ಬೇನಾಮಿ ಕಾಯ್ದೆಯಡಿ ಈ ಆಸ್ತಿಗಳ ದಾಖಲೆ ಪರಿಶೀಲನೆ
ನವದೆಹಲಿ: ಬೇನಾಮಿ ಆಸ್ತಿಗಳ ಮೇಲೆ ಗದಾಪ್ರಹಾರ ಮಾಡಲು ನಿರ್ಧರಿಸಿರುವ ಆದಾಯ ತೆರಿಗೆ ಇಲಾಖೆ, 30 ಲಕ್ಷ ರು.ಗಿಂತ ಹೆಚ್ಚು ಮೌಲ್ಯಕ್ಕೆ ನೋಂದಣಿಯಾಗಿರುವ ಆಸ್ತಿ ಮತ್ತು ಆ ಆಸ್ತಿಗಳ ಮಾಲೀಕರ ಆದಾಯ ತೆರಿಗೆ ವಿವರಗಳನ್ನು ತಾಳೆ ಹಾಕಿ ನೋಡಲು ನಿರ್ಧರಿಸಿದೆ.
ಬೇನಾಮಿ ತಡೆ ಕಾಯ್ದೆಯಡಿ ಈ ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆ ಪರಿಶೀಲನೆ ನಡೆಸಲಿದೆ. ಈ ಕಾಯ್ದೆಯಡಿ ನಮಗೆ ಆಸ್ತಿಗಳ ವಿವರಗಳು ಲಭಿಸಲಿವೆ. ಅವರು ಖರೀದಿಸಿದ ಆಸ್ತಿ ಮೊತ್ತ ಮತ್ತು ಆದಾಯದ ನಡುವೆ ಅಜಗಜಾಂತರ ಕಂಡು ಬಂದರೆ ಅಂಥ ಆಸ್ತಿಗಳ ಮಾಲೀಕರ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧ್ಯಕ್ಷ ಸುಶೀಲ್ ಚಂದ್ರ ಮಂಗಳವಾರ ತಿಳಿಸಿದ್ದಾರೆ.
ಬೇನಾಮಿ ಕಾಯ್ದೆಯಡಿ ಆಸ್ತಿಗಳ ಪರಿಶೀಲನೆಗೆ ಆದಾಯ ತೆರಿಗೆ ಇಲಾಖೆಯ 24 ಘಟಕಗಳನ್ನು ದೇಶದಲ್ಲಿ ಸ್ಥಾಪಿಸಲಾಗಿದೆ. ಇವುಗಳಿಗೆ ವಿವಿಧ ಮೂಲಗಳಿಂದ ಮಾಹಿತಿ ಬರುತ್ತಿದೆ. ಮಾಹಿತಿ ಕ್ರೋಡೀಕರಣ ಮತ್ತು ಪರಿಶೀಲನೆಯನ್ನು ಮತ್ತಷ್ಟು ತೀವ್ರಗೊಳಿಸಲಾಗುತ್ತದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದೇ ವೇಳೆ, ಇತ್ತೀಚೆಗೆ ಕೆಲವು ‘ನಕಲಿ (ಶೆಲ್) ಕಂಪನಿ’ಗಳ ಮಾನ್ಯತೆ ರದ್ದುಗೊಳಿಸಿ ಅವುಗಳ ನಿರ್ದೇಶಕರನ್ನು ‘ಅನರ್ಹ ನಿರ್ದೇಶಕರು’ ಎಂದು ಘೋಷಿಸಲಾಗಿದೆ. ಈ ಕಂಪನಿಗಳ ಆಸ್ತಿಪಾಸ್ತಿಗಳ ವಿವರಗಳನ್ನೂ ಬೇನಾಮಿ ಕಾಯ್ದೆಯಡಿ ಪರಿಶೀಲಿಸಲಾಗುತ್ತಿದೆ. ಕಪ್ಪುಹಣವನ್ನು ಬಿಳಿ ಮಾಡಿಕೊಳ್ಳುವ ಎಲ್ಲ ವಿಧಾನಗಳನ್ನು ನಾವು ನಾಶಗೊಳಿಸಲಿದ್ದೇವೆ ಎಂದು ಘಂಟಾಘೋಷವಾಗಿ ಹೇಳಿದರು.
ಆದಾಯ ತೆರಿಗೆ ಇಲಾಖೆ ಈವರೆಗೆ 621 ಆಸ್ತಿಗಳನ್ನು ವಶಪಡಿಸಿಕಂಡು ಬೇನಾಮಿ ಕಾಯ್ದೆಯಡಿ ತನಿಖೆಗೊಳಪಡಿಸಿದ್ದಾರೆ. ಈ ಆಸ್ತಿಗಳ ಒಟ್ಟು ಮೊತ್ತ 1800 ಕೋಟಿ ರು. ಎಂದವರು ತಿಳಿಸಿದರು. ಬೇನಾಮಿ ತಡೆ ಕಾಯ್ದೆಯನ್ನು ಅಪನಗದೀಕರಣದ ಬಳಿಕ ಪ್ರಮುಖ ಅಸ್ತ್ರ ಮಾಡಿಕೊಳ್ಳುವುದಾಗಿ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.
