ಬೆಂಗಳೂರು [ಜು.26]:  ತಮ್ಮ ವಿರುದ್ಧ ಅನರ್ಹತೆ ಅಸ್ತ್ರ ಬಳಸಿರುವುದು ಸ್ಪೀಕರ್‌ ಮತ್ತು ಕಾಂಗ್ರೆಸ್‌ ಪಕ್ಷದ ಬೆದರಿಕೆ ತಂತ್ರವಾಗಿದೆ ಎಂದು ಆಪಾದಿಸಿರುವ ಮುಂಬೈನಲ್ಲಿರುವ ಅತೃಪ್ತ ಶಾಸಕರು, ಇದರ ವಿರುದ್ಧ ಸುಪ್ರೀಂಕೋರ್ಟ್‌ ಮೊರೆ ಹೋಗಲು ಮುಂದಾಗಿದ್ದಾರೆ. ಇಂಥ ಕ್ರಮಗಳ ಮೂಲಕ ನಮ್ಮನ್ನು ಬೆದರಿಸುವ ಪ್ರಯತ್ನ ಯಶಸ್ಸು ಕಾಣುವುದಿಲ್ಲ ಎಂದೂ ಅವರು ಹೇಳಿದ್ದಾರೆ.

ಇಂಥ ಪ್ರಯತ್ನಗಳು ನಡೆಯಬಹುದು ಎಂಬ ನಿರೀಕ್ಷೆಯಿತ್ತು. ನಾವು ಸ್ಪೀಕರ್‌ ನೀಡಿರುವ ಈ ಅನರ್ಹತೆಯ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ ಮೊರೆ ಹೋಗಲು ನಿರ್ಧರಿಸಿದ್ದೇವೆ ಎಂದು ಅತೃಪ್ತ ಶಾಸಕರ ಆಪ್ತರು ಮಾಹಿತಿ ನೀಡಿದ್ದಾರೆ.

ಈಗ ಮೂವರ ವಿರುದ್ಧ ಅನರ್ಹತೆ ಅಸ್ತ್ರ ಬಳಸಿರುವುದರಿಂದ ಇನ್ನುಳಿದ ಶಾಸಕರು ಆತಂಕಕ್ಕೊಳಗಾಗಿ ವಾಪಸ್‌ ಬರಬಹುದು ಎಂಬ ನಿರೀಕ್ಷೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದ ನಾಯಕರಿಗೆ ಇರಬಹುದು. ಆದರೆ, ವಾಪಸ್‌ ಬರುವುದಿಲ್ಲ ಎಂದು ಮೂಲಗಳು ತಿಳಿಸಿವೆ.