ಮದ್ದೂರು(ಆ.24] ಮದ್ಯ ಕೊಡಲು ನಿರಾಕರಿಸಿದ ಬಾರ್‌ಗೆ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ತಾಲೂಕಿನ ಶಿವಪುರದಲ್ಲಿ ಬುಧವಾರ ಮಧ್ಯರಾತ್ರಿ ಕುಡುಕರು ದುಷ್ಕೃತ್ಯ ಮಾಡಿದ್ದಾರೆ.

ಶಿವಪುರದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ ಗೌಡ ಬಾರ್‌ಗೆ ರಾತ್ರಿ 11.15ರ ವೇಳೆಗೆ ಬೈಕ್‌ನಲ್ಲಿ ಬಂದ ಇಬ್ಬರು ಮದ್ಯ ಕೇಳಿದ್ದಾರೆ. ಈ ವೇಳೆ ಅವಧಿ ಮುಗಿದ ಕಾರಣ ಮದ್ಯ ನೀಡಲು ಕ್ಯಾಷಿಯರ್‌ ನಿರಾಕರಿಸಿದ್ದಾರೆ. ಬಳಿಕ ಮಧ್ಯರಾತ್ರಿ 12ರ ವೇಳೆಗೆ ಮತ್ತೆ ಪೆಟ್ರೋಲ್‌ ತುಂಬಿದ ಬಾಟಲಿಗಳೊಂದಿಗೆ ಆಗಮಿಸಿದ ಅದೇ ಇಬ್ಬರು, ಬಾರ್‌ ಮುಂಭಾಗದ ರೋಲಿಂಗ್‌ ಶೆಟರ್‌ ಕೆಳಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.

ಈ ವೇಳೆ ದಟ್ಟವಾದ ಹೊಗೆ ಆವರಿಸಿದ್ದು, ಎಚ್ಚರಗೊಂಡ ಬಾರ್‌ನಲ್ಲಿದ್ದ ಸಿಬ್ಬಂದಿ ಬೆಂಕಿ ನಂದಿಸಿ, ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಬಾರ್‌ ಮುಂಭಾಗದಲ್ಲಿ ಅಳವಡಿಸಿದ್ದ ಸಿಸಿಟಿವಿ ದೃಶ್ಯಾವಳಿಯನ್ನು ನೋಡಿದಾಗ ಮದ್ಯ ದೊರೆಯದೇ ಹಿಂದೆ ಹೋಗಿದ್ದ ಇಬ್ಬರೇ ಬೆಂಕಿ ಹಚ್ಚಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.