ವಾಷಿಂಗ್ಟನ್(ಸೆ.21): ಗಣೇಶನನ್ನು ತನ್ನ ಜಾಹೀರಾತಿನಲ್ಲಿ ವ್ಯಂಗ್ಯವಾಗಿ ಬಳಸಿಕೊಂಡಿದ್ದಕ್ಕಾಗಿ ಅಮೆರಿಕದ ಆಡಳಿತಾರೂಢ ರಿಪಬ್ಲಿಕನ್ ಪಕ್ಷ ಹಿಂದೂಗಳ ಕ್ಷಮೆ ಕೋರಿದೆ. ಇತ್ತೀಚೆಗೆ ಜರುಗಿದ ಗಣೇಶ ಚತುರ್ಥಿಯ ದಿನ ಪತ್ರಿಕೆಗಳಲ್ಲಿ ನೀಡಲಾಗಿದ್ದ ಜಾಹೀರಾತಿನಲ್ಲಿ ಕತ್ತೆಯ ಮೇಲೆ ಕೂತಿದ್ದ ಗಣೇಶನ ಕಾಲ್ಪನಿಕ ಚಿತ್ರ ಪ್ರಕಟಿಸಲಾಗಿತ್ತು.

ರಿಪಬ್ಲಿಕನ್ ಪಕ್ಷದ ಗುರುತು ಆನೆ ಆಗಿದ್ದು, ವಿಪಕ್ಷ ಡೆಮಾಕ್ರಾಟ್ ನ ಗುರುತು ಕತ್ತೆ ಆಗಿರುವ ಹಿನ್ನೆಲೆಯಲ್ಲಿ, ಈ ಚಿತ್ರದ ಕೆಳಗಿನ ಅಡಿಬರಹದಲ್ಲಿ 'ಮತದಾರರೇ ನಿಮಗೆ ಕತ್ತೆ ಬೇಕೋ, ಆನೆ ಬೇಕೋ? ನೀವೇ ಆರಿಸಿರಿ' ಎಂದು ಲೇವಡಿ ಮಾಡಲಾಗಿತ್ತು.

ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಅಮೆರಿಕದ ಹಿಂದೂ ಸಮುದಾಯ, ಗಣೇಶನ ಕುರಿತು ಅವಹೇಳನಕಾರಿ ವ್ಯಂಗ್ಯಚಿತ್ರ ಪ್ರಕಟಿಸಿ ನಮ್ಮ ಭಾವನೆಗಳಿಗೆ ಧಕ್ಕೆ ತಂದ ರಿಪಬ್ಲಿಕನ್ ಪಕ್ಷ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿತ್ತು.

ಕೂಡಲೇ ತನ್ನ ತಪ್ಪಿನ ಅರಿವಾಗಿ ಈ ವ್ಯಂಗ್ಯಚಿತ್ರವನ್ನು ವಾಪಸ್ ಪಡೆದಿರುವ ರಿಪಬ್ಲಿಕನ್ ಪಕ್ಷ, ಹಿಂದೂಗಳ ಭಾವನೆಗಳಿಗ ಧಕ್ಕೆ ತಂದಿದ್ದಕ್ಕೆ ಬೇಷರತ್ ಕ್ಷಮೆ ಕೋರಿದೆ.