ಬೆಂಗಳೂರು :  ನಮ್ಮ ಮೆಟ್ರೋದ ನೇರಳೆ ಮಾರ್ಗದ ಟ್ರಿನಿಟಿ ನಿಲ್ದಾಣದ ಬಳಿಯಲ್ಲಿ ವಯಡಾಕ್ಟ್ನಲ್ಲಿ ಹನಿಕೂಂಬಿಂಗ್‌ ಕಂಡು ಬಂದಿರುವ ಕುರಿತು ನಡೆಯಲಿರುವ 8ರಿಂದ 10 ದಿನಗಳ ಕಾಮಗಾರಿಯಿಂದಾಗಿ ಎಂ.ಜಿ.ರಸ್ತೆಯಿಂದ ಬೈಯಪ್ಪನಹಳ್ಳಿ ಮಾರ್ಗದಲ್ಲಿ ಕೊನೆಯ ಎರಡು ದಿನಗಳ ಕಾಲ ರೈಲು ಸಂಚಾರ ಸ್ಥಗಿತಗೊಳ್ಳಲಿದೆ.

ದೆಹಲಿ ಮೆಟ್ರೋ ಯೋಜನೆಯ ಹಿರಿಯ ಎಂಜಿನಿಯರ್‌ಗಳು ವಯಾಡಾಕ್‌ನಲ್ಲಿರುವ ಬಿರುಕಿಗೆ ಕಾರಣವೇನು ಎಂಬುದನ್ನು ಪರಿಶೀಲನೆ ನಡೆಸಲಿದ್ದಾರೆ. ಸರಿ ಪಡಿಸುವುದಕ್ಕಾಗಿ ಅನುಸರಿಸಬೇಕಾದ ವಿಧಾನಗಳನ್ನು ವಿವರಿಸಲಿದ್ದಾರೆ. ಅವರ ಸಲಹೆಗಳನ್ನು ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ(ಐಐಎಸ್‌ಸಿ) ಎಂಜಿನಿಯರ್‌ಗಳು ಹಾಗೂ ಹಿರಿಯ ತಜ್ಞರು ಪರಿಶೀಲಿಸಿ ಸಲಹೆ ಮತ್ತು ಸೂಚನೆಗಳನ್ನು ನೀಡಲಿದ್ದಾರೆ. ನಂತರ ಕಾಮಗಾರಿ ಪ್ರಾರಂಭಿಸಲಾಗುವುದು. ಸುಮಾರು 10 ದಿನಗಳ ಕಾಲ ನಡೆಯುವ ಕಾಮಗಾರಿಯಲ್ಲಿ ಕೊನೆಯ ಎರಡು ದಿನಗಳು ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಅಜಯ್‌ ಸೇಠ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ನಮ್ಮ ಮೆಟ್ರೋ ಸಂಸ್ಥೆಯಲ್ಲಿ ನುರಿತ ಎಂಜಿನಿಯರ್‌ಗಳಿದ್ದಾರೆ. ದೆಹಲಿ ಮೆಟ್ರೋ ಹಾಗೂ ಐಐಎಸ್‌ಸಿ ತಜ್ಞರಿಂದ ಸಲಹೆಗಳನ್ನು ಮಾತ್ರ ಪಡೆದು ನಾವೇ ಕಾಮಗಾರಿ ನಡೆಸಲಿದ್ದೇವೆ ಎಂದು ಅವರು ವಿವರಿಸಿದರು.

ಹಿರಿಯ ತಂತ್ರಜ್ಞರಿಂದ ಪರಿಶೀಲನೆ:

ಹನಿಕೂಂಬ್‌ ಕಂಡು ಬಂದಿರುವ ಟ್ರಿನಿಟಿ ನಿಲ್ದಾಣವನ್ನು ಗುರುವಾರ ಬೆಳಗ್ಗೆ ಮೂರು ತಂಡಗಳಲ್ಲಿ ಪರಿಶೀಲನೆ ನಡೆಸಿರುವ ಬಿಎಂಆರ್‌ಸಿಎಲ್‌ನ ತಾಂತ್ರಿಕ ವಿಭಾಗದ ಹಿರಿಯ ಎಂಜಿನಿಯರ್‌ಗಳು ಈ ಸಮಸ್ಯೆಗೆ ಕಾರಣ ಮತ್ತು ಅದನ್ನು ಸರಿಪಡಿಸುವುದರ ಬಗ್ಗೆ ಚರ್ಚೆ ನಡೆಸಿದರು.

10 ವರ್ಷದ ಹಿಂದಿನ ಕಾಮಗಾರಿ:

ಎಂ.ಜಿ.ರಸ್ತೆ-ಬೈಯ್ಯಪ್ಪನಹಳ್ಳಿ ಮಾರ್ಗದ ಕಾಮಗಾರಿಯನ್ನು ನವಯುಗ ಕಂಪನಿಗೆ ಟೆಂಡರ್‌ ನೀಡಲಾಗಿತ್ತು. 2007ರಲ್ಲಿ ಕಾಮಗಾರಿ ಆರಂಭಿಸಿ 2009-2010ರಲ್ಲಿ ಪೂರ್ಣಗೊಳಿಸಿತು. 2011ರಿಂದ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ಜೊತೆಗೆ ಎರಡ ವರ್ಷಗಳ ಕಾಲ ಮಾರ್ಗವನ್ನು ನಿರ್ವಹಣೆಯನ್ನು ಅದೇ ಕಂಪೆನಿ ಮಾಡಿತ್ತು. ಆ ಸಂದರ್ಭದಲ್ಲಿ ಯಾವುದೇ ದೋಷ ಕಂಡು ಬಂದಿರಲಿಲ್ಲ. ಆದರೆ, ಕಾಮಗಾರಿ ಪೂರ್ಣಗೊಂಡ ಕೇವಲ 10 ವರ್ಷಗಳಲ್ಲೇ ವಯಾಡಕ್ಟ್ನಲ್ಲಿ ಕಾಂಕ್ರಿಟ್‌ ಶಿಥಿಲವಾಗಿದೆ. ಕಳಪೆ ಕಾಮಗಾರಿ ನಡೆದಿರುವುದು ಬೆಳಕಿಗೆ ಬಂದಿದೆ.

ಕಂಪನಿ ವಿರುದ್ಧ ಕ್ರಮ ಇಲ್ಲ:

ಈ ಮಾರ್ಗದಲ್ಲಿ ಕಾಮಗಾರಿ ನಡೆಸಿದ್ದ ನವಯುಗ ಕನ್‌ಸ್ಟ್ರಕ್ಷನ್‌ ಕಂಪನಿಗೆ ವಿಧಿಸಿದ್ದ ಷರತ್ತುಗಳನ್ನು ಪೂರೈಸಿದೆ. ಅಲ್ಲದೆ, ಎರಡು ವರ್ಷ ನಿರ್ವಹಣೆ ಮಾಡಿರುವುದರಿಂದ ಆ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಅವಕಾಶ ಇಲ್ಲ ಎಂದು ಅಜಯ್‌ ಸೇಠ್‌ ಸ್ಪಷ್ಟಪಡಿಸಿದರು.

2 ಗಂಟೆ ರೈಲು ಸಂಚರಿಸಲಿಲ್ಲ!

ವಯಡಾಕ್ಟ್ನಲ್ಲಿ ಹನಿಕೂಂಬಿಂಗ್‌ ಕಾಣಿಸಿಕೊಂಡಿದ್ದ ಪರಿಣಾಮ ಮೆಟ್ರೋ ಎಂಜಿನಿಯರ್‌ಗಳು ಪರಿಶೀಲನೆ ನಡೆಸಲು ಗುರುವಾರ ಎಂಜಿ ರಸ್ತೆ- ಬೈಯಪ್ಪನಹಳ್ಳಿ ಮಾರ್ಗದಲ್ಲಿ ಬೆಳಗ್ಗೆ 5ರಿಂದ 7ರವರೆಗೂ ಸ್ಥಗಿತಗೊಳಿಸಲಾಗಿತ್ತು. ಟ್ರಿನಿಟಿ, ಹಲಸೂರು, ಇಂದಿರಾನಗರ, ಸ್ವಾಮಿ ವಿವೇಕಾನಂದ, ಬೈಯ್ಯಪ್ಪನಹಳ್ಳಿ ನಿಲ್ದಾಣಗಳು ಬಾಗಿಲು ಮುಚ್ಚಿದ್ದವು. ನಿಲ್ದಾಣಕ್ಕೆ ಬಂದ ಪ್ರಯಾಣಿಕರಿಗೆ ರೈಲು ಸಂಚಾರವಿಲ್ಲವೆಂದು ತಿಳಿಸಲಾಯಿತು. ಪರಿಣಾಮ ಬಸ್‌ ಹಾಗೂ ಆಟೋಗಳನ್ನು ಅವಲಂಬಿಸಬೇಕಾಯಿತು.

ನಮ್ಮ ಮೆಟ್ರೋ ಮಾರ್ಗದ ಮೇಲು ರಸ್ತೆಯ ವಯಾಡಕ್ಟ್ ಬುಧವಾರ ಒಂದು ಕಡೆ ಆಧಾರಸ್ಥಂಬವಾಗಿ ಕಬ್ಬಿಣದ ನಿಲ್ಲಿಸಲಾಗಿತ್ತು. ಗುರುವಾರ ಮತ್ತೊಂದು ಕಡೆ ಆಧಾರಸ್ಥಂಬ ನಿರ್ಮಿಸುವ ಕಾಮಗಾರಿ ನಡೆಯುತ್ತಿತ್ತು. ಪರಿಣಾಮ ಎಂಜಿ ರಸ್ತೆಯಲ್ಲಿನ ಸಂಚಾರ ದಟ್ಟಣೆ ಕಾಣಿಸಿಕೊಂಡು ವಾಹನ ಸವಾರರು ಪರದಾಡಿದರು.