Asianet Suvarna News Asianet Suvarna News

ಲಿಂಗಾಯತ ಧರ್ಮ ದಾಖಲೆ ಬಿಡುಗಡೆ

ಮೈಸೂರು ರಾಜ್ಯ ಗಣತಿಯಲ್ಲಿ ಉಲ್ಲೇಖ

Records on Lingayat Religion Released

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಡುತ್ತಿರುವ ಸಚಿವ ಎಂ.ಬಿ.ಪಾಟೀಲ್, 1881ರಲ್ಲಿ ಮೈಸೂರು ರಾಜ್ಯದಲ್ಲಿ ನಡೆದ ಜನಗಣತಿಗೂ ಮುನ್ನ ಲಿಂಗಾಯತವನ್ನು ಪ್ರತ್ಯೇಕ ಧರ್ಮ ಎಂದು ಗುರುತಿಸಲಾಗಿತ್ತು ಎಂಬ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದಾರೆ. ಜೊತೆಗೆ, ಆಗಿನ ಬಾಂಬೆ ಮತ್ತು ಮದ್ರಾಸ್ ರಾಜ್ಯಗಳಲ್ಲಿಯೂ ಸಹ ಲಿಂಗಾಯತವನ್ನು ಪ್ರತ್ಯೇಕವಾಗಿ ಪರಿಗಣಿಸಿದ್ದರು ಎಂಬ ದಾಖಲೆಗಳನ್ನು ಕೂಡ ಅವರು ನೀಡಿದ್ದಾರೆ.

ಮೇಜರ್ ಎ. ಡಬ್ಲೂ. ಸಿ ಲಿಂಡ್ಸೆ ಅವರು 1874ರಲ್ಲಿ ಸಲ್ಲಿಸಿದ ಜನಗಣತಿ ವರದಿಯಲ್ಲಿ ‘ಲಿಂಗಾಯತವನ್ನು ಜಾತಿಯಾಗಿಯೂ ಹಾಗೂ ಧರ್ಮವಾಗಿಯೂ ತಪ್ಪಾಗಿ ಬಳಸಲಾಗುತ್ತಿದೆ. ವಾಸ್ತವವಾಗಿ ಲಿಂಗಾಯತ ಎಂಬುದು ಜಾತಿ ಅಲ್ಲ. ಬದಲಾಗಿ ಲಿಂಗಾಯತ ಅನೇಕ ಜಾತಿಗಳನ್ನು ಒಳಗೊಂಡಿದೆ’ ಎಂದು ಉಲ್ಲೇಖಿಸಿದ್ದಾರೆ.

ಮುಂದುವರೆದು, ವರದಿಯ 174ನೇ ಪ್ಯಾರಾದಲ್ಲಿ ‘ಲಿಂಗಾಯತ’ವನ್ನು ಜಾತಿ ಎಂದು ಹೇಳಲು ಆಗುವುದಿಲ್ಲ. ಲಿಂಗಾಯತ ಅನೇಕ ಜಾತಿಗಳನ್ನು ಒಳಗೊಂಡಿದೆ. ಅನೇಕ ಜನರು ತಮ್ಮ ಜಾತಿ ಹೇಳಿಕೊಂಡು ನಂತರ ಧರ್ಮ ಲಿಂಗಾಯತ ಎಂದು ಹೇಳುತ್ತಾರೆ. ಕೋಲಾರ ಜಿಲ್ಲೆ ಹೊರತು ಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ಇವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಆದರೆ 1881ರ ಆಗಿನ ಮೈಸೂರಿನ ದಿವಾನರಾಗಿದ್ದ ಸಿ. ರಂಗಾಚಾರ್ಲು ಅವರ ಉಸ್ತುವಾರಿಯಲ್ಲಿ ನಡೆದ ಜನಗಣತಿ ವರದಿಯಲ್ಲಿ ಲಿಂಗಾಯತವನ್ನು ಹಿಂದು ಧರ್ಮಕ್ಕೆ ಸೇರ್ಪಡೆ ಮಾಡಿ ಕೇವಲ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಉಪ-ಜಾತಿ ವಿಂಗಡಿಸಲಾಗುತ್ತದೆ. ಉಳಿದಂತೆ ಮುಹಮ್ಮಡನ್ಸ್, ಕ್ರಿಶ್ಚಿಯನ್, ಸಿಖ್, ಜೈನ್, ಬೌದಟಛಿರು, ಬ್ರಹ್ಮೋ, ಪಾರ್ಸಿ ಧರ್ಮಗಳನ್ನು ಗುರುತಿಸಲಾಗುತ್ತದೆ. ಉದ್ದೇಶಪೂರ್ವಕವಾಗಿ ಲಿಂಗಾಯತವನ್ನು

ಪ್ರತ್ಯೇಕ ಧರ್ಮ ಎಂದು ಪರಿಗಣಿಸುವುದಿಲ್ಲ. ಬಹಳ ಆಘಾತಕಾರಿ ಸಂಗತಿ ಎಂದರೆ ಈ ಗಣತಿಯಲ್ಲಿ ಲಿಂಗಾಯತವನ್ನು ಶೂದ್ರ ಗುಂಪಿಗೆ ಸೇರಿಸಲಾಗುತ್ತದೆ. 1871ರ ಜನಗಣತಿಯಲ್ಲಿ ಲಿಂಗಾಯತದ ಉಪ ಜಾತಿಗಳೆಂದು 22 ಜಾತಿಗಳನ್ನು ಗುರುತಿಸಲಾಗಿದ್ದರೆ, 1881ರ ಗಣತಿಯಲ್ಲಿ ಕೇವಲ ಆರು ಜಾತಿಗಳನ್ನು ಉಪಜಾತಿಗಳಾಗಿ ಗುರುತಿಸಲಾಗುತ್ತದೆ. ಲಿಂಗಾಯತ ಉಪ-ಜಾತಿಗಳಾದ ಸಾದರು, ನೊಣಬರು ಮತ್ತು ಹಂಡೆ ಕುರುಬರನ್ನು ಒಕ್ಕಲಿಗ ಉಪಜಾತಿ ಎಂದು ಗುರುತಿಸುವ ಮೂಲಕ ಲಿಂಗಾಯತರ ಸಂಖ್ಯೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಲಾಗಿತ್ತು.

ದಿವಾನ್ ರಂಗಾಚಾರ್ಲು ನಿಧನದ ನಂತರ ಜನಗಣತಿಯ ಅಂತಿಮ ವರದಿಯನ್ನು ಮೈಸೂರು ಸರ್ಕಾರದ ಕಾರ್ಯದರ್ಶಿ ಲೀವಿಸ್ ರೈಸ್ ನೀಡಿದರಾದರೂ, ನಿಧನಕ್ಕೂ ಮುನ್ನವೇ ಬಹುತೇಕ ಜನಗಣತಿ ಕಾರ್ಯ ಪೂರ್ಣಗೊಂಡಿತ್ತು ಎಂದು ಎಂ.ಬಿ. ಪಾಟೀಲ್ ದಾಖಲೆ ಸಹಿತ ತಿಳಿಸಿದ್ದಾರೆ. ವೀರಶೈವ ಆಚರಣೆ, ಅನುಸರಿಸುವ ಪದ್ಧತಿ ಭಿನ್ನವಾಗಿದೆ. ಲಿಂಗಾಯತ ಧರ್ಮದ ಹಾಗೂ ಹಿಂದು ಧರ್ಮಗಳ ನಡುವೆ ಬಹುದೊಡ್ಡ ವ್ಯತ್ಯಾಸವಿದೆ. ಆಚಾರ, ವಿಚಾರ, ತತ್ವಗಳು ಭಿನ್ನವಾಗಿವೆ. ಹಾಗಾಗಿ ವೀರಶೈವರನ್ನು ಲಿಂಗಾಯತರ ಜೊತೆ ಸೇರ್ಪಡೆ ಮಾಡಬಾರದು, ಲಿಂಗಾಯತವನ್ನು ಪ್ರತ್ಯೇಕ ಧರ್ಮ ಎಂದು ಘೋಷಿಸಬೇಕೆಂದು ಎಂ.ಬಿ. ಪಾಟೀಲ್ ಆಗ್ರಹಿಸಿದ್ದಾರೆ.

 

 

Follow Us:
Download App:
  • android
  • ios