ನವದೆಹಲಿ[ಆ.17]: ಪಕ್ಷಾಂತರ ವಿರೋಧಿ ಕಾಯ್ದೆಯಡಿ ಅನರ್ಹಗೊಂಡ ಆಪ್ ಸರ್ಕಾರದ ಸಚಿವ ಕಪಿಲ್ ಮಿಶ್ರಾ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. 

ದೆಹಲಿಯ ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಸೇರ್ಪಡೆಗೊಂಡ ಕಪಿಲ್ ಮಿಶ್ರಾ ಪ್ರಧಾನಿ ನರೇಂದ್ರ ಮೋದಿಯ ದೃಷ್ಟಿಕೋನ ನನ್ನನ್ನು ಬಿಜೆಪಿಯೆಡೆ ಆಕರ್ಷಿಸಿದೆ. ಮುಂದೆ ತಾನು ದೆಹಲಿಯಲ್ಲಿರುವ ನಕಾರಾತ್ಮಕ ರಾಜಕೀಯವನ್ನು ಹೊಡೆದೋಡಿಸಲು ಶ್ರಮಿಸುತ್ತೇನೆ. ದೆಹಲಿ ಕೂಡಾ ಮೋದಿಯೊಂದಿಗೆ ಹೆಜ್ಜೆ ಇಡಬೇಕು. ಇನ್ಮುಂದೆ ನಾನು ಆಮ್ ಆದ್ಮಿ ಪಕ್ಷದ ಎಲ್ಲಾ ಕಾರ್ಯಕರ್ತರು ಹಾಗೂ ಅಣ್ಣಾ ಚಳುವಳಿಯ ಕಾರ್ಯಕರ್ತರನ್ನು ಭೇಟಿಯಾಗಿ ಬಿಜೆಪಿಗೆ ಸೇರ್ಪಡೆಯಾಗುವಂತೆ ಮನವಿ ಮಾಡುತ್ತೇನೆ ಎಂದಿದ್ದಾರೆ.

ಆಮ್ ಆದ್ಮಿ ಪಕ್ಷದ ಶಾಸಕರಾಗಿದ್ದ ಮಿಶ್ರಾ ಪ್ರಧಾನಿ ಮೋದಿ ಹಾಗೂ ಅಮಿತ್ ಶಾರನ್ನು ಕಟುವಾಗಿ ಟೀಕಿಸುತ್ತಿದ್ದರು. ಪಠಾಣ್ಕೋಟ್ ದಾಳಿ ಬಳಿಕ ಪ್ರಧಾನಿ ಮೋದಿಯನ್ನು 'ISI ಏಜೆಂಟ್' ಎಂದಿದ್ದ ಅವರ ಹೇಳಿಕೆ ಭಾರೀ ವಿವಾದವನ್ನೇ ಸೃಷ್ಟಿಸಿತ್ತು.