ಬೆಂಗಳೂರು (ಫೆ. 21): ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಇದುವರೆಗೆ ಅರೆಮನಸ್ಸಿನಲ್ಲಿದ್ದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಹಾಲಿ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಏಕಾಏಕಿ ಕಣಕ್ಕಿಳಿಯಲು ಪೂರ್ಣ ಮನಸ್ಸು ಮಾಡಿರುವುದು ಯಾಕೆ ಎಂಬುದು ಕುತೂಹಲಕರವಾಗಿದೆ.

ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಸುಮಲತಾ ಪಕ್ಷೇತರರಾಗಿ ಸ್ಪರ್ಧೆ?

ಕಳೆದ ವಾರದವರೆಗೂ ಶೋಭಾ ಅವರು ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದು ಅನುಮಾನ ಎಂಬ ಸುದ್ದಿಯೇ ಬಿಜೆಪಿ ಪಾಳೆಯದಲ್ಲಿ ಜೋರಾಗಿ ಕೇಳಿಬರುತ್ತಿತ್ತು. ಇದಕ್ಕೆ ಪೂರಕ ಎಂಬಂತೆ ಶೋಭಾ ಅವರೂ ಸ್ವಕ್ಷೇತ್ರದಲ್ಲಿ ಪ್ರವಾಸ ಮಾಡುವುದನ್ನೂ ಕಡಿಮೆಗೊಳಿಸಿ ಬೆಂಗಳೂರು ಸೇರಿದಂತೆ ರಾಜ್ಯದ ಇತರ ಭಾಗಗಳಲ್ಲೇ ಪ್ರವಾಸ ಕೈಗೊಳ್ಳುತ್ತಿದ್ದರು. ಹೆಚ್ಚೂ ಕಡಿಮೆ ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಕ್ಷೇತ್ರದಿಂದ ದೂರವಾಗುವ ಹಾದಿಯಲ್ಲೇ ಹೆಜ್ಜೆ ಹಾಕಿದ್ದರು. ಇದರಿಂದ ಸಹಜವಾಗಿಯೇ ಶೋಭಾ ಅವರು ಲೋಕಸಭಾ ಚುನಾವಣೆ ಎದುರಿಸುವುದಿಲ್ಲ ಎಂಬ ಸುದ್ದಿ ದಟ್ಟವಾಗಿತ್ತು.

ಆದರೆ, ಆಡಳಿತಾರೂಢ ಪಕ್ಷಗಳಲ್ಲಿನ ಶಾಸಕರ ಅಸಮಾಧಾನದ ಲಾಭ ಪಡೆದು ಪರ್ಯಾಯ ಸರ್ಕಾರ ರಚಿಸುವ ಬಿಜೆಪಿಯ ಕನಸು ಸದ್ಯಕ್ಕೆ ನನಸಾಗುವುದಿಲ್ಲ ಎಂಬುದು ಇದೀಗ ಖಚಿತವಾದ ಹಿನ್ನೆಲೆಯಲ್ಲಿ ಶೋಭಾ ಕರಂದ್ಲಾಜೆ ಅವರು ಮತ್ತೆ ಲೋಕಸಭಾ ಚುನಾವಣೆಯತ್ತ ಗಮನಹರಿಸಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಸೆಡ್ಡು ಹೊಡೆದ ಉಮೇಶ್ ಜಾಧವ್, ಮಲ್ಲಿಕಾರ್ಜುನ ಖರ್ಗೆ ಅನುಭವದ ಆಟ

ರಾಜ್ಯದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ತಮ್ಮದೇ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆಯನ್ನು ಶೋಭಾ ಅವರು ಬಹು ಸಮಯದ ಹಿಂದೆಯೇ ನಿರೀಕ್ಷಿಸಿದ್ದರು. ಉದ್ದೇಶಿತ ಹೊಸ ಸರ್ಕಾರದಲ್ಲಿ ಮೊದಲು ಸಚಿವೆಯಾಗಿ ನಂತರ ವಿಧಾನಪರಿಷತ್‌ ಪ್ರವೇಶಿಸುವ ಬಗ್ಗೆಯೂ ಅವರು ದೂರದೃಷ್ಟಿಹೊಂದಿದ್ದರು. ಆದರೆ, ಅವರ ಈ ಎಣಿಕೆ ಹುಸಿಯಾಗಿದೆ ಎನ್ನಲಾಗಿದೆ.

ಅಸೆಂಬ್ಲಿ ಚುನಾವಣೆಯಲ್ಲೇ ಕಣಕ್ಕಿಳಿಯಲು ಯತ್ನ:

ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇದ್ದರೂ ರಾಜ್ಯ ರಾಜಕಾರಣದ ತೂಕವೇ ಹೆಚ್ಚು ಎಂಬ ಅಭಿಪ್ರಾಯಕ್ಕೆ ಬಂದಿದ್ದ ಶೋಭಾ ಕರಂದ್ಲಾಜೆ ಅವರು ಕಳೆದ ವಿಧಾನಸಭಾ ಚುನಾವಣೆ ವೇಳೆಯೇ ರಾಜ್ಯ ರಾಜಕಾರಣಕ್ಕೆ ಮರಳುವ ಅದಮ್ಯ ಆಸೆ ಹೊಂದಿದ್ದರು. ಆ ದಿಕ್ಕಿನಲ್ಲಿ ತೀವ್ರ ಪ್ರಯತ್ನವನ್ನೂ ನಡೆಸಿದ್ದರು. ಈ ಕಾರಣಕ್ಕಾಗಿಯೇ ಅವರ ಹಿಂದಿನ ಯಶವಂತಪುರ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಮಾಡುವುದನ್ನೂ ತಡೆ ಹಿಡಿಯಲಾಗಿತ್ತು ಎಂಬುದು ಗುಟ್ಟಿನ ವಿಷಯವೇನಲ್ಲ.

ಸಂಸದರಾಗಿರುವ ಶೋಭಾ ಕರಂದ್ಲಾಜೆ ಅವರಲ್ಲದೆ ಬಿಜೆಪಿಯ ಇತರ ಹಲವು ಸಂಸದರು ರಾಜ್ಯ ರಾಜಕಾರಣಕ್ಕೆ ವಾಪಸಾಗುವ ಇಂಗಿತವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು. ಇದು ಶೋಭಾ ಅವರ ಆಸೆಗೆ ತಣ್ಣೀರು ಎರಚಿದಂತಾಯಿತು. ಒಬ್ಬ ಸಂಸದರಿಗೂ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸುವ ಅವಕಾಶ ನೀಡಿದಲ್ಲಿ ಅದನ್ನೇ ಮುಂದಿಟ್ಟುಕೊಂಡು ಇತರರೂ ಕೇಳಬಹುದು ಎಂಬ ಆತಂಕ ಪಕ್ಷದ ವರಿಷ್ಠರಲ್ಲಿ ಬಂತು.

ಕೊಪ್ಪಳದ ಸಂಸದ ಕರಡಿ ಸಂಗಣ್ಣ ಅವರು ಇದನ್ನೂ ನೇರವಾಗಿಯೇ ಪ್ರಸ್ತಾಪಿಸಿದ್ದರು. ಶೋಭಾ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದರೆ ತಮಗೂ ಟಿಕೆಟ್‌ ಕೊಡಬೇಕು ಎಂಬ ಹೇಳಿಕೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡಲು ಪಕ್ಷದ ವರಿಷ್ಠರು ನಿರಾಕರಿಸಿದರು. ಹೀಗಾಗಿಯೇ ಶೋಭಾ ಅವರು ಕಣ್ಣಿರಿಸಿದ್ದ ಯಶವಂತಪುರ ಕ್ಷೇತ್ರಕ್ಕೆ ಕೊನೆಯ ಕ್ಷಣದಲ್ಲಿ ನಟ ಜಗ್ಗೇಶ್‌ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಯಿತು ಎಂದು ತಿಳಿದು ಬಂದಿದೆ.

ವಿಧಾನಸಭಾ ಚುನಾವಣೆಗೆ ಮೊದಲ ಕೆಲವು ದಿನಗಳು ಹಾಗೂ ನಂತರ ಫಲಿತಾಂಶ ಹೊರಬಿದ್ದ ದಿನದಿಂದಲೂ ಶೋಭಾ ಕರಂದ್ಲಾಜೆ ಅವರು ತಮ್ಮ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಡೆಗೆ ಹೆಚ್ಚು ತೋರಲಿಲ್ಲ ಎಂಬ ಆರೋಪಗಳು ಆಗಾಗ ಕೇಳಿ ಬಂದಿವೆ.

104 ಸ್ಥಾನ ಗಳಿಸುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ಸರ್ಕಾರ ರಚಿಸುವ ಅವಕಾಶ ಬಂದೇ ಬರುತ್ತದೆ ಎಂಬ ಅತೀವ ನಿರೀಕ್ಷೆ ಇಟ್ಟುಕೊಂಡೇ ಬಂದರು. ಅಂತಿಮವಾಗಿ ಪ್ರಸಕ್ತ ಸನ್ನಿವೇಶದಲ್ಲಿ ಸರ್ಕಾರ ರಚಿಸಲು ನಡೆಸಿದ ಪ್ರಯತ್ನ ವಿಫಲವಾಗಿದ್ದರಿಂದ ಶೋಭಾ ಅವರು ಮತ್ತೆ ಲೋಕಸಭಾ ಚುನಾವಣೆಯತ್ತ ಮುಖ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

- ವಿಜಯ್ ಮಲಗಿಹಾಳ