ಕಲಾವಿದರನ್ನು ಹಾಕಿಕೊಂಡು ಶೂಟ್ ಮಾಡಿರುವ ವಿಡಿಯೋವಾದರೂ ಅದರಲ್ಲಿರುವ ಸಂದೇಶ ನಿಜಕ್ಕೂ ವಾಸ್ತವಿಕವಾದುದು.

ನವದೆಹಲಿ(ಜ. 19): ಹುಡುಗಿಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳು ದೇಶಾದ್ಯಂತ ಬೆಳಕಿಗೆ ಬರುತ್ತಲೇ ಇವೆ. ಹುಡುಗಿಯರನ್ನು ಹುಡುಗರು ನೋಡುವ ದೃಷ್ಟಿಕೋನ ಬದಲಾಗದಿದ್ದರೆ ಇಂತಹ ಘಟನೆಗಳು ಜರುಗುತ್ತಲೇ ಇರುತ್ತವೆ ಎಂದು ಮನಃಶಾಸ್ತ್ರಜ್ಞರು ಹೇಳುತ್ತಲೇ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಪೂರಕವಾಗಿ ಚಿಕ್ಕದೊಂದು ವಿಡಿಯೋ ಯೂಟ್ಯೂಬ್'ನಲ್ಲಿ ಗಮನ ಸೆಳೆಯುತ್ತಿದೆ. ತುಂಡುಡುಗೆ ತೊಟ್ಟ ಹುಡುಗಿಯೊಬ್ಬಳು ಪಾರ್ಕ್'ನಲ್ಲಿ ನಡೆದುಹೋಗುವಾಗ ಹುಡುಗನೊಬ್ಬ ಹೇಗೆ ರಿಯಾಕ್ಟ್ ಮಾಡುತ್ತಾನೆ ಎಂಬುದು ಈ ವಿಡಿಯೋದ ಮುಖ್ಯಾಂಶ. ಕಲಾವಿದರನ್ನು ಹಾಕಿಕೊಂಡು ಶೂಟ್ ಮಾಡಿರುವ ವಿಡಿಯೋವಾದರೂ ಅದರಲ್ಲಿರುವ ಸಂದೇಶ ನಿಜಕ್ಕೂ ವಾಸ್ತವಿಕವಾದುದು.

ಹುಡುಗಿ ನಡೆದುಹೋಗುವಾಗ ಪಾರ್ಕ್'ನ ಬೆಂಚ್'ನಲ್ಲಿ ಇಬ್ಬರು ಹುಡುಗರು ಕೂತಿರುತ್ತಾರೆ. ಹುಡುಗಿ ಕಂಡು ಅವರಲ್ಲಿ ಒಬ್ಬ ಯುವಕ ಉದ್ರೇಕಗೊಳ್ಳುತ್ತಾನೆ. ಅಸಭ್ಯವಾಗಿ ಕಮೆಂಟ್ ಮಾಡುತ್ತಾನೆ. ಜೊತೆಯಲ್ಲಿದ್ದ ಮತ್ತೊಬ್ಬ ಯುವಕ ಹೀಗೆ ಮಾಡಬಾರದೆಂದು ತಿಳಿಹೇಳಲು ಪ್ರಯತ್ನಿಸುತ್ತಾನೆ. ಅವಳು ಜೀನ್ಸ್ ಪ್ಯಾಂಟ್, ಸ್ಲೀವ್'ಲೆಸ್ ಬಟ್ಟೆ ತೊಟ್ಟಿದ್ದಾಳೆ. ಇದು ಹುಡುಗರಿಗೆ ಚುಡಾಯಿಸಲು ಸಹಜವಾಗಿಯೇ ಆಹ್ವಾನ ಕೊಟ್ಟಂತಲ್ಲವಾ? ಎಂದು ಮೊದಲ ಯುವಕ ಪ್ರಶ್ನಿಸುತ್ತಾನೆ. ಆಗ ಎರಡನೇ ಯುವಕ ಆತನನ್ನು ಹುಡುಗಿಯ ಬಳಿಗೆ ಕರೆದೊಯ್ದು ಆಕೆಗೆ ಹೇಳುತ್ತಾನೆ: "ನೀವು ಸ್ಲೀವ್'ಲೆಸ್ ತೊಟ್ಟಿರುವುದರಿಂದ ಈತ ಚುಡಾಯಿಸುತ್ತಾನಂತೆ, ಈತನೂ ಕೂಡ ಸ್ಲೀವ್ಲೆಸ್ ಬನಿಯನ್ ಮತ್ತು ಶಾರ್ಟ್ಸ್ ತೊಟ್ಟಿದ್ದಾನೆ. ನೀವೂ ಈತನನ್ನು ಚುಡಾಯಿಸಿ" ಎಂದು ಸೂಚಿಸುತ್ತಾನೆ. ಅದಕ್ಕೆ ಹುಡುಗಿ ಆಗದು ಎಂದು ಹೋಗುತ್ತಾಳೆ.

ನೀತಿ ಪಾಠ: ಅಶ್ಲೀಲತೆ ಎನ್ನುವುದು ನೋಡುವ ದೃಷ್ಟಿಯಲ್ಲಿದೆಯೇ ಹೊರತು ಬಟ್ಟೆಯಲ್ಲಲ್ಲ.