೆ ನೀಡಿದರು ಎನ್ನಲಾಗಿದೆ.

ಸ್ಪರ್ಧಿಸಲು ಹಿಂಜರಿದ ರೇವಣ್ಣ: ಚನ್ನಪಟ್ಟಣದಿಂದ ಸ್ಪರ್ಧಿಸಬೇಕು ಎಂಬ ರಾಜ್ಯ ನಾಯಕತ್ವದ ಸಲಹೆಯನ್ನು ಸಚಿವ ರೇವಣ್ಣ ನಯವಾಗಿ ತಿರಸ್ಕರಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ವಾಸ್ತವವಾಗಿ ಮಹಾಲಕ್ಷ್ಮೇ ಲೇಔಟ್‌ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದ ರೇವಣ್ಣ ಅವರಿಗೆ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದರು. ವಿಧಾನಪರಿಷತ್‌ ಸದಸ್ಯತ್ವ ಸ್ಥಾನ ಇರುವ ಕಾರಣ ವಿಧಾನಸಭೆಗೆ ಟಿಕೆಟ್‌ ಕೇಳದಿರುವಂತೆ ಅವರು ನೇರವಾಗಿ ಹೇಳಿದ್ದರು ಎನ್ನಲಾಗಿದೆ.

ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವ ಕನಸನ್ನು ರೇವಣ್ಣ ಬಿಟ್ಟಿದ್ದರು. ಈಗ ಏಕಾಏಕಿ ತಮಗೆ ಸಂಬಂಧವೇ ಇಲ್ಲದ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸುವಂತೆ ರಾಜ್ಯ ನಾಯಕತ್ವ ಸೂಚಿಸುತ್ತಿರುವುದು ಅವರಿಗೆ ಅಚ್ಚರಿ ತಂದಿದೆ. ಯಾವುದೇ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲು ತಯಾರಿ ಬೇಕಾಗುತ್ತದೆ. ಅಂತಹ ಯಾವುದೇ ತಯಾರಿ ಈ ಕ್ಷೇತ್ರದಲ್ಲಿ ಇಲ್ಲದ ಕಾರಣ ಮತ್ತು ಚನ್ನಪಟ್ಟಣ ಕ್ಷೇತ್ರ ಪ್ರಭಾವಿ ಒಕ್ಕಲಿಗ ಸಮುದಾಯದವರು ಹೆಚ್ಚು ಇರುವ ಕ್ಷೇತ್ರವಾದ ಕಾರಣ ಅಲ್ಲಿಂದ ಸ್ಪರ್ಧಿಸಲು ರೇವಣ್ಣ ನಿರಾಕರಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ ಅವರು, ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ನನಗೆ ಈವರೆಗೂ ಯಾವ ನಾಯಕರೂ ಸೂಚಿಸಿಲ್ಲ. ಸ್ಪರ್ಧಿಸುವ ಆಕಾಂಕ್ಷೆಯೂ ನನಗಿಲ್ಲ. ಆದರೆ, ಪಕ್ಷದ ಹೈಕಮಾಂಡ್‌ ಕಣಕ್ಕಿಳಿಯಲು ಆದೇಶ ನೀಡಿದರೆ ಅದನ್ನು ನಿಷ್ಠಾವಂತ ಕಾರ್ಯಕರ್ತನಾಗಿ ಪಾಲಿಸುವೆ ಎಂದು ಹೇಳಿದ್ದಾರೆ. ಆದರೆ, ರೇವಣ್ಣ ಅವರ ಆಪ್ತ ಮೂಲಗಳು ಮಾತ್ರ ರೇವಣ್ಣ ಚನ್ನಪಟ್ಟಣದಿಂದ ಸ್ಪರ್ಧಿಸುವ ಸಾಧ್ಯತೆಯನ್ನು ಸಂಪೂರ್ಣವಾಗಿ ಅಲ್ಲಗಳೆಯುತ್ತವೆ.

Follow Us:
Download App:
  • android
  • ios