ಬೆಂಗಳೂರು (ಆ. 29): ರಾಜ್ಯದಲ್ಲಿ ಮತ್ತೊಂದು ಚುನಾವಣೆ ಬಂದಿತ್ತು. ಪಕ್ಷವನ್ನು ಅಧಿಕಾರಕ್ಕೆ ತರಲು ಕಾಲಿಗೆ ಚಕ್ರವನ್ನು ಕಟ್ಟಿಕೊಂಡು ರಾಜ್ಯವನ್ನು ಸುತ್ತುತ್ತಿದ್ದೆ. ಜನರ ನೋವಿಗೆ ದನಿಯಾಗಲು ಬಯಸಿ ದಿನ ನಿತ್ಯವೂ ಸಾವಿರಾರು ಜನರನ್ನು ಭೇಟಿಯಾಗುತ್ತಿದ್ದೆ. ಎಲ್ಲರದ್ದೂ ಒಂದೊಂದು ಸಮಸ್ಯೆ.

ಎಲ್ಲವನ್ನೂ ಗಮನದಲ್ಲಿಟ್ಟು ಕೇಳುತ್ತಿದ್ದೆ. ನಡುನಡುವೆ ಅವರ ನೋವಿಗೆ ದನಿಯಾಗುತ್ತಿದ್ದೆ. ಎಲ್ಲವನ್ನೂ ಸಮಚಿತ್ತದಿಂದ ಕೂತು ಆಲಿಸುತ್ತಿದ್ದೆ. ಜೊತೆಗೆ ಅವುಗಳನ್ನು ದಾಖಲಿಸಿ ಇಟ್ಟುಕೊಳ್ಳುತ್ತಿದ್ದೆ. ಅನೇಕ ಸಮಸ್ಯೆಗಳ ನಡುವೆ ನನ್ನನ್ನು ತೀವ್ರವಾಗಿ ಕಾಡಿದ್ದು ರೈತರ ಆತ್ಮಹತ್ಯೆ. ಅದರಲ್ಲೂ ನನ್ನ ಮನ ಕರಗಿಸಿದ್ದು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಒಂದು ಘಟನೆ. ಮೇ ತಿಂಗಳ ಬಿರು ಬೇಸಿಗೆಯ ದಿನವದು. ಮತಯಾಚನೆಯೊಂದಿಗೆ ಜನರ ಕಷ್ಟಸುಖಗಳನ್ನು ವಿಚಾರಿಸಿಕೊಳ್ಳುತ್ತಿದ್ದೆ. ಆಗೊಬ್ಬ ಮಹಿಳೆ, ಜನಸಂದಣಿ ನಡುವೆ ಕಷ್ಟಪಟ್ಟು ನುಸುಳಿಕೊಂಡು ನನ್ನ ಕಡೆಗೆ ಬಂದಳು. ದಿಟ್ಟಿಸಿ ನೋಡಿದೆ. ಬಸವಳಿದಿದ್ದಳು.
ಮುಖ ಕಪ್ಪಿಟ್ಟಿತ್ತು. ತಲೆಗೂದಲು ಕೆದರಿತ್ತು. ಹಣೆಯಲ್ಲಿ ಕುಂಕುಮ ಇರಲಿಲ್ಲ.

ಬಳಿ ಬಂದವಳೇ ಕಣ್ಣೀರಿಟ್ಟಳು. ಬದುಕು ಹಿಂಸೆಯಾಗಿದೆ, ನಮ್ಮನ್ನು ಉಳಿಸಿ ಎಂದು ಸೆರಗೊಡ್ಡಿದಳು. ನಡು ನಡುವೆ ನಿಟ್ಟುಸಿರಿಡುತ್ತಾ, ‘ನನ್ನ ಗಂಡ ಕೈಸಾಲ ಮಾಡಿದ್ದ. ಎರಡು ಲಕ್ಷ ರುಪಾಯಿ. ಅದು ಹನುಮಂತನ ಬಾಲದಂಗೆ ನಾಲ್ಕು ಲಕ್ಷ ರುಪಾಯಿಗೆ ಏರಿತ್ತು. ನಿತ್ಯವೂ ಸಾಲಗಾರರ ಕಾಟ. ಕುಂತರೆ ನಿಂತರೆ ಬಿಡದೆ ಕಾಟ ಕೊಡುತ್ತಿದ್ದರು. ಮನೆಯಲ್ಲಿ ಇದ್ದಬದ್ದದ್ದನ್ನೆಲ್ಲ ಎತ್ತಿಕೊಂಡು ಹೋದರು.
ಉಳುವ ಎತ್ತುಗಳನ್ನೂ ಬಿಡಲಿಲ್ಲ. ಹೊಲಕ್ಕೆ ಹೋಗಿ ವಿಷ ಕುಡಿದ..’ ಎನ್ನುತ್ತಲೇ ಎದೆ ಬಡಿಕೊಂಡಳು.

ಮನಸ್ಸಿಗೆ ನೋವಾಯಿತು. ಸರ್ಕಾರ ನಿಮಗೆ ಸಹಾಯ ಮಾಡಲಿಲ್ಲವೇನಮ್ಮ ಎಂದು ಕೇಳಿದೆ. ಅದೇನೇನೋ ಕಾಗದಪತ್ರ ಕೇಳಿದರು. ಅವನ್ನೆಲ್ಲ ಎಲ್ಲಿಂದ ತರಲಿ? ಬಿಡಿಗಾಸೂ ನೆರವು ಸಿಕ್ಕಲಿಲ್ಲ ಎಂದು ಬಿಕ್ಕಿದಳು. ನನ್ನಂತೆ ನನ್ನ ಮಗಳ ಗಂಡನೂ ಶಿವನ ಪಾದ ಸೇರಿದ್ದಾನೆ. ಮೊಮ್ಮಗಳು ಶಾಲೆಗೆ ಹೋಗುತ್ತಿದ್ದಾಳೆ. ಇಡೀ ಹೆಣ್ಣುಸಂತಾನವನ್ನು ಸಾಕುವ ಜವಾಬ್ದಾರಿ ನನ್ನ ಹೆಗಲಿಗೆ ಬಿದ್ದಿದೆ ಎಂದಳು. ಮರುಗಿದೆ. ನಂತರ ಆಕೆಯ ಕಷ್ಟಕ್ಕೆ ತಕ್ಷಣದ ಸಹಾಯ ಮಾಡುವಂತೆ ನನ್ನ ಜೊತೆಯಲ್ಲಿದ್ದವರಿಗೆ ಹೇಳಿದೆ. ಅವಳನ್ನೇ ನೆನೆಯುತ್ತಾ ಮುಂದೆ ನಡೆದೆ.

ಇದು ಅವಳೊಬ್ಬಳ ಕಥೆಯಲ್ಲ. ಇಂಥ ನೂರಾರು ಘಟನೆಗಳು ರಾಜ್ಯದ ಉದ್ದಕ್ಕೂ ಕೇಳಲು, ನೋಡಲು ಸಿಗುತ್ತವೆ. ಆದರೆ, ನಾನು ಆ ಮಳವಳ್ಳಿ ತಾಲೂಕಿನ ರೈತ ಮಹಿಳೆಯ ಮಾತು ಕೇಳಿ ಅಂದೇ ಮನಸ್ಸು ಮಾಡಿದ್ದೆ. ಮುಖ್ಯಮಂತ್ರಿಯಾದ ತಕ್ಷಣವೇ ರೈತರ ಸಾಲಕ್ಕೆ ಪರಿಹಾರ ಕಂಡುಹಿಡಿಯಬೇಕೆಂದು ನಿರ್ಧರಿಸಿದೆ.

ಹುಬ್ಬಳ್ಳಿಯಲ್ಲಿ ನಡೆದ ಘಟನೆ

ಇತ್ತೀಚೆಗೆ ಮುಖ್ಯಮಂತ್ರಿಯಾದ ನಂತರ ಹುಬ್ಬಳ್ಳಿಗೆ ಭೇಟಿ ನೀಡಿದ ವೇಳೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಮನೆಗೆ ಹೋಗಿದ್ದೆ. ಹುಬ್ಬಳ್ಳಿ ಒಂದು ರೀತಿ ನನಗೆ ಎರಡನೇ ಮನೆ ಇದ್ದ ಹಾಗೆ. ಮುಖ್ಯಮಂತ್ರಿಯಾಗಿದ್ದರೂ ನನ್ನೊಂದಿಗೆ ಜನರ ಒಡನಾಟ ತಪ್ಪಿರಲಿಲ್ಲ. ಅಂದು ಕೂಡ ಹುಬ್ಬಳ್ಳಿಯಲ್ಲಿ ನರಗುಂದದ ಮಹಿಳೆಯೊಬ್ಬಳು ನನಗೆ ಸಾಲದ ಇನ್ನೊಂದು ಕರಾಳ ಮುಖದ ದರ್ಶನ ಮಾಡಿಸಿದಳು.

ಈಕೆಗೊಬ್ಬ ಗಟ್ಟಿಮುಟ್ಟಾದ ಮಗನಿದ್ದ. ಮನೆ ಚೆನ್ನಾಗಿ ನಡೆಯುತ್ತಿತ್ತು. ಮನೆಯನ್ನೂ ಕಟ್ಟಿಕೊಂಡಿದ್ದರು. ಇನ್ನೇನು, ಬದುಕು ದಡ ಮುಟ್ಟಿತು ಎನ್ನುವಾಗಲೇ ಒಂದು ಅವಘಡ ಸಂಭವಿಸಿತ್ತು. ಮಗನ ಮೇಲೆ ಮನೆಯ ಗೋಡೆಯೇ ಕುಸಿದಿತ್ತು. ಓಡಾಡಿಕೊಂಡಿದ್ದ ಮಗ ನೆಲ ಹಿಡಿದ. ತೆವಳುತ್ತಿದ್ದ ಮಗನ ಕಂಡು ಮುಮ್ಮಲ ಮರುಗಿದ ತಾಯಿ ಸಾಲ ಮಾಡಿ, ಮಗನ ಕಾಲು ಸರಿಮಾಡಿಕೊಳ್ಳಲು ಹೊರಟಳು. ಅವರ ಬದುಕಿಗೆ ಊರುಗೋಲಾದಬೇಕಿದ್ದ ಮಗ, ಊರುಗೋಲು ಹಿಡಿದಾದರೂ ನಡೆದಾಡುವಂತಾಗಲಿ ಎನ್ನುವ ದಾರುಣ ಸ್ಥಿತಿಯಲ್ಲಿದ್ದ ಆಕೆಗೆ ಸಾಲ ಬೆಳೆದಿದ್ದೇ ಗೊತ್ತಾಗಲಿಲ್ಲ.

ಆದರೆ, ಮಗನ ಸ್ಥಿತಿ ಸುಧಾರಿಸುವುದಕಕ್ಕೂ ಮೊದಲೇ ಸಾಲಗಾರರು ಮನೆ ಬಾಗಿಲು ಬಡಿಯುತ್ತಿದ್ದರು. ಆಕೆ, ಮಗನ ಕಾಲು ಸರಿಮಾಡಿಸಿಕೊಂಡುವಂತೆ ಪರಿಪರಿಯಾಗಿ ಕೇಳಿಕೊಂಡಳು. ಮಗ ಗಟ್ಟಿಮುಟ್ಟಾಗಿದ್ದರೆ ಹೇಗೋ ಸಾಲ ತೀರುತ್ತದೆ. ಅವನಿಗೆ ಮರುಜೀವ ನೀಡುವಂತೆ ಮೊರೆಯಿಟ್ಟಿದ್ದಳು. ಕರುಳ ಕುಡಿಯ ನೋವಿಗೆ ಮಿಡಿಯುತ್ತಿದ್ದ ಆ ತಾಯಿ ಮಾಡಿಕೊಂಡಿದ್ದ ಸಾಲ ನನ್ನ ಕರುಳನ್ನು ಚುರುಗುಟ್ಟಿಸಿತು. ಇಲ್ಲ, ಇನ್ನು ನನಗೆ ತಾಳಿಕೊಳ್ಳುವ ಶಕ್ತಿ ಇಲ್ಲ ಅನಿಸಿತು. ಗಟ್ಟಿ ಮನಸು ಮಾಡಿ ರೈತರು ಮಾಡಿದ್ದ ಸಾಲ ಮನ್ನಾ ಮಾಡಲು ನಿರ್ಧರಿಸಿದೆ.

ಸಾಲ ಮಾಡುವುದು ತಪ್ಪೇನಲ್ಲ

ನಾನು ಎಲ್ಲೇ ಹೋದರೂ ಜನರು ತಮ್ಮ ಕುಂದುಕೊರತೆಗಳನ್ನು ಹೇಳಿಕೊಳ್ಳಲು ನೆರೆಯುತ್ತಾರೆ. ಜನತಾ ದರ್ಶನವೂ ಇದಕ್ಕೆ ಹೊರತಾಗಿಲ್ಲ. ನನ್ನ ಬಳಿ ಬರುವ ಜನರ ಪ್ರಮುಖ ಸಮಸ್ಯೆ ಎಂದರೆ, ಸಾಲದ ಬಾಧೆ. ಮೀಟರ್ ಬಡ್ಡಿಗೋ, ಇಲ್ಲವೇ ಖಾಸಗಿಯವರಿಂದಲೋ ಅಥವಾ ಲೇವಾದೇವಿದಾರರಿಂದಲೋ ಇಂದೋ ನಾಳೆಯೋ ಕೊಟ್ಟುಬಿಟ್ಟರೆ ಆಯಿತು ಎಂದು ಸಾಲ ಮಾಡಿಕೊಂಡು ತೀರಿಸಲು ಆಗದೇ ಒದ್ದಾಡುತ್ತಿರುವವರೇ ಹೆಚ್ಚಾಗಿರುತ್ತಾರೆ.

ಅಬ್ಬಬ್ಬಾ ಎಂದರೆ ಇವರ ಸಾಲ ಒಂದು ಲಕ್ಷ ಇಲ್ಲವೇ ಎರಡು ಲಕ್ಷವನ್ನು ಮೀರಿರುವುದಿಲ್ಲ. ಅದರೆ, ಇವರು ಪಡುವ ಬವಣೆ ಮಾಡಿದ ಸಾಲಕ್ಕಿಂತಲೂ ಅಧಿಕವಾಗಿರುತ್ತದೆ. ಹೀಗಾಗಿ, ಹತಾಶೆಗೊಂಡು ನನ್ನ ಬಳಿ ಬರುತ್ತಾರೆ. ಇದರಲ್ಲಿ ತಪ್ಪೇನೂ ಇಲ್ಲ. ಎಲ್ಲಾ ಚೆನ್ನಾಗಿದ್ದರೆ, ಅವರೇಕೆ ಸಾಲ ಮಾಡುತ್ತಿದ್ದರು ಎಂದು ಅನಿಸುತ್ತದೆ. ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ನನ್ನನ್ನು ಕಂಗೆಡಿಸಿದೆ.

ಇದರ ಮೂಲವನ್ನು ಹುಡುಕಾಡಿದಾಗ ಕಂಡುಬಂದ ಮೊದಲ ಕಾರಣವೆಂದರೆ ಸಾಲ. ಖಾಸಗಿ ಲೇವಾದೇವಿದಾರರಿಂದ ಪಡೆದುಕೊಂಡ ಕೈಸಾಲ ತೀರಿಸಲಾಗದೆ ಮರ್ಯಾದೆಗೆ ಅಂಜಿ ಸತ್ತವರೇ ಅಧಿಕವಾಗಿದ್ದರು. ರೈತರಿಗೆ ಕೈಸಾಲ ಮಾಡಿಕೊಳ್ಳಲು ಕೃಷಿಯೊಂದೇ ಕಾರಣವಲ್ಲ ಎಂಬುದನ್ನು ನರಗುಂದದ ಆ ಮಹಿಳೆ ನನಗೆ ಮನವರಿಕೆ ಮಾಡಿಕೊಟ್ಟಿದ್ದಳು. ಮತ್ತೊಬ್ಬ ಮಹಿಳೆ ಹೊಲದಲ್ಲಿ ಹಾವು ಕಚ್ಚಿದ ತನ್ನ ಗಂಡನನ್ನು ಉಳಿಸಿಕೊಳ್ಳಲು ಆಸ್ಪತ್ರೆಗೆ ಎರಡು ಲಕ್ಷ ರುಪಾಯಿ ಸುರಿದಿದ್ದಳು. ಇಂತಹ ಅನೇಕ ಕಾರಣಗಳಿವೆ. ಗೊಬ್ಬರಕ್ಕೋ ಬೀಜಕ್ಕೋ ಇಲ್ಲವೆ ಸಣ್ಣ ಕೃಷಿ ಉಪಕರಣಗಳನ್ನು ಖರೀದಿಸುವುದಕ್ಕೋ ಸಾಲ ಮಾಡಿಕೊಂಡವರಿಗೆ ಎಷ್ಟು ಪ್ರಾಮುಖ್ಯತೆಯನ್ನು ನೀಡಬೇಕೋ ಅಷ್ಟೇ ಪ್ರಾಮುಖ್ಯತೆಯನ್ನು ಅವರಿಗೂ ನೀಡಬೇಕು.

ಖುಷಿಗಾಗಿ ಯಾರೂ ಸಾಲ ಮಾಡಲ್ಲ
ನನಗೆ ಒಂದಂತೂ ಮನವರಿಕೆಯಾಗಿದೆ. ಯಾರೂ ಖುಷಿಗಾಗಿ ಸಾಲ ಮಾಡುವುದಿಲ್ಲ. ಅದರಲ್ಲೂ ರೈತರಂತೂ ಹೀಗೆ ಮಾಡುವುದು ದೂರದ ಮಾತು. ಮದುವೆ ಮುಂಜಿಗೆ ಸಾಲ ಮಾಡುತ್ತಾರೆ ಎನ್ನುವುದು ಸತ್ಯ. ಜೀವನ ಸಾಗಿಸಲು ಕಷ್ಟಪಡುತ್ತಿರುವಾಗ ಅವರು ಮದುವೆಗೆ ಸಾಲ ಮಾಡದೆ ಭಾರ ಕಳೆದುಕೊಳ್ಳಲು ಆಗುವುದಿಲ್ಲ. ಇವೆಲ್ಲವನ್ನೂ ಬದಿಗಿಟ್ಟು ನೋಡಿದರೂ, ರೈತರು ಕೆಲವೊಮ್ಮೆ ಬೆಳೆದ ಬೆಳೆ ಕೈಕೊಡುತ್ತದೆ.

ಒಂದು ಕಡೆ ಮಳೆ ಹೆಚ್ಚಾಗಿ ಕೊಚ್ಚಿಕೊಂಡು ಹೋದರೆ, ಇನ್ನೊಂದೆಡೆ ಮಳೆ ಬಾರದೆ ಬೆಳೆಯೇ ಒಣಗಿಹೋಗಿರುತ್ತದೆ. ಒಳ್ಳೆಯ ಮಳೆ ಬೆಳೆಯಾಗಿ ನಾಲ್ಕು ಕಾಸು ಕೈನಲ್ಲಿ ಓಡಾಡುತ್ತದೆ ಎನ್ನುವಾಗಲೇ ಎಲ್ಲವೂ ಕೈಕೊಟ್ಟಿರುತ್ತದೆ. ಹಾಕಿದ ಅಸಲು ಸಹ ಹುಟ್ಟದೆ ಸಾಲದ ಬಡ್ಡಿ ನೊಗಕ್ಕೆ ಸಿಕ್ಕಿ, ಜೀವ ತೇಯುತ್ತಿರುತ್ತಾರೆ. ಇದು ಪ್ರತಿ ವರ್ಷವೂ ಪುನರಾವರ್ತನೆ ಆಗುತ್ತಿರುತ್ತದೆ. ಒಂದು ರೀತಿ ಕಳೆ ಬೆಳೆದಂತೆ. ಅದನ್ನು ಬುಡಸಮೇತ

ಕಿತ್ತು ಹಾಕಬೇಕು. ಇಲ್ಲವೆಂದರೆ ಹುಟ್ಟುತ್ತಲೇ ಇರುತ್ತದೆ. ಹಾಗೆಯೇ, ನಮ್ಮ ರೈತರ ಸಾಲ ಕೂಡ. ಅದಕ್ಕೊಂದು ಪರಿಹಾರ ದೊರಕಿಸಿಕೊಡಲು ನಾನು ನನ್ನ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಅಸಹಾಯಕತೆಯನ್ನು ದುರ್ಬಳಕೆ ಮಾಡಿಕೊಂಡು ಶೋಷಣೆ ಮಾಡುವುದು ಅತ್ಯಂತ ಅಮಾನವೀಯ ಕೃತ್ಯ ಎಂಬ ಗಾಂಧೀಜಿಯ ಮಾತನ್ನು ನಾನು ಅಕ್ಷರಶಃ ಒಪ್ಪುತ್ತೇನೆ. ಹಳ್ಳಿಗಳಲ್ಲಿರುವ ರೈತರು, ಕೃಷಿ ಕಾರ್ಮಿಕರು ದಿನನಿತ್ಯದ ಜೀವನಕ್ಕೇ ಪರದಾಡುತ್ತಿರುತ್ತಾರೆ.

ರೈತರಷ್ಟೇ ಅಲ್ಲ. ಸಣ್ಣ ಪುಟ್ಟ ಕೂಲಿ ನಾಲಿ ಮಾಡಿ ಬದುಕುವವರು, ತಳ್ಳುಗಾಡಿಯ ವ್ಯಾಪಾರಿಗಳು, ಕೆಲಸಗಾರರು, ನಾನಾ ಕೆಲಸ ಮಾಡಿಕೊಳ್ಳುವವರ ಬದುಕು ಎಂದರೆ, ಅಂದಿನ ದಿನದ ಹೊಟ್ಟೆ ತುಂಬಿಸಿಕೊಂಡರೆ ಸಾಕು ಎನ್ನುವಂತಿರುತ್ತದೆ. ಸಂಜೆಯಾದಂತೆ ನಾಳೆ ಏನು ಎನ್ನುವುದು ಕಾಡುತ್ತಿರುತ್ತದೆ. ಅವರಿಗೂ ಮಕ್ಕಳು ಮರಿಗಳು ಕನಸುಗಳು ಇರುತ್ತವೆ. ನಮ್ಮ ಮಕ್ಕಳು ಚೆನ್ನಾಗಿರಬೇಕು ಎಂದು ಎಲ್ಲಾ ತಂದೆ ತಾಯಂದಿರು ಬಯಸುತ್ತಾರೆ.

ಅವರ ಬದುಕು ರೂಪಿಸಲು ಸಾಲ ಮಾಡಿರುತ್ತಾರೆ. ಇದರಲ್ಲಿ ನನಗೆ ವೈಯಕ್ತಿಕವಾಗಿ ತಪ್ಪೇನೂ ಕಾಣದು. ವ್ಯಾಪಾರ ಮಾಡಲು, ಮಗನ ನಾಮಕರಣ, ಮದುವೆ, ಕಾಯಿಲೆ ಕಸಾಲೆ, ಮತ್ತೊಂದು ಮಗದೊಂದು, ಕೊನೆಕೊನೆಗೆ ಎತ್ತಿಗೂ, ನೊಗಕ್ಕೂ ಸಾಲ ಮಾಡಿರುವವರನ್ನು ನೋಡಿದ್ದೇನೆ. ಬಡವರಿಗೆ ಬಡ್ಡಿ, ಚಕ್ರಬಡ್ಡಿ ಗೊತ್ತಿಲ್ಲ ಅನಿವಾರ್ಯತೆಗೆ ಬಿದ್ದು ಜನ ಸಾಲ ಮಾಡಿರುತ್ತಾರೆ. ಅಷ್ಟೇ ಪ್ರಾಮಾಣಿಕವಾಗಿ ತೀರಿಸುವ ಪ್ರಯತ್ನ ಮಾಡುತ್ತಾರೆ. ಅವರಿಗೆ ಸಾಲ, ಬಡ್ಡಿ, ಚಕ್ರ ಬಡ್ಡಿ ಯಾವುದೂ ಗೊತ್ತಿರುವುದಿಲ್ಲ.

ಸಾಲ ತೀರಬೇಕಷ್ಟೆ. ಅದಕ್ಕಾಗಿ ಗಾಣದೆತ್ತಿನಂತೆ ದುಡಿಯುತ್ತಾರೆ. ಯಾವುದೂ ಕೈಹಿಡಿಯುತ್ತಿಲ್ಲ. ಸಾಲಗಾರರಿಗೆ ಮುಖ ತೋರಿಸಲು ಸಾಧ್ಯವಿಲ್ಲ ಎನಿಸಿದಾಗ ಬದುಕಿಗೆ ಬೆನ್ನು ತೋರಿಸುತ್ತಾರೆ. ಅವರ ಬದುಕು ಮುಗಿದರೂ, ಅವರ ಬಡತನ ಮುಗಿಯುವುದಿಲ್ಲ. ಬೆಂಬಿಡದ ಭೂತದಂತೆ ಕಾಡುತ್ತದೆ. ಅದಕ್ಕಾಗಿ, ಅವರಲ್ಲಿ ನನ್ನದೊಂದು ಮನವಿ- ಇದ್ದು ಎದುರಿಸಿ, ಇದ್ದು ಜಯಿಸಿ. ಕೈಲಾದಷ್ಟು ಸಮಸ್ಯೆ ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಬದುಕು ಕೊನೆಗಾಣಿಸಿಕೊಳ್ಳುವುದನ್ನು ಕೈಬಿಡಿ ಎನ್ನುವುದೇ ನಾನು ನಿಮಗೆ ಮಾಡಬಹುದಾದ ಮನವಿಯಾಗಿದೆ.

ನನ್ನ ಮನವಿಗೆ ನೀವು ಮನಸ್ಸು ಪರಿವರ್ತಿಸಿಕೊಳ್ಳುತ್ತೀರಿ ಎನ್ನುವ ವಿಶ್ವಾಸವಿದೆ. ಸಾಲ ಮಾಡಿ ಜೀವ ಬಿಟ್ಟರೆ ಎಲ್ಲವೂ ಮುಗಿಯುವುದಿಲ್ಲ. ಕೈಸಾಲ ಮಾಡಿದವರ ಬವಣೆ ತಪ್ಪುವುದಿಲ್ಲ. ಇಂತಹವರ ನೆರವಿಗೆ ಧಾವಿಸಲು ಕಾನೂನುಗಳು ಮತ್ತು ನಿಯಮಗಳು ಇವೆಯಾದರೂ, ಅವುಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಬೇಕಿದೆ. ರೈತರ ಸಂಕಷ್ಟಗಳಿಗೆ ಪರಿಹಾರವಾಗಿ ಸಹಕಾರ ಸಂಘಗಳಲ್ಲಿ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪಡೆದ ಸಾಲ ಮನ್ನಾ ಮಾಡುವ ಮೂಲಕ ಐತಿಹಾಸಿಕ ಹೆಜ್ಜೆ ಇಟ್ಟಿದ್ದೇವೆ.

ಆದರೆ ಇದಕ್ಕೆ ಒಂದು ಸಾಂಸ್ಥಿಕ ರೂಪ ಇದೆ. ದಾಖಲೆಗಳ ರಕ್ಷಣೆ ಇದೆ. ವಿಶ್ವಾಸದ ಮೇಲಿನ ಇಲ್ಲವೇ ಬಾಯಿಮಾತಿನ ಸಾಲಕ್ಕೆ ಯಾವುದೇ ಕಾಗದ ಪತ್ರಗಳೂ ಇರುವುದಿಲ್ಲ. ಅವರು ಹೇಳಿದ್ದೇ ಲೆಕ್ಕ ಎಂಬಂಥ
ಪರಿಸ್ಥಿತಿಯಿದೆ. ಇಂತಹವರಿಗೆ ನಾನು ಹೇಗೆ ನೆರವಾಗಬಲ್ಲೆ ಎನ್ನುವುದನ್ನು ಅನೇಕ ಬಾರಿ ಪ್ರಶ್ನಿಸಿಕೊಂಡಿದ್ದೇನೆ. ‘ಶೋಷಣೆಯಿಂದ ಯಾರಿಗೆ ಮುಕ್ತಿ ಸಿಗುತ್ತದೆಯೋ ಆಗ ಸ್ವಾತಂತ್ರ್ಯ ಸಿಕ್ಕಂತೆ’ ಎಂಬ ಡಾ.ಬಿ.ಆರ್.ಅಂಬೇಡ್ಕರ್ ಮಾತು ನನ್ನ ಮನದಲ್ಲಿತ್ತು.

ಹೀಗಾಗಿ, ಒಂದು ಕಾಯಿದೆಯನ್ನು ರೂಪಿಸಲು ಬಯಸಿ ಕಾನೂನು ಪರಿಣತರೊಂದಿಗೆ ನನ್ನ ಮನದಾಳದ ನೋವುಗಳನ್ನು ಹಂಚಿಕೊಂಡಿದ್ದೆ. ಅದಕ್ಕೆ ಒಂದು ರೂಪ ಕೊಡುವಂತೆ ಕೇಳಿಕೊಂಡಿದ್ದೆ. ನಿವೃತ್ತ ನ್ಯಾಮೂರ್ತಿಗಳೊಬ್ಬರು ನನ್ನ ಮಾತುಗಳನ್ನು ಗ್ರಹಿಸಿದ್ದರು. ಅನೇಕ ಉಪಯುಕ್ತ ಸಲಹೆ, ಸೂಚನೆಗಳನ್ನು ನೀಡಿದ್ದರು. ಮೂರು ತಿಂಗಳು ಅಧ್ಯಯನ ಮಾಡಿ ‘ಋಣ ಪರಿಹಾರ ಕಾಯ್ದೆ’ ಕರಡನ್ನು ಸಿದ್ಧಪಡಿಸಿದರು. ತಜ್ಞರ ಸಮಿತಿ ಪರಿಶೀಲಿಸಿ, ಸಮ್ಮತಿ ಸೂಚಿಸಿತು.

ನಂತರ ಅದನ್ನು ಸಚಿವ ಸಂಪುಟ ಸಭೆಯಲ್ಲಿ ನನ್ನೆಲ್ಲ ಸಹೋದ್ಯೋಗಿಗಳ ಮುಂದಿರಿಸಿದೆ. ಸುಮಾರು ಮೂರು ಗಂಟೆಗಳ ಕಾಲ ಈ ಬಗ್ಗೆ ಮುಕ್ತವಾಗಿ ಚರ್ಚಿಸಿದೆ. ಅನೇಕ ಸಚಿವರು ಸಲಹೆ ಸೂಚನೆಗಳನ್ನು ನೀಡಿದರು. ಅಂತಿಮವಾಗಿ ಸರ್ವಾನುಮತದ ಒಪ್ಪಿಗೆ ನೀಡಿದರು. ಈಗ ಅದು ನಿಮ್ಮೆಲ್ಲರ ಮುಂದಿದೆ. ಅದೇ ‘ಋಣ ಪರಿಹಾರ ಅಧಿನಿಯಮ-2018’. ಇದು ನೊಂದವರ ಬದುಕಿಗೆ ಆಶಾಗನ್ನಡಿಯಾಗುತ್ತದೆ ಎನ್ನುವುದು ನನ್ನ ವಿಶ್ವಾಸ.

ಹಿಂದೆಯೂ 2 ಬಾರಿ ಆಗಿತ್ತು ರಾಜ್ಯದಲ್ಲಿ ಹಿಂದೆ 1976 ಮತ್ತು 1980 ರಲ್ಲಿ ಕರ್ನಾಟಕ ಋಣ ಪರಿಹಾರ ಅಧಿನಿಯಮ ಜಾರಿಗೊಳಿಸಿ ಜನರ ಕಣ್ಣೀರು ಒರೆಸುವ ಪ್ರಯತ್ನಗಳಾಗಿವೆ. ಈಗ ಮತ್ತೊಮ್ಮೆ ನಮ್ಮ ಮೈತ್ರಿ ಸರ್ಕಾರ ಕರ್ನಾಟಕ ಋಣ ಪರಿಹಾರ ಅಧಿನಿಯಮ 2018 ರ ಮೂಲಕ ಋಣಮುಕ್ತಿಯ ಸ್ವಾತಂತ್ರ್ಯ ಪಡೆಯಲು ಅವಕಾಶ ಕಲ್ಪಿಸಿದೆ. ಈ ಅಧಿನಿಯಮ ರಚಿಸಲು ಸಂವಿಧಾನದತ್ತ ಅಧಿಕಾರ ರಾಜ್ಯ
ಸರ್ಕಾರಗಳಿಗೆ ಇದೆ. ಜೊತೆಗೆ 1976 ರ ಅಧಿನಿಯಮವನ್ನು ಸುಪ್ರೀಂ ಕೋರ್ಟ್ ಸಂವಿಧಾನಬದ್ಧ ಎಂದು ಎತ್ತಿಹಿಡಿದಿದೆ.

ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ವಾರ್ಷಿಕ 1.20 ಲಕ್ಷ ರುಪಾಯಿ ಆದಾಯ ಹೊಂದಿರುವ ಸಣ್ಣ ರೈತರು, ಕೃಷಿ ಕಾರ್ಮಿಕರು ಮತ್ತಿತರ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವ ಜನರಿಗೆ ಸಾಲದ
ಶೂಲೆಯಿಂದ ಪಾರಾಗಲು ಈ ಅಧಿನಿಯಮ ವರದಾನವಾಗಲಿದೆ. ಶೋಷಿತರನ್ನು ಶೋಷಣೆ ಮಾಡುವ ವರ್ಗದವರಿಗೆ ಈ ಅಧಿನಿಯಮದಡಿ 1.25 ಲಕ್ಷ ರು. ದಂಡ ಹಾಗೂ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

ಖಾಸಗಿ ಲೇವಾದೇವಿದಾರರು, ಹಣಕಾಸು ಸಂಸ್ಥೆಗಳು, ಗಿರವಿದಾರರಿಗೆ ಈ ಅಧಿನಿಯಮ ಅನ್ವಯವಾಗುತ್ತದೆ. ಈ ಅಧಿನಿಯಮ ಜಾರಿಗೆ ಬಂದ 90 ದಿನಗಳೊಳಗಾಗಿ ತಮ್ಮ ವ್ಯಾಪ್ತಿಯ ಉಪವಿಭಾಗಾಧಿಕಾರಿಗಳಿಗೆ ಸಾಲದ ವಿವರ ಸಲ್ಲಿಸಿ, ಅವರ ಆದೇಶದನ್ವಯ ಋಣಮುಕ್ತರಾಗಲು ಸಾಧ್ಯವಿದೆ. ವರಮಹಾಲಕ್ಷ್ಮಿ ಹಬ್ಬದಂದು ಸಚಿವ ಸಂಪುಟ ಕೈಗೊಂಡಿರುವ ಈ ಮಹತ್ವದ ತೀರ್ಮಾನ ಲಕ್ಷಾಂತರ ಜನರು ಹೊರಲಾಗದೆ ಹೊತ್ತಿರುವ ಸಾಲದ ಹೊರೆಯಿಂದ ಮುಕ್ತಿ ನೀಡಲಿದೆ.

ಈ ತೃಪ್ತಿ ನಮ್ಮ ಸರ್ಕಾರದ್ದು. ‘ಟನ್‌ನಷ್ಟು ಉಪದೇಶ ಮಾಡುವುದಕ್ಕಿಂತ ಒಂದು ಔನ್ಸ್‌ನಷ್ಟು ಕಾರ್ಯಗತಗೊಳಿಸುವುದು ಮೇಲು’ ಎಂಬ ಗಾಂಧೀಜಿಯವರ ನುಡಿ ಪಾಲಿಸಿದ ಪುನೀತ ಭಾವ ನಮ್ಮದು.
 

-ಎಚ್ ಡಿ ಕುಮಾರಸ್ವಾಮಿ, ಮುಖ್ಯಮಂತ್ರಿಗಳು