ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕಾನೂನು ಮೂಲಕ ಕಡಿವಾಣ ತರುವ ಬಹು ನಿರೀಕ್ಷಿತ ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ (ರೇರಾ) ರಾಜ್ಯದಲ್ಲಿ ಜಾರಿ ವಿಳಂಬವಾಗಲಿದೆ.

ಬೆಂಗಳೂರು (ಮೇ.05): ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕಾನೂನು ಮೂಲಕ ಕಡಿವಾಣ ತರುವ ಬಹು ನಿರೀಕ್ಷಿತ ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ (ರೇರಾ) ರಾಜ್ಯದಲ್ಲಿ ಜಾರಿ ವಿಳಂಬವಾಗಲಿದೆ.

ದೇಶದ 13 ರಾಜ್ಯಗಳಲ್ಲಿ ರೇರಾ ಕಾಯ್ದೆ ಜಾರಿಯಾಗಿದ್ದು, ಇತ್ತೀಚಿಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಮೇ 15 ಒಳಗಾಗಿ ಕಾಯ್ದೆ ಜಾರಿಗೊಳಿಸುವಂತೆ ಸೂಚಿಸಿದ್ದರು. ಇದಕ್ಕೆ ಅಧಿಕಾರಿಗಳೂ ಒಪ್ಪಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ರೇರಾ ಕಾಯ್ದೆ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆ ಇತ್ತು. ಆದರೆ, ಸಂಪುಟ ಸಭೆಯಲ್ಲಿ ರೇರಾ ಚರ್ಚೆಯಾಗಿಲ್ಲ. ಬದಲಾಗಿ ಕಾಯ್ದೆ ರಚನೆ ಇನ್ನೂ ನಗರಾಭಿವೃದ್ಧಿ ಇಲಾಖೆಯಲ್ಲೇ ಇದೆ. ಹೀಗಾಗಿ ಕಾಯ್ದೆ ಜಾರಿ ವಿಳಂಬವಾಗುವ ಸಾಧ್ಯತೆ ಇದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಡಿ.ಬಿ. ಜಯಚಂದ್ರ, ರೇರಾ ಕಾಯ್ದೆ ಜಾರಿ ಸಂಬಂಧ ನಿಯಮ ರೂಪಿಸುವ ಪ್ರಕ್ರಿಯೆ ನಡೆಸಲಾಗಿದ್ದು, ಅಂತಿಮ ಅಧಿಸೂಚನೆ ಸಿದ್ಧಪಡಿಸಬೇಕಿದೆ. ಮುಂದಿನ 10 ದಿನಗಳಲ್ಲಿ ಕಾಯ್ದೆ ಬಗ್ಗೆ ಅಧಿಸೂಚನೆ ಹೊರಡಿಸಲಾಗುವುದು ಎಂದರು. ಕಾಯ್ದೆಗೆ ಸಂಬಂಧಿಸಿದಂತೆ ಕಾನೂನು ಇಲಾಖೆಯಿಂದ ಒಪ್ಪಿಗೆ ನೀಡಲಾಗಿದೆ. ಸದ್ಯ ನಗರಾಭಿವೃದ್ಧಿ ಇಲಾಖೆಯಲ್ಲಿ ಕಡತವಿದ್ದು, ಅಲ್ಲಿಂದ ಅನುಮೋದನೆಯಾಗಿ ಬರಬೇಕಿದೆ. ಏನಾದರೂ ಬದಲಾವಣೆ ಇದ್ದರೂ ಅವರೇ ಮಾಡಬೇಕಿದೆ. ಆದ್ದರಿಂದ ಸದ್ಯದಲ್ಲೇ ಕಾಯ್ದೆ ಜಾರಿಯಾಗಲಿದೆ ಎಂದು ಅವರು ಹೇಳಿದರು.