ನವದೆಹಲಿ(ಫೆ.17]: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ CRPFನ 40 ವೀರಯೋಧರನ್ನು ಬಲಿ ಪಡೆದ ಭಯೋತ್ಪಾದಕ ದಾಳಿಗೆ ಪಾಕಿಸ್ತಾನವೇ ಕಾರಣ ಎಂದು ಇಡೀ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವಾಗಲೇ, ದೆಹಲಿಯಲ್ಲಿರುವ ಪಾಕಿಸ್ತಾನದ ರಾಯಭಾರ ಅಧಿಕಾರಿಗಳು ಪ್ರತಿಭಟನಾಕಾರರಿಂದ ರಕ್ಷಣೆ ಪಡೆಯಲು CRPF ಸೈನಿಕರನ್ನೇ ಆಶ್ರಯಿಸುವಂತಾಗಿದೆ. ತಮ್ಮ ಸಹೋದ್ಯೋಗಿಗಳ ಸಾವಿಗೆ ಕಾರಣವಾಗಿದ್ದು ಪಾಕಿಸ್ತಾನ ಎಂಬುದು ಗೊತ್ತಿದ್ದರೂ ಯೋಧರು ರಾಯಭಾರಿಗಳಿಗೆ ಭದ್ರತೆ ಒದಗಿಸುವ ಮೂಲಕ ವೃತ್ತಿಪರತೆ ಮೆರೆದಿದ್ದಾರೆ.

ಪುಲ್ವಾಮಾ ದಾಳಿ ಬಳಿಕ ದೆಹಲಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿದ್ದು, ಕೆಲವು ಪ್ರತಿಭಟನಾಕಾರರು ಪಾಕಿಸ್ತಾನ ವಿರೋಧಿ ಘೋಷಣೆ ಕೂಗಿ, ಚಾಣಕ್ಯಪುರಿಯಲ್ಲಿರುವ ರಾಯಭಾರ ಸಮುಚ್ಚಯದಲ್ಲಿನ ಪಾಕಿಸ್ತಾನ ಹೈಕಮಿಷನ್‌ ಕಚೇರಿಗೆ ನುಗ್ಗಲು ಯತ್ನಿಸಿದರು.

ರಾಯಭಾರ ಕಚೇರಿಯನ್ನು ಮುಚ್ಚಬೇಕು, ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಬೇಕು ಎಂದು ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಹೈಕಮಿಷನ್‌ ಕಚೇರಿ ಸುತ್ತ 16ರಿಂದ 17 ಯೋಧರು ಇರುವ ಸಿಆರ್‌ಪಿಎಫ್‌ನ ಸಣ್ಣ ತುಕಡಿಯೊಂದನ್ನು ನಿಯೋಜನೆ ಮಾಡಲಾಗಿದೆ. ಕೆಲವೊಂದಿಷ್ಟು ಬಿಎಸ್‌ಎಫ್‌ ಯೋಧರು ಹಾಗೂ ದೆಹಲಿ ಪೊಲೀಸರ ಗಸ್ತು ವಾಹನಗಳು ಕೂಡ ಹೈಕಮಿಷನ್‌ ಕಚೇರಿಗೆ ರಕ್ಷಣೆ ಒದಗಿಸಿವೆ.