ತಮ್ಮೆಲ್ಲಾ ನಿರೀಕ್ಷೆಗಳನ್ನು ಕೇಜ್ರಿವಾಲ್ ಹುಸಿಯಾಗಿಸಿದರು. ತಾವಷ್ಟೇ ಅಲ್ಲದೆ, ಇನ್ನೂ 30ಕ್ಕೂ ಹೆಚ್ಚು ಆಪ್ ಶಾಸಕರು ಕೇಜ್ರಿವಾಲ್'ರಿಂದ ರೋಸಿ ಹೋಗಿದ್ದಾರೆ ಎಂದು ವೇದ್ ಪ್ರಕಾಶ್ ತಿಳಿಸಿದ್ದಾರೆ.
ನವದೆಹಲಿ(ಮಾ. 27): ದಿಲ್ಲಿಯ ಆಪ್ ಶಾಸಕ ವೇದ್ ಪ್ರಕಾಶ್ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಇದರೊಂದಿಗೆ, ದಿಲ್ಲಿಯ ನಗರಪಾಲಿಕೆ ಚುನಾವಣೆಗೆ ಭರದಿಂದ ಸಿದ್ಧತೆ ನಡೆಸುತ್ತಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಶಾಕ್ ಆದಂತಾಗಿದೆ. ವೇದ ಪ್ರಕಾಶ್ ಅವರು ಆಮ್ ಆದ್ಮಿ ತೊರೆದದ್ದಲ್ಲದೇ, ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದಾರೆ.
ಕಾರಣ ಏನು?
ಆಪ್ ಶಾಸಕ ವೇದ್ ಪ್ರಕಾಶ್ ಪ್ರಧಾನಿ ನರೇಂದ್ರ ಮೋದಿಯವರನ್ನ ಸಂತರೆಂದು ಪರಿಗಣಿಸಿದ್ದಾರಂತೆ. "ಸಂತ ನರೇಂದ್ರ ಮೋದಿಯ ನಾಯಕತ್ವದ ಅಡಿಯಲ್ಲಿ ಕೆಲಸ ಮಾಡಲು ವೇದ್ ಪ್ರಕಾಶ್ ಬಿಜೆಪಿ ಸೇರುತ್ತಿದ್ದಾರೆ" ಎಂದು ಬಿಜೆಪಿ ದಿಲ್ಲಿ ವಕ್ತಾರ ತಜಿಂದರ್ ಪಾಲ್ ಬಗ್ಗಾ ಟ್ವೀಟ್ ಮಾಡಿದ್ದಾರೆ.
ವೇದ್ ಪ್ರಕಾಶ್ ಅವರು ಕೇಜ್ರಿವಾಲ್ ಬಗ್ಗೆ ಅತೀವ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮೆಲ್ಲಾ ನಿರೀಕ್ಷೆಗಳನ್ನು ಕೇಜ್ರಿವಾಲ್ ಹುಸಿಯಾಗಿಸಿದರು. ತಾವಷ್ಟೇ ಅಲ್ಲದೆ, ಇನ್ನೂ 30ಕ್ಕೂ ಹೆಚ್ಚು ಆಪ್ ಶಾಸಕರು ಕೇಜ್ರಿವಾಲ್'ರಿಂದ ರೋಸಿ ಹೋಗಿದ್ದಾರೆ ಎಂದು ವೇದ್ ಪ್ರಕಾಶ್ ತಿಳಿಸಿದ್ದಾರೆಂದು ಬಿಜೆಪಿ ವಕ್ತಾರರು ಹೇಳಿದ್ದಾರೆ.
"ಪ್ರಧಾನಿ ಮೋದಿಯವರ ವಿರುದ್ಧ ಆರೋಪ ಮಾಡುವುದು ಕೇಜ್ರಿವಾಲ್'ರ ಏಕೈಕ ಕಾಯಕವಾಗಿತ್ತು; ಕಳೆದ ಎರಡು ವರ್ಷದಲ್ಲಿ ದಿಲ್ಲಿ ಸಿಎಂ ಏನನ್ನೂ ಮಾಡಿಲ್ಲ. ನಾನು ಯಾವ ಹುದ್ದೆಯ ಅಪೇಕ್ಷೆ ಇಲ್ಲದೆ ಬಿಜೆಪಿ ಸೇರುತ್ತಿದ್ದೇನೆ. ಪ್ರಾಮಾಣಿಕವಾಗಿ ಕೆಲಸ ಮಾಡುವುದು ನನ್ನ ಉದ್ದೇಶ" ಎಂದು ವೇದ್ ಪ್ರಕಾಶ್ ತಿಳಿಸಿದ್ದಾರೆನ್ನಲಾಗಿದೆ.
ದಿಲ್ಲಿಯಲ್ಲಿ ಮಹಾನಗರಪಾಲಿಕೆ ಚುನಾವಣೆಗಳು ಏಪ್ರಿಲ್ 23ರಂದು ನಡೆಯಲಿದೆ. ಏಪ್ರಿಲ್ 26ರಂದು ಮತ ಎಣಿಕೆ ನಡೆಯಲಿದೆ. ಎರಡು ವರ್ಷಗಳ ಹಿಂದೆ ದಿಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಬಳಿಕ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ದೇಶದ ರಾಜಧಾನಿಯಲ್ಲಿ ಮೊದಲ ಅಗ್ನಿ ಪರೀಕ್ಷೆ ಇದಾಗಿದೆ.
