ಬೆಂಗ​ಳೂ​ರು (ಫೆ. 21):  ರೆಬೆಲ್‌ಸ್ಟಾರ್‌ ಅಂಬ​ರೀಶ್‌ ಅವರ ಪತ್ನಿ ಸುಮ​ಲತಾ ಬುಧ​ವಾರ ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಅವ​ರನ್ನು ಭೇಟಿ ಮಾಡಿ ಮುಂಬ​ರುವ ಲೋಕ​ಸಭಾ ಚುನಾ​ವ​ಣೆ​ಯಲ್ಲಿ ಮಂಡ್ಯ ಕ್ಷೇತ್ರ​ದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿ​ಸುವ ಆಕಾಂಕ್ಷೆ ವ್ಯಕ್ತ​ಪ​ಡಿ​ಸಿದ್ದಾರೆ.

ಅಷ್ಟೇ ಅಲ್ಲ, ಒಂದು ವೇಳೆ ಮೈತ್ರಿ ಕಾರ​ಣ​ದಿಂದ ಕಾಂಗ್ರೆಸ್‌ ಈ ಕ್ಷೇತ್ರ​ದಲ್ಲಿ ಸ್ಪರ್ಧಿ​ಸದ ಸಂದ​ರ್ಭ ಎದು​ರಾ​ದರೆ ಮಂಡ್ಯ ಜಿಲ್ಲೆಯ ಜನರು ಸೂಚಿ​ಸಿ​ದ ರಾಜ​ಕೀಯ ನಿರ್ಧಾ​ರ​ವನ್ನು ತಾವು ತೆಗೆ​ದು​ಕೊ​ಳ್ಳು​ವು​ದಾಗಿ ಹೇಳುವ ಮೂಲಕ ಮಂಡ್ಯದ ಜನರು ಹಾಗೂ ನಾಯ​ಕರ ಒತ್ತಾಸೆ ದೊರ​ಕಿ​ದರೆ ಪಕ್ಷೇ​ತ​ರ​ರಾ​ಗಿಯೂ ಸ್ಪರ್ಧಿ​ಸಲು ಸಿದ್ಧ ಎಂದು ಪರೋ​ಕ್ಷ​ವಾಗಿ ತಿಳಿ​ಸಿ​ದ್ದಾ​ರೆ.

ಬುಧ​ವಾರ ಸಂಜೆ ಸಿದ್ದ​ರಾ​ಮಯ್ಯ ಅವರ ನಿವಾಸ ಕಾವೇ​ರಿಯಲ್ಲಿ ಭೇಟಿ​ಯಾದ ಸುಮ​ಲತಾ, ಮಂಡ್ಯದ ಜನರು ತಮ್ಮನ್ನು ಚುನಾ​ವ​ಣೆಗೆ ಸ್ಪರ್ಧಿ​ಸು​ವಂತೆ ಒತ್ತಾಸೆ ನೀಡು​ತ್ತಿ​ದ್ದಾರೆ. ಅಂಬ​ರೀಶ್‌ ಅವರು ಕಟ್ಟರ್‌ ಕಾಂಗ್ರೆಸ್ಸಿಗ​ರಾದ ಕಾರಣ ತಾವು ಕಾಂಗ್ರೆಸ್‌ ಪಕ್ಷದಿಂದಲೇ ಮಂಡ್ಯ ಕ್ಷೇತ್ರ​ದಲ್ಲಿ ಸ್ಪರ್ಧಿಸುವ ಬಯಕೆ ಹೊಂದಿ​ದ್ದೇನೆ ಎಂದು ತಿಳಿ​ಸಿ​ದರು ಎನ್ನಲಾ​ಗಿ​ದೆ.

ಇದಕ್ಕೆ ಪ್ರತಿ​ಕ್ರಿ​ಯಿ​ಸಿದ ಸಿದ್ದ​ರಾ​ಮಯ್ಯ ಅವರು, ನಿಮ್ಮ ಈ ಅಭಿ​ಪ್ರಾ​ಯ​ವನ್ನು ಪಕ್ಷದ ಹೈಕ​ಮಾಂಡ್‌ ರಾಹುಲ್‌ ಗಾಂಧಿ ಅವ​ರಿಗೆ ತಿಳಿ​ಸು​ತ್ತೇನೆ. ಅಲ್ಲದೆ, ಪಕ್ಷದ ವೇದಿ​ಕೆ​ಯಲ್ಲೂ ಚರ್ಚೆ ಮಾಡು​ತ್ತೇವೆ. ಅಂತಿ​ಮ​ವಾಗಿ ಹೈಕ​ಮಾಂಡ್‌ ಏನು ತೀರ್ಮಾನ ಕೈಗೊ​ಳ್ಳು​ತ್ತದೋ ಅದನ್ನು ನಿಮಗೆ ತಿಳಿ​ಸು​ತ್ತೇವೆ ಎಂದು ಹೇಳಿ​ದರು ಎಂದು ಮೂಲ​ಗಳು ಹೇಳಿ​ವೆ.

ಪಕ್ಷೇ​ತ​ರ​ರಾಗಿ ಸ್ಪರ್ಧಿಸುವ ಸುಳಿವು:

ಸಿದ್ದ​ರಾ​ಮಯ್ಯ ಅವ​ರ ಭೇಟಿಯ ನಂತರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಸುಮ​ಲತಾ, ಒಂದು ವೇಳೆ ಮೈತ್ರಿ ಕಾರ​ಣಕ್ಕೆ ಈ ಕ್ಷೇತ್ರ​ವನ್ನು ಜೆಡಿ​ಎ​ಸ್‌ಗೆ ಬಿಟ್ಟು​ಕೊ​ಡ​ಬೇ​ಕಾದ ಸಂದರ್ಭ ನಿರ್ಮಾ​ಣ​ವಾ​ದರೆ ಆಗ ಮಂಡ್ಯದ ಜನರು ಹಾಗೂ ಸ್ಥಳೀಯ ಕಾಂಗ್ರೆಸ್‌ ನಾಯ​ಕರು ಯಾವ ತೀರ್ಮಾ​ನ​ವನ್ನು ಕೈಗೊ​ಳ್ಳು​ತ್ತಾರೋ ಅದಕ್ಕೆ ತಾವು ಬದ್ಧ​ರಾ​ಗಿ​ರುವುದಾಗಿ ಹೇಳಿ​ದ್ದಾರೆ. ತನ್ಮೂಲಕ ಮಂಡ್ಯದ ಸ್ಥಳೀಯ ನಾಯ​ಕರ ಒತ್ತಾ​ಸೆ ದೊರಕಿ​ದರೆ ಪಕ್ಷೇ​ತ​ರ​ರಾ​ಗಿಯೂ ಸ್ಪರ್ಧಿ​ಸಲು ಸಿದ್ಧ ಎಂಬ ಸೂಚ​ನೆ​ಯನ್ನು ಪರೋ​ಕ್ಷ​ವಾಗಿ ನೀಡಿ​ದ್ದಾರೆ ಎಂದೇ ವ್ಯಾಖ್ಯಾ​ನಿ​ಸ​ಲಾ​ಗು​ತ್ತಿ​ದೆ.

ಮಂಡ್ಯ ಜಿಲ್ಲೆಯ ಅಭಿ​ಮಾ​ನಿ​ಗಳು ಚುನಾ​ವ​ಣೆಗೆ ಸ್ಪರ್ಧೆ ಮಾಡು​ವಂತೆ ಸಾಕಷ್ಟುಒತ್ತಾಯ ಮಾಡಿ​ದ್ದಾರೆ. ಅಭಿ​ಮಾ​ನಿ​ಗಳ ಅನಿ​ಸಿ​ಕೆ​ಯನ್ನು ಪಕ್ಷದ ಹಿರಿಯ ಮುಖಂಡ​ರಿಗೆ ತಿಳಿ​ಸ​ಬೇ​ಕಿತ್ತು. ಹೀಗಾಗಿ ಸಿದ್ದ​ರಾ​ಮಯ್ಯ ಅವರ ಭೇಟಿ ಮಾಡಿ ಮಂಡ್ಯದ ಜನರ ಅಪೇಕ್ಷೆ ಏನಿದೆ ಎಂಬು​ದನ್ನು ತಿಳಿ​ಸಿ​ದ್ದೇನೆ. ಸಿದ್ದ​ರಾ​ಮಯ್ಯ ಅವರು ಈ ಬಗ್ಗೆ ಯೋಚನೆ ಮಾಡು​ವು​ದಾಗಿ ಹೇಳಿ​ದ್ದಾರೆ. ಒಟ್ಟಾರೆ, ನನ್ನ ಸ್ಪರ್ಧೆಯ ಬಗ್ಗೆ ಕಾಂಗ್ರೆಸ್‌ ಪಕ್ಷದ ಅಭಿ​ಪ್ರಾಯ ಏನಿದೆ ಎಂಬು​ದನ್ನು ತಿಳಿ​ದು​ಕೊ​ಳ್ಳ​ಬೇ​ಕಿದೆ. ಇದಕ್ಕೆ ನಾನು ಅವ​ಸರ ಮಾಡು​ವು​ದಿಲ್ಲ ಎಂದ​ರು.

ಒಂದು ವೇಳೆ ಮೈತ್ರಿ ಕಾರ​ಣಕ್ಕೆ ಈ ಕ್ಷೇತ್ರ​ವನ್ನು ಜೆಡಿ​ಎ​ಸ್‌ಗೆ ಬಿಟ್ಟು​ಕೊ​ಡ​ಬೇ​ಕಾದ ಸಂದರ್ಭ ಎದು​ರಾ​ದಲ್ಲಿ ಆಗ ನಾನು ಜನರ ಅಭಿ​ಪ್ರಾ​ಯಕ್ಕೆ ಮನ್ನಣೆ ನೀಡು​ತ್ತೇನೆ. ಜನರು ಏನು ತೀರ್ಮಾ​ನ ಕೈಗೊ​ಳ್ಳು​ತ್ತಾರೋ ಅದ​ರಂತೆ ನಾನು ನಡೆ​ದು​ಕೊ​ಳ್ಳು​ತ್ತೇನೆ. ಮಂಡ್ಯ ಜನರ ಅಭಿ​ಪ್ರಾ​ಯಕ್ಕೆ ವಿರು​ದ್ಧ​ವಾಗಿ ನಾನು ಯಾವ ರಾಜ​ಕೀಯ ನಿರ್ಧಾ​ರ​ವನ್ನೂ ತೆಗೆ​ದು​ಕೊ​ಳ್ಳು​ವು​ದಿಲ್ಲ ಎಂದು ಅವರು ಹೇಳಿ​ದ​ರು.