ನೂತನ ರಿಯಲ್ ಎಸ್ಟೇಟ್ ಕಾಯ್ದೆಯನ್ನು ಬಹುತೇಕ ರಿಯಲ್ ಎಸ್ಟೇಟ್ ಉದ್ಯಮವು ಸ್ವಾಗತಿಸಿದೆ. ಎಲ್ಲಾ ಕೇಂದ್ರಾಡಳಿತ ಪ್ರದೇಶಗಳು ಕಾಯ್ದೆಗೆ ಒಪ್ಪಿಗೆ ನೀಡಿವೆ. ಉತ್ತರಪ್ರದೇಶ, ಗುಜರಾತ್, ಒಡಿಶಾ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಬಿಹಾರ ರಾಜ್ಯಗಳೂ ಕೂಡ ನೂತನ ಕಾಯ್ದೆಯನ್ನು ಅಪ್ಪಿಕೊಂಡಿವೆ.
ನವದೆಹಲಿ(ಮೇ 01): ಕೇಂದ್ರ ಸರಕಾರ ಹೊರಡಿಸಿರುವ ರಿಯಲ್ ಎಸ್ಟೇಟ್ ಕಾಯ್ದೆ ಇಂದಿನಿಂದ ಜಾರಿಗೆ ಬಂದಿದೆ. ಕಾಯ್ದೆಲ್ಲಿರುವ ಎಲ್ಲಾ 92 ಸೆಕ್ಷನ್'ಗಳೂ ಇವತ್ತಿನಿಂದಲೇ ಅನ್ವಯಗೊಳ್ಳಲಿವೆ. ಆದರೆ, 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾತ್ರ ಸದ್ಯಕ್ಕೆ ಈ ಕಾಯ್ದೆಗೆ ಅಂಕಿತ ಹಾಕಿವೆ. ಇನ್ನುಳಿದ ರಾಜ್ಯಗಳು ಮುಂದಿನ ದಿನಗಳಲ್ಲಿ ಕಾಯ್ದೆಯನ್ನು ಜಾರಿಗೊಳಿಸುವ ನಿರೀಕ್ಷೆ ಇದೆ.
ರಿಯಲ್ ಎಸ್ಟೇಟ್ ಕಾಯ್ದೆ ಜಾರಿಗೆ ಬರುತ್ತಿರುವುದು ಹೊಸ ಯುಗದ ಆರಂಭವಾದಂತಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವ ವೆಂಕಯ್ಯ ನಾಯ್ಡು ವರ್ಣಿಸಿದ್ದಾರೆ. ನೂತನ ಕಾಯ್ದೆಯಿಂದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಪಾರದರ್ಶಕತೆ ಮೂಡುತ್ತದೆ. ಗ್ರಾಹಕನೇ ಕಿಂಗ್ ಎನಿಸುತ್ತಾನೆ. ರಿಯಲ್ ಎಸ್ಟೇಟ್ ಕ್ಷೇತ್ರದ ವಿಶ್ವಾಸಾರ್ಹತೆ ಹೆಚ್ಚುತ್ತದೆ ಎಂದು ಕೇಂದ್ರ ಸಚಿವರು ವಿವರಿಸಿದ್ದಾರೆ.
ಕಾಯ್ದೆ ಪ್ರಕಾರ, ಪ್ರತೀ ರಾಜ್ಯದಲ್ಲೂ ರಿಯಲ್ ಎಸ್ಟೇಟ್ ಪ್ರಾಧಿಕಾರವನ್ನು ಸ್ಥಾಪಿಸಬೇಕು. ಅಲ್ಲದೇ ರಿಯಲ್ ಎಸ್ಟೇಟ್ ಡೆವಲಪರ್'ಗಳು ತಮ್ಮ ಪ್ರಾಜೆಕ್ಟ್'ಗಳನ್ನು ಪ್ರಾಧಿಕಾರದಲ್ಲಿ ನೊಂದಣಿ ಮಾಡಬೇಕು. ಪ್ರಾಜೆಕ್ಟ್ ನಿರ್ಮಾಣ ಸಂಬಂಧ ಗ್ರಾಹಕರಿಂದ ಪಡೆದ ಶೇ.70ರಷ್ಟು ಹಣವನ್ನು ಪ್ರತ್ಯೇಕ ಬ್ಯಾಂಕ್ ಅಕೌಂಟ್'ನಲ್ಲಿ ಡೆಪಾಸಿಟ್ ಮಾಡಬೇಕು. ನಿರ್ಮಾಣ ಕಾಮಗಾರಿಗೆ ಮಾತ್ರ ಈ ಖಾತೆಯಿಂದ ಹಣ ವಿತ್'ಡ್ರಾ ಮಾಡಿಕೊಳ್ಳಬಹುದು. ಪ್ರಾಜೆಕ್ಟ್'ಗಳನ್ನು ಸಕಾಲದಲ್ಲಿ ಮುಗಿಸದ ಸಂಸ್ಥೆಗಳಿಗೆ ದಂಡ ಹೇರಲಾಗುತ್ತದೆ. ಇದರಿಂದ ನಕಲಿ ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ನಿವಾರಿಸಲು ಸಾಧ್ಯ ಎನ್ನುತ್ತಾರೆ ತಜ್ಞರು.
ನೂತನ ರಿಯಲ್ ಎಸ್ಟೇಟ್ ಕಾಯ್ದೆಯನ್ನು ಬಹುತೇಕ ರಿಯಲ್ ಎಸ್ಟೇಟ್ ಉದ್ಯಮವು ಸ್ವಾಗತಿಸಿದೆ. ಎಲ್ಲಾ ಕೇಂದ್ರಾಡಳಿತ ಪ್ರದೇಶಗಳು ಕಾಯ್ದೆಗೆ ಒಪ್ಪಿಗೆ ನೀಡಿವೆ. ಉತ್ತರಪ್ರದೇಶ, ಗುಜರಾತ್, ಒಡಿಶಾ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಬಿಹಾರ ರಾಜ್ಯಗಳೂ ಕೂಡ ನೂತನ ಕಾಯ್ದೆಯನ್ನು ಅಪ್ಪಿಕೊಂಡಿವೆ.
ಭಾರತದಲ್ಲಿ ಒಂದು ಅಂದಾಜಿನಂತೆ 76 ಸಾವಿರಕ್ಕೂ ಹೆಚ್ಚು ರಿಯಲ್ ಎಸ್ಟೇಟ್ ಕಂಪನಿಗಳಿವೆ ಎನ್ನಲಾಗಿದೆ.
