ಬೆಂಗಳೂರಿನಲ್ಲಿ ಇದೀಗ ಮತ್ತೊಂದು ನಲಪಾಡ್ ರೀತಿಯ ರೌಡಿಸಂ ಪ್ರಕರಣ ಬೆಳಕಿಗೆ ಬಂದಿದೆ. ನಿವೃತ್ತ ಪೊಲೀಸ್ ಅಧಿಕಾರಿಯ ಮಗನಿಗೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ್ದಾನೆ.
ಬೆಂಗಳೂರು : ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಹಲ್ಲೆ ಪ್ರಕರಣದಂತೆ ಮತ್ತೊಂದು ಘಟನೆ ನಗರದಲ್ಲಿ ಮರುಕಳಿಸಿದ್ದು, ನಿವೃತ್ತ ಡಿವೈಎಸ್ಪಿಯ ಪುತ್ರನೊಬ್ಬನ ಗ್ಯಾಂಗ್ ಕ್ಷುಲ್ಲಕ ಕಾರಣಕ್ಕೆ ಹೋಟೆಲ್‌ವೊಂದರಲ್ಲಿ ವ್ಯಕ್ತಿಯೊಬ್ಬನ ಮೇಲೆ ಬಿಯರ್ ಬಾಟಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯಲ್ಲಿ ಕಮ್ಮಗೊಂಡನಹಳ್ಳಿ ನಿವಾಸಿ ಎನ್.ಯುವರಾಜ್ (36) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಿವೃತ್ತ ಡಿವೈಎಸ್ಪಿ ಪುತ್ರ ಜಕ್ಕೂರು ನಿವಾಸಿ ಸುಮನ್, ಈತನ ಸಹಚರರಾದ ಅಶೋಕ್, ಹರಿಕೃಷ್ಣ ಹಾಗೂ ವಿಕ್ರಮ್ ತಲೆ ಮರೆಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಕೇಂದ್ರ ವಿಭಾಗದ ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.
ಐದು ದಿನಗಳ ಕಾಲ ರಾಮಯ್ಯ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿದ್ದ ಯುವರಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.
"
ಕೈತಾಕಿದ್ದಕ್ಕೆ ಹಲ್ಲೆ: ಆರೋಪಿ ಸುಮನ್ ನಿವೃತ್ತ ಡಿವೈಎಸ್ಪಿ ಟಿ.ಕೋನಪ್ಪ ರೆಡ್ಡಿ ಅವರ ಪುತ್ರ. ಜಕ್ಕೂರಿನಲ್ಲಿ ಸುಮನ್ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದು, ಕಳೆದ ಸೆ.8ರಂದು ರಾತ್ರಿ ರೇಸ್‌ಕೋರ್ಸ್ ರಸ್ತೆಯಲ್ಲಿರುವ ‘ರಿನೈಸಾನ್ಸ್’ ಪಂಚತಾರಾ ಹೋಟೆಲ್‌ಗೆ ತನ್ನ ಸ್ನೇಹಿತರ ಜತೆ ಪಾರ್ಟಿ ಮಾಡಲು ತೆರಳಿದ್ದ. ಐಷಾರಾಮಿ ಹೋಟೆಲ್‌ನಲ್ಲಿ ಡಿಸ್ಕೋಥೆಕ್ ಕೂಡ ಇದೆ. ಹಲ್ಲೆಗೊಳಗಾದ ಯುವರಾಜ್ ಅವರು ತನ್ನ ಸ್ನೇಹಿತ ಕಾರ್ತಿಕ್ ಎಂಬುವರ ಜತೆ ರಾತ್ರಿ 10 ಗಂಟೆಗೆ ಅದೇ ಹೋಟೆಲ್‌ಗೆ ತೆರಳಿದ್ದರು.
ಯುವರಾಜ್ ಊಟ ಮುಗಿದ ಬಳಿಕ ರಾತ್ರಿ 12.45ರ ಸುಮಾರಿಗೆ ಶೌಚಾಲಯಕ್ಕೆ ಹೋಗಿ ಕೈ ತೊಳೆದುಕೊಂಡು ಬರುತ್ತಿದ್ದರು. ಈ ವೇಳೆ ಎದುರು ಬಂದ ಆರೋಪಿಗೆ ಸುಮನ್‌ಗೆ ಯುವರಾಜ್ ಕೈ ತಗುಲಿದೆ. ಇಷ್ಟಕ್ಕೆ ಕೋಪಗೊಂಡ ಸುಮನ್ ‘ಏಯ್ ನೋಡಿಕೊಂಡು ಬರುವುದಕ್ಕೆ ಆಗೋದಿಲ್ವಾ..’ ಎಂದು ಅವಾಚ್ಯ ಶಬ್ಧದಿಂದ ಯುವರಾಜ್ ಅವರನ್ನು ನಿಂದಿಸಿ ಏಕಾಏಕಿ ಸುಮನ್ ಕೈಯಿಂದ ಹಲ್ಲೆ ನಡೆಸಿದ್ದಾನೆ. ಇದಾದ ಬಳಿಕ ಆರೋಪಿಯ ಇನ್ನಿಬ್ಬರು ಸಹಚರರಾದ ಅಶೋಕ್, ಹರಿಕೃಷ್ಣ ಹಾಗೂ ವಿಕ್ರಮ್ ಕೂಡ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ್ದಾರೆ. ತೀವ್ರ ರಕ್ತಸ್ರಾವವಾಗಿ ಯುವರಾಜ್ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಕಾರ್ತಿಕ್ ಕೂಡಲೇ ಸ್ನೇಹಿತನನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ.
ಚಾಕು ತೋರಿಸಿ ಬೆದರಿಕೆ:
ಕಾರ್ತಿಕ್ ಕಾರಿನ ಬಳಿ ಬಂದ ದುಷ್ಕರ್ಮಿಗಳು ಚಾಕು ತೋರಿಸಿ ‘ನೀನು ಹೊರಗೆ ಬಂದರೆ ನಿನ್ನನ್ನು ಹತ್ಯೆ ಮಾಡುತ್ತೇವೆ’ ಎಂದು ಬೆದರಿಸಿ ಬಿಳಿ ಬಣ್ಣದ ಫಾರ್ಚೂನರ್ ಕಾರಿನಲ್ಲಿ ಪರಾರಿಯಾದರು. ಸ್ನೇಹಿತನ ಸ್ಥಿತಿ ಚಿಂತಾಜನಕವಾಗಿದ್ದು, ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮಕೈಗೊಳ್ಳಬೇಕೆಂದು ಕಾರ್ತಿಕ್ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ ಕೊಲೆ ಯತ್ನ, ಪ್ರಾಣ ಬೆದರಿಕೆ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಯುವರಾಜ್ ಅವರಿಗೆ ವಿವಾಹವಾಗಿದ್ದು, ಸ್ವಂತ ವ್ಯವಹಾರ ನಡೆಸುತ್ತಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.
ಲುಕ್‌ಔಟ್ ನೋಟಿಸ್ ಜಾರಿ:
ನಾಲ್ವರು ಆರೋಪಿಗಳು ಗೋವಾ, ದೆಹಲಿ, ಹರಿಯಾಣ ರಾಜ್ಯಗಳಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿ ಪ್ರತಿ ಬಾರಿ ಸ್ಥಳ ಬದಲಾವಣೆ ಮಾಡುತ್ತಿದ್ದಾರೆ. ಮೊಬೈಲ್‌ಗಳನ್ನು ಬಳಸುತ್ತಿಲ್ಲ. ಆರೋಪಿಗಳ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಬಳಿಕ ಇದೀಗ ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಿಲ್ಲ. ಹೀಗಾಗಿ ಆರೋಪಿಗಳ ಬಂಧನ ತುಷ್ಟಕಷ್ಟವಾಗಿದೆ. ಆರೋಪಿಗಳು ಹಲ್ಲೆ ನಡೆಸಿರುವ ದೃಶ್ಯಾವಳಿಗಳು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದ್ದು, ಸಿಸಿಟಿವಿಯನ್ನು ವಶಕ್ಕೆ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಆರೋಪಿಗಳ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಶೀಘ್ರ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಅಧಿಕಾರಿ ತಿಳಿಸಿದರು.
ನಿವೃತ್ತ ಡಿವೈಎಸ್ಪಿ ಹೆಸರಲ್ಲಿ ಕಾರು ನೋಂದಣಿ?
ದುಷ್ಕರ್ಮಿಗಳ ಬಂಧನಕ್ಕೆ ಮುಂದಾದ ಪೊಲೀಸರು ಕಾರಿನ ಸಂಖ್ಯೆಯ ಹಿಡಿದು ಆರೋಪಿಯ ಜಕ್ಕೂರಿನ ನಿವಾಸಕ್ಕೆ ತೆರಳಿದಾಗ ಅದು ನಿವೃತ್ತ ಡಿವೈಎಸ್ಪಿ ಕೋನರೆಡ್ಡಿ ಅವರಿಗೆ ಸೇರಿದ್ದು ಎಂಬುದು ಹೈಗ್ರೌಂಡ್ಸ್ ಠಾಣೆ ಪೊಲೀಸರಿಗೆ ತಿಳಿಯಿತು. ಕೂಡಲೇ ತನಿಖಾಧಿಕಾರಿಗಳು ನಿಮ್ಮ ಮಗ ಎಲ್ಲಿ ಎಂದು ಪ್ರಶ್ನಿಸಿದ್ದು, ಇದಕ್ಕೆ ಕೋನರೆಡ್ಡಿ ಅವರು ಪ್ರತಿಕ್ರಿಯೆ ನೀಡಿಲ್ಲ. ಬಳಿಕ ಕೃತ್ಯ ನಡೆದ ದಿನ ನಿವೃತ್ತ ಡಿವೈಎಸ್ಪಿ ಅವರ ಪುತ್ರ ಸುಮನ್ ಬಳಸಿದ್ದ ಕಾರನ್ನು ಪೊಲೀಸರು ಜಪ್ತಿ ಠಾಣೆಯ ಅವರಣದಲ್ಲಿ ನಿಲ್ಲಿಸಿದ್ದಾರೆ.
ಪೊಲೀಸರ ಮೇಲೆ ರಾಜಕೀಯ ಒತ್ತಡ?
ಪ್ರಕರಣದಲ್ಲಿ ಎಸಿಪಿ ಕೆ.ರವಿಶಂಕರ್ ಹಾಗೂ ಹೈಗ್ರೌಂಡ್ಸ್ ಠಾಣೆ ಇನ್ಸ್‌ಪೆಕ್ಟರ್ ಲಕ್ಷ್ಮೇಕಾಂತಯ್ಯ ಅವರಿಗೆ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವರಿಂದ ಒತ್ತಡ ಬಂದಿದೆ ಎಂಬ ಆರೋಪ ಕೇಳಿ ಬಂದಿದೆ. ನಿವೃತ್ತ ಡಿವೈಎಸ್ಪಿ ಕೋನಪ್ಪ ರೆಡ್ಡಿ ಅವರು ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದು, ಕೆಲ ಶಾಸಕರಿಂದಲೂ ಕೇಂದ್ರ ವಿಭಾಗದ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿದೆ.
24 ದಿನವಾದರೂ ಬಂಧಿಸಿಲ್ಲ!
ಘಟನೆ ನಡೆದು 24 ದಿನವಾದರೂ ಆರೋಪಿಗಳ ಬಂಧನ ಸಾಧ್ಯವಾಗಿಲ್ಲ. ಇನ್ನು ಘಟನೆ ನಡೆದ ದಿನ ಬಳಸಲಾಗಿದ್ದ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದು, ಹೈಗ್ರೌಂಡ್ಸ್ ಆವರಣದಲ್ಲಿ ನಿಲುಗಡೆ ಮಾಡಲಾಗಿದೆ. ಈ ಹಿಂದೆ ಹಲ್ಲೆ ಪ್ರಕರಣದಲ್ಲಿ ಜಪ್ತಿ ಮಾಡಲಾಗಿರುವ ದುನಿಯಾ ವಿಜಯ್ ಅವರ ಕಾರಿನ ಮುಂಭಾಗ ಈ ಕಾರು ನಿಲ್ಲಿಸಲಾಗಿದೆ. ಆದರೆ ಯಾರಿಗೂ ತಿಳಿಯಬಾರದೆಂದು ಫಾರ್ಚೂನರ್ ಕಾರಿನ ಹಿಂಬದಿಯ ನಂಬರ್ ಪ್ಲೇಟ್ ತೆಗೆಯಲಾಗಿದೆ. ಇದು ಪೊಲೀಸರ ಮೇಲೆಯೇ ಅನುಮಾನ ಮೂಡುವಂತೆ ಮಾಡಿದೆ.
ಘಟನೆ ಸಂಬಂಧ ಹೋಟೆಲ್‌ನಲ್ಲಿ ನಡೆದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆಯಲಾಗಿದೆ. ನಾಲ್ವರು ಆರೋಪಿಗಳ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಕೊಲೆ ಯತ್ನ ದೂರು ದಾಖಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ.
-ಟಿ.ಸುನೀಲ್ ಕುಮಾರ್, ನಗರ ಪೊಲೀಸ್ ಆಯುಕ್ತ
ಎನ್.ಲಕ್ಷ್ಮಣ್
