ನವದೆಹಲಿ[ಮೇ.10]: ಭಯೋತ್ಪಾದನೆ ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಆರೋಪದಡಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದಿಂದ ಬಂಧನ ಭೀತಿಗೊಳಗಾಗಿ ವಿದೇಶದಲ್ಲಿ ತಲೆ ಮರೆಸಿಕೊಂಡ ವಿವಾದಿತ ಇಸ್ಲಾಂ ಧರ್ಮ ಪ್ರಚಾರಕ ಝಾಕೀರ್‌ ನಾಯ್ಕ್ ಭಾರತಕ್ಕೆ ಹಿಂತಿರುಗುವ ಮಾತುಗಳನ್ನಾಡಿದ್ದಾನೆ. ಆದರೆ, ಅದಕ್ಕೂ ಮುನ್ನ ಭಯೋತ್ಪಾದನೆ ಪ್ರಕರಣದಲ್ಲಿ ತಾನು ತಪ್ಪಿತಸ್ಥ ಎಂದು ಸಾಬೀತಾಗುವವರೆಗೂ ತನ್ನನ್ನು ಬಂಧಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಭರವಸೆ ನೀಡಬೇಕು ಎಂಬ ಷರತ್ತು ಮುಂದಿಟ್ಟಿದ್ದಾನೆ.

‘ದಿ ವೀಕ್‌’ ಮ್ಯಾಗಜೀನ್‌ಗೆ ಸಂದರ್ಶನ ನೀಡಿದ ನಾಯ್ಕ್, ‘ನನಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆಯಿದೆ. ಆದರೆ, ಬಿಜೆಪಿ ಸರ್ಕಾರ ಬರುವ ಮುಂಚೆ ನೀವು ಸರ್ಕಾರದ ವಿರುದ್ಧ ಧ್ವನಿಯೆತ್ತಬಹುದಿತ್ತು. ಅಲ್ಲದೆ, ಯಾವುದೇ ಪ್ರಕರಣದಲ್ಲಿ ನೀವು ಶೇ.80ರಷ್ಟುಪ್ರಮಾಣದಲ್ಲಿ ನ್ಯಾಯ ನಿರೀಕ್ಷಿಸಬಹುದಿತ್ತು. ಆದರೆ, ಇಂದು ಶೇ.10-20 ಪ್ರಮಾಣದಲ್ಲಿ ಮಾತ್ರವೇ ನ್ಯಾಯ ಸಿಗುತ್ತಿದೆ,’ ಎಂದು ಆರೋಪಿಸಿದರು.

ಉಗ್ರ ಎಂಬ ಆರೋಪ ಹೊತ್ತ ಶೇ.90ರಷ್ಟುಮುಸ್ಲಿಮರು 10-15 ವರ್ಷದ ಬಳಿಕ ಖುಲಾಸೆಗೊಂಡರು. ಅದೇ ರೀತಿ ನಾನು ಒಂದು ಬಾರಿ ಬಂಧನಕ್ಕೊಳಗಾದರೆ, ಕನಿಷ್ಠ 10 ವರ್ಷ ಬಂಧನದಲ್ಲಿಡಲಾಗುತ್ತದೆ. ಹಾಗಾಗಿ, ಭಾರತಕ್ಕೆ ಬರುವ ಮೂಲಕ ನಾನೇಕೆ ಮೂರ್ಖನಾಗಲಿ ಎಂಬ ದಾಟಿಯಲ್ಲಿ ನಾಯ್ಕ್ ಮಾತನಾಡಿದ್ದಾನೆ. ನನ್ನನ್ನು ವಿಚಾರಣೆಗೊಳಪಡಿಸಬೇಕಿಂದಿದ್ದರೆ, ಎನ್‌ಐಎ ತಂಡ ಮಲೇಷಿಯಾಕ್ಕೆ ಬಂದು ವಿಚಾರಣೆ ನಡೆಸಬಹುದು ಎಂದಿದ್ದಾನೆ ನಾಯ್ಕ್.