Asianet Suvarna News Asianet Suvarna News

ಬರಿಕೈಯಲ್ಲಿ ಕೊಳೆತ ಶವಗಳನ್ನು ಹೊರತೆಗೆದ ಯೋಧ

ಕೊಡಗಿನಲ್ಲಿ ಪ್ರವಾಹ ಪರಿಸ್ಥಿತಿಯಿಂದ ಎದುರಾದ ದುಸ್ಥಿತಿಯಿಂದ ಜನರು ಇನ್ನೂ ಕೂಡ ಚೇತರಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು ಇದೀಗ ಯೋಧರೊಬ್ಬರು ಸ್ವಯಂ ಪ್ರೇರಿತರಾಗಿ ರಜೆ ತೆಗೆದುಕೊಂಡು ಬಂದು ಜನರ ನೆರವಿಗೆ ನಿಂತಿದ್ದಾರೆ. 

Rescue Work Continued In Flood Hit Kodagu
Author
Bengaluru, First Published Aug 30, 2018, 8:58 AM IST | Last Updated Sep 9, 2018, 8:47 PM IST

ಮಡಿಕೇರಿ :  ಕೊಡಗಿನ ಪ್ರಕೃತಿ ವಿಕೋಪದ ಪರಿಸ್ಥಿತಿಯನ್ನು ಮಾಧ್ಯಮಗಳಲ್ಲಿ ಗಮನಿಸಿದ ಯೋಧರೊಬ್ಬರು ಸ್ವಯಂಪ್ರೇರಿತರಾಗಿ ರಜೆ ಮಾಡಿ ಹುಟ್ಟೂರಿಗೆ ಆಗಮಿಸಿದ್ದು ಅವಿರತವಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಣ್ಣಿನಡಿಯಲ್ಲಿ ಹೂತು ಹೋಗಿದ್ದ ಶವಗಳನ್ನು ಬರಿಗೈನಲ್ಲೇ ಮೇಲೆತ್ತಿರುವ ಅವರು, ಅಪಾಯಕಾರಿ ಪ್ರದೇಶದಲ್ಲಿ ಜೀವದ ಹಂಗು ತೊರೆದು ಶ್ವಾನವೊಂದನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.

ಹುಬ್ಬಳ್ಳಿಯಲ್ಲಿ 28ನೇ ಕರ್ನಾಟಕ ಬೆಟಾಲಿಯನ್‌ನ ಎನ್‌ಸಿಸಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕೊಡಗಿನ ಮಾದಾಪುರ ಸಮೀಪದ ಹಟ್ಟಿಹೊಳೆ ಹಡಗೇರಿಯ ನಿವಾಸಿ ಸುಬೇದಾರ್‌ ಮೇಜರ್‌ ಕುಟ್ಟಂಡ ಯು. ಬೋಪಣ್ಣ ಅವರೇ ತಾಯ್ನಾಡಿನ ಸಂಕಷ್ಟಕ್ಕೆ ಕರೆಗೊಟ್ಟಯೋಧ.

ಪ್ರಕೃತಿ ವಿಕೋಪದಿಂದ ಒಂದೆಡೆ ಹಡಗೇರಿಯಲ್ಲಿದ್ದ ತನ್ನ ಮನೆಗೆ ಹಾನಿಯಾಗಿದೆ. ಮತ್ತೊಂದೆಡೆ ತನ್ನ ಪತ್ನಿಯ ಊರು ಕಾಲೂರಿನಲ್ಲೂ ಮನೆ ನೆಲಸಮವಾಗಿದೆ. ಆದರೂ ತಮ್ಮ ವೈಯಕ್ತಿಕ ಸಮಸ್ಯೆಗಳನ್ನೆಲ್ಲ ಬದಿಗಿರಿಸಿ ಕೊಡಗಿನ ಜನರಿಗಾಗಿ ಹಗಲಿರುಳು ಎನ್ನದೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವುದು ಶ್ಲಾಘನೆಗೆ ಪಾತ್ರವಾಗಿದೆ.

ಆ.20ರಂದು ಹುಬ್ಬಳ್ಳಿಯಿಂದ ಕೊಡಗಿಗೆ ಆಗಮಿಸಿದ ಬೋಪಣ್ಣ ಆರಂಭದಲ್ಲಿ ಪರಿಹಾರ ಕೇಂದ್ರಗಳಿಗೆ ಆಹಾರ ಸಾಮಗ್ರಿಗಳನ್ನು ತಲುಪಿಸುವ ಕೆಲಸ ಮಾಡಿದ್ದರು. ನಂತರ ಮಡಿಕೇರಿಯಲ್ಲಿದ್ದ ಸೇನಾ ತಂಡದವರೊಂದಿಗೆ ಸೇರಿ ಪ್ರಕೃತಿ ವಿಕೋಪಕ್ಕೆ ತುತ್ತಾಗಿ ನಾಪತ್ತೆಯಾದವರು, ಮಣ್ಣಿನಡಿಯಲ್ಲಿ ಸಿಲುಕಿದ್ದ ಶವಗಳನ್ನು ಪತ್ತೆಹಚ್ಚುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡರು.

ಬರಿಗೈನಲ್ಲೇ ಕಾರ್ಯಾಚರಣೆ:  ಅಪಾಯ ಸ್ಥಿತಿಯಲ್ಲಿದ್ದ ಮಡಿಕೇರಿ ತಾಲೂಕಿನ ಮಕ್ಕಂದೂರಿನ ಹೆಮ್ಮೆತ್ತಾಳು ಗ್ರಾಮದಲ್ಲಿ ಶವ ಶೋಧ ಕಾರ್ಯಾಚರಣೆಗೆ ಇಳಿದರು. ಹಲವು ಗಂಟೆಗಳ ಕಾರ್ಯಾಚರಣೆ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ವೇಳೆ ಒಂದು ಜಾಗದಲ್ಲಿ ನೊಣಗಳು ಓಡಾಡುತ್ತಿದ್ದನ್ನು ಕಂಡು ಕಾರ್ಯಾಚರಣೆ ನಡೆಸಿ ತಾಯಿ- ಮಗನ ಶವವನ್ನು ಪತ್ತೆಹಚ್ಚಿದ್ದರು. ದೇಹ ಕೊಳೆತು ಹೋಗಿತ್ತು. ಗ್ಲೌಸ್‌ ಹಾಗೂ ಮಾಕ್ಸ್‌ ಇಲ್ಲದಿದ್ದರೂ ಬೋಪಣ್ಣ ಅವರು ಸೇನಾ ತಂಡದೊಂದಿಗೆ ಬರಿಗೈನಲ್ಲೇ ಮಣ್ಣಿನೊಳಗಿಂದ ಶವವನ್ನು ಹೊರ ತೆಗೆದರು. ಶವವನ್ನು ಹಗ್ಗದಲ್ಲಿ ಕಟ್ಟಿಎಳೆದು ಕುಟುಂಬಸ್ಥರಿಗೆ ಒಪ್ಪಿಸಿದರು. ಮತ್ತೊಂದೆಡೆ ಉದಯಗಿರಿಯಲ್ಲಿ ಸ್ಥಳೀಯರೊಂದಿಗೆ ಸೇರಿ ಸಾಬು ಎಂಬವರ ಮೃತದೇಹ ಪತ್ತೆಹಚ್ಚುವಲ್ಲೂ ಯಶಸ್ವಿಯಾಗಿದ್ದರು.

ನಾನು ಸುಮ್ಮನೆ ಸತ್ತು ಹೋಗಿದ್ದರೂ ನನಗೆ ಅಷ್ಟುಮಹತ್ವ ಬರುತ್ತಿರಲಿಲ್ಲ. ಆದರೆ ನನ್ನ ತಾಯ್ನಾಡಿನ ಜನರಿಗಾಗಿ, ಅವರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾಗ ನನಗೆ ಏನೇ ಆಗಿದ್ದರೂ ಆ ಸಾವಿಗೊಂದು ಅರ್ಥ ಬರುತ್ತಿತ್ತು. ಹಾಗಾಗಿ ನಾನು ಜೀವದ ಹಂಗನ್ನು ತೊರೆದು ಕಾರ್ಯಾಚರಣೆಗಿಳಿದೆ. ನನ್ನ ಕೆಲಸಕ್ಕೆ 15 ದಿನ ರಜೆ ಹಾಕಿ ನನ್ನ ಊರಿನ ಜನರ ಸೇವೆ ಮಾಡಿದ್ದೇನೆ. ಈಗ ಕಾರ್ಯಾಚರಣೆ ಮುಗಿದಿದ್ದು, ಹಟ್ಟಿಹೊಳೆಯಲ್ಲಿ ಹಾನಿಗೀಡಾಗಿರುವ ನನ್ನ ಮನೆಯನ್ನು ನೋಡಿಕೊಂಡು ಮತ್ತೆ ಕೆಲಸಕ್ಕೆ ತೆರಳುತ್ತೇನೆ ಎನ್ನುತ್ತಾರೆ ಬೋಪಣ್ಣ.

ಶ್ವಾನ ರಕ್ಷಣೆ: ಮಡಿಕೇರಿ ತಾಲೂಕಿನ ಹೆಮ್ಮೆತ್ತಾಳು ಗ್ರಾಮದಲ್ಲಿ ತಾಯಿ- ಮಗನ ಶವ ಪತ್ತೆಹಚ್ಚುವ ಕಾರ್ಯಾಚರಣೆಯ ವೇಳೆ ಶ್ವಾನವೊಂದು ಮನೆಯೊಳಗೆ ಚೀರಾಡುತ್ತಿದ್ದದನ್ನು ಕಂಡರು. ಮನೆಗೆ ಹೋಗಲು ಯಾವುದೇ ವ್ಯವಸ್ಥೆ ಇರಲಿಲ್ಲ. ಆದರೂ ಬೋಪಣ್ಣ ತಮ್ಮ ಜೀವದ ಹಂಗು ತೊರೆದು ಮನೆಯ ಮೇಲ್ಛಾವಣಿಯನ್ನು ಹೊಡೆದು ಶ್ವಾನವನ್ನು ರಕ್ಷಿಸಿ ಮಾನವೀಯತೆ ಮೆರೆದರು.

ಯಾರೂ ತೆರಳಲಾಗದ ಪ್ರದೇಶಕ್ಕೆ ತೆರಳಿ ಶವಗಳನ್ನು ಹುಡುಕಾಟ ನಡೆಸಿದ್ದೇವೆ. ಮೃತದೇಹ ಪತ್ತೆಹಚ್ಚಿ ಕುಟುಂಬಸ್ಥರಿಗೆ ನೀಡಿ ಅಂತ್ಯಕ್ರಿಯೆ ಮಾಡುವುದು ದೊಡ್ಡ ಕಾರ್ಯ. ನನ್ನ ರಜೆಯ ದಿನಗಳನ್ನು ಹುಟ್ಟೂರು ಕೊಡಗಿಗೆ ಮೀಸಲಿಟ್ಟು ಸೇವೆ ಮಾಡಿದ ನೆಮ್ಮದಿ ನನಗಿದೆ.

-ಕುಟ್ಟಂಡ ಯು. ಬೋಪಣ್ಣ, ಯೋಧ

ವಿಘ್ನೇಶ್‌ ಎಂ. ಭೂತನಕಾಡು

Latest Videos
Follow Us:
Download App:
  • android
  • ios