Asianet Suvarna News Asianet Suvarna News

’ಅರ್ಧಗಂಟೆ ಮೊದಲು ಸ್ಫೋಟಗೊಂಡ ಬಸ್‌ನಿಂದ ಇಳಿದಿದ್ದೆ’

ಪುಲ್ವಾಮಾದಲ್ಲಿ ಉಗ್ರರ ದಾಳಿ ನಡೆದಾಗ ಸ್ಫೋಟಗೊಂಡ ಬಸ್ಸಿನಿಂದ 20 ಅಡಿಯಷ್ಟೇ ಅಂತರದಲ್ಲಿದ್ದ ಹಾಗೂ ಉಗ್ರರ ದಾಳಿಗೆ 30 ನಿಮಿಷಗಳ ಮೊದಲಷ್ಟೇ ಸ್ಫೋಟಗೊಂಡ ಬಸ್ಸಿನಿಂದ ಇಳಿದಿದ್ದ ಕನ್ನಡಿಗ ಯೋಧನ ಕೆಚ್ಚೆದೆಯ ಮಾತುಗಳು ಇಲ್ಲಿದೆ ನೋಡಿ. 

Rescued soldier shares a experience of Pulwama attack
Author
Bengaluru, First Published Feb 16, 2019, 9:01 AM IST

ಬೆಂಗಳೂರು (ಫೆ. 16): ‘ನನ್ನ ಸಹ ಯೋಧರನ್ನು ಹೊತ್ತ ಬಸ್ಸು ಕಣ್ಣೆದುರಿಗೇ ಛಿದ್ರಗೊಂಡ ಬಗ್ಗೆ ತೀವ್ರ ಬೇಸರವಿದೆ. ಆದರೆ, ಸೈನಿಕರಾದ ನಮ್ಮ ಪ್ರಾಣ ಹೋದರೂ ನಾಗರಿಕರಿಗೆ ಏನೂ ಆಗಬಾರದೆಂಬುದು ಪ್ರತಿ ಸೈನಿಕನ ಬಯಕೆ. ಘಟನೆಯಲ್ಲಿ ನಾಗರಿಕರಿಗೆ ಏನೂ ಆಗಿಲ್ಲ ಎಂಬ ನೆಮ್ಮದಿ ಇದೆ.’ ದೇಶಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧವಾಗಿಯೇ ಬಂದಿರುವ ನಮ್ಮನ್ನು ಇಂತಹ ಕೃತ್ಯಗಳಿಂದ ಹೆದರಿಸಲು ಸಾಧ್ಯವಿಲ್ಲ. ನನ್ನ ಪ್ರಾಣ ಹೋದರೂ ಸರಿ, ಕೊನೆಯುಸಿರು ಇರುವವರೆಗೂ ಇದೇ ಜಮ್ಮು ಕಣಿವೆಯಲ್ಲೇ ದೇಶ ಕಾಯುತ್ತೇನೆ.

- ಇದು ಪುಲ್ವಾಮಾದಲ್ಲಿ ಉಗ್ರರ ದಾಳಿ ನಡೆದಾಗ  ಸ್ಫೋಟಗೊಂಡ ಬಸ್ಸಿನಿಂದ 20 ಅಡಿಯಷ್ಟೇ ಅಂತರದಲ್ಲಿದ್ದ ಹಾಗೂ ಉಗ್ರರ ದಾಳಿಗೆ 30 ನಿಮಿಷಗಳ ಮೊದಲಷ್ಟೇ ಸ್ಫೋಟಗೊಂಡ ಬಸ್ಸಿನಿಂದ ಇಳಿದಿದ್ದ ಕನ್ನಡಿಗ ಯೋಧನ
ಕೆಚ್ಚೆದೆಯ ಮಾತುಗಳು.

ನಾಗರಿಕರಿಗೆ ಏನೂ ಆಗಬಾರದು ಎಂಬ ಒಂದೇ ಉದ್ದೇಶದಿಂದ ನಾವು ದೇಶ ಕಾಯುತ್ತಿದ್ದೇವೆ. ದೇಶಕ್ಕೆ ಯೋಧರು ಮನೆಗೆ ಗೋಡೆ ಇದ್ದಂತೆ. ಹೀಗಾಗಿ ಸಿಡಿಲು ಬಡಿಯಲಿ, ಗುಂಡಿನ ಮಳೆಗರೆಯಲಿ ಗೋಡೆಗಳು ತೂತಾಗಬೇಕೆ ಹೊರತು
ಮನೆಯಲ್ಲಿರುವವರಿಗೆ ಏನೂ ಆಗಬಾರದು. ದೇಶ ಕಾಯಲು ಬಂದಿರುವ ನಮಗೆ ಏನಾದರೂ ಆದರೆ ಪರವಾಗಿಲ್ಲ. ನಮ್ಮ ಪ್ರಾಣ ಹೋದರೂ ಸರಿ, ಒಬ್ಬ ನಾಗರಿಕನ ಪ್ರಾಣಕ್ಕೂ ಹಾನಿಯಾಗಬಾರದು. ಹೀಗಾಗಿ ಇಂತಹ ಬೆದರಿಕೆಗಳಿಗೆ ನಾವು ಜಗ್ಗುವುದಿಲ್ಲ ಎಂದು ಖಡಕ್ ಆಗಿ ನುಡಿದಿದ್ದಾರೆ.

ಪ್ರಸ್ತುತ ಪುಲ್ವಾಮ ಜಿಲ್ಲೆಯಲ್ಲಿ ಇರುವ ಈ ಯೋಧ ಕನ್ನಡಪ್ರಭದೊಂದಿಗೆ ದೂರವಾಣಿ ಮೂಲಕ ಮಾತನಾಡಿ ಇಡೀ ಘಟನೆಯನ್ನು ವಿವರಿಸಿದ್ದು ಹೀಗೆ- ಒಂದು ತಿಂಗಳ ರಜೆಗಾಗಿ ಜ.11 ರಿಂದ ಫೆ. 11 ರವರೆಗೆ ರಾಜ್ಯಕ್ಕೆ ಬಂದಿದ್ದೆ. ಫೆ.5 ರಿಂದ ಈ ರಸ್ತೆಯಲ್ಲಿ ಯಾವುದೇ ಸಿಆರ್‌ಪಿಎಫ್ ಬೆಂಗಾವಲು ವಾಹನಗಳು ಹೋಗಿರಲಿಲ್ಲ. ಹೀಗಾಗಿ ರಜೆಯಿಂದ ವಾಪಸಾದ ಸಿಆರ್‌ಪಿಎಫ್ ಯೋಧರನ್ನೆಲ್ಲಾ ಹೊತ್ತಿಕೊಂಡು ಸಾಲು-ಸಾಲು ಬಸ್ಸುಗಳು ಫೆ.14 ರಂದು ಮುಂಜಾನೆ 3.30 ಕ್ಕೆ
ಜಮ್ಮುವಿನಿಂದ ಶ್ರೀನಗರದತ್ತ ಹೊರಟವು.

ಬೇರೆ ಬೇರೆ ಬೆಟಾಲಿಯನ್‌ಗಳಲ್ಲಿ ಕಾರ್ಯನಿರ್ವಹಿಸಬೇಕಿದ್ದ ಸಿಆರ್‌ಪಿಎಫ್ ಯೋಧರನ್ನು ಒಟ್ಟಾಗಿಯೇ ಕರೆದುಕೊಂಡು ಬರಲಾಗುತ್ತಿತ್ತು. ನಾನು ಪುಲ್ವಾಮಾ ಜಿಲ್ಲೆಯಲ್ಲಿದ್ದ ಬೆಟಾಲಿಯನ್ನಲ್ಲಿ ಕರ್ತವ್ಯ ನಿರ್ವಹಿಸಬೇಕಾದ್ದರಿಂದ ಕಾದಿಕುಂಡ ಎಂಬ ಬಳಿ ಬಸ್ಸು ಬದಲಾಯಿಸಿದೆ. ಕಾದಿಕುಂಡದಲ್ಲಿ ಬಸ್ ಬದಲಾಯಿಸಿ ಮತ್ತೊಂದು ಬಸ್ ಏರಿದ್ದೆ. ದುರಂತವೆಂದರೆ, ನಾನು ಬಸ್ಸಿನಿಂದ ಇಳಿದ ಕೇವಲ 30 ನಿಮಿಷದಲ್ಲಿ ಈ ದುರ್ಘಟನೆ ನಡೆದಿದ್ದು, ಅದೇ ಬಸ್ಸಿಗೆ ಉಗ್ರನ ವಾಹನ ಬಂದು ಅಪ್ಪಳಿಸಿತ್ತು. ಈ ಬಸ್ಸು ಸ್ಫೋಟಗೊಂಡಾಗ ನಾನಿದ್ದ ವಾಹನ ಕೇವಲ 20 ಅಡಿ ಅಂತರದಲ್ಲಿತ್ತು. ಈ ಸ್ಫೋಟ ಎಷ್ಟು ತೀವ್ರವಾಗಿತ್ತು ಎಂದರೆ, ನಮ್ಮ ಬಸ್ಸಿನ ಗಾಜುಗಳು ಕೂಡ ಒಡೆದವು.

ಈ ಘಟನೆ ನಡೆದಾಗ ನಮ್ಮ ಬಳಿ ಯಾವುದೇ ಶಸ್ತ್ರಾಸ್ತ್ರ ಇರಲಿಲ್ಲ. ನಾವು ರಜೆಯಿಂದ ಕರ್ತವ್ಯಕ್ಕೆ ವಾಪಸಾಗುತ್ತಿದ್ದ ಯೋಧರಾಗಿದ್ದರಿಂದ ಶಸ್ತ್ರಾಸ್ತ್ರ ನೀಡಿರಲಿಲ್ಲ. ಬದಲಿಗೆ ಪ್ರತಿ ಬಸ್ಸಿನಲ್ಲಿ ಶಸ್ತ್ರಾಸ್ತ್ರದೊಂದಿಗೆ ತಲಾ ಇಬ್ಬರು ಸೈನಿಕರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಕಣ್ಣಾರೆ ಕಂಡ ಸ್ಫೋಟದ ಘಟನೆಯಿಂದ ಇನ್ನೂ ಹೊರಗೆ ಬರಲು ಆಗುತ್ತಿಲ್ಲ ಎಂದರು.

- ಶ್ರೀಕಾಂತ್ ಎನ್ ಗೌಡಸಂದ್ರ 

Follow Us:
Download App:
  • android
  • ios