ಭಾರತೀಯ ರಿಸರ್ವ್ ಬ್ಯಾಂಕ್‌ ಬಡ್ಡಿರಹಿತ ಬ್ಯಾಂಕಿಂಗ್‌'ನತ್ತ ಹೆಜ್ಜೆ ಇಡಲು ಯೋಜಿಸುತ್ತಿರುವ ಹಿನ್ನೆಲೆಯಲ್ಲಿ ಅಂತಹ ವ್ಯವಸ್ಥೆಯ ಸಾಧಕ- ಬಾಧಕಗಳ ಬಗ್ಗೆ ಇಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ.

ಬಡ್ಡಿರಹಿತ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಜಾರಿಗೆ ತರುವ ಬಗ್ಗೆ ಭಾರತೀಯ ರಿಸವ್‌ರ್‍ ಬ್ಯಾಂಕ್‌ ಆಸಕ್ತಿ ತೋರಿಸಿದೆ. ಕೆಲವು ಮುಸ್ಲಿಂ ರಾಷ್ಟ್ರಗಳಲ್ಲಿ ಇಸ್ಲಾಂನ ಶರಿಯಾ ನಿಯಮಗಳಿಗೆ ಅನುಸಾರವಾಗಿ­ರುವ ಬಡ್ಡಿರಹಿತ ಬ್ಯಾಂಕಿಂಗ್‌ ವ್ಯವಸ್ಥೆ ಜನಪ್ರಿಯ. ಅದೇ ಮಾದರಿಯಲ್ಲಿ ದೇಶದ ಬ್ಯಾಂಕಿಂಗ್‌ ವ್ಯವಸ್ಥೆ­ಯಲ್ಲಿ ‘ಇಸ್ಲಾಮಿಕ್‌ ವಿಂಡೋ' ತೆರೆಯುವ ಮೂಲಕ ಧಾರ್ಮಿಕ ಮತ್ತು ಸಾಂಪ್ರ​ದಾಯಿಕ ನಂಬಿಕೆಯ ಕಾರಣದಿಂದ ಸಾಮಾನ್ಯ ಬ್ಯಾಂಕಿಂಗ್‌ ವ್ಯವಸ್ಥೆಯಿಂದ ಹೊರಗಿರುವ ದೊಡ್ಡ ಮೊತ್ತದ ಹಣವನ್ನು ಬ್ಯಾಂಕಿಂಗ್‌ ವ್ಯವಸ್ಥೆಯ ಒಳತರುವ ಉದ್ದೇಶ ಕೂಡ ಆರ್‌ಬಿಐ ಹೊಂದಿದೆ. ಯುಪಿಎ ಸರ್ಕಾರದ ಅವಧಿಯಲ್ಲಿಯೇ ಒಮ್ಮೆ ಇಂತಹ​ದ್ದೊಂದು ಪ್ರಸ್ತಾಪ ಬಂದಿತ್ತು. ಇದೀಗ ಮತ್ತೊಮ್ಮೆ ಬಡ್ಡಿರಹಿತ ಬ್ಯಾಂಕಿಂಗ್‌ ವ್ಯವಸ್ಥೆಯತ್ತ ಆರ್‌ಬಿಐ ಗಮನಹರಿಸಿದೆ. ಆ ಹಿನ್ನೆಲೆಯಲ್ಲಿ ಬಡ್ಡಿ­ರಹಿತ ಬ್ಯಾಂಕಿಂಗ್‌ ವ್ಯವಸ್ಥೆ ಬಗ್ಗೆ ವಿವರಣೆ.

ಶರಿಯಾ ಬ್ಯಾಂಕಿಂಗ್‌ ಎಂದರೇನು?
ಇಸ್ಲಾಂ ಹಣಕಾಸು ನೀತಿಗಳ ಮೂಲ ನಿಯಮ ಉಜು­ರಿಯ (ಅಧಿಕ ಬಡ್ಡಿ) ನಿರಾಕರಣೆ. ಯಾವುದೇ ಬಗೆಯ ಅನೈತಿಕ, ಧರ್ಮನಿಷಿದ್ಧ ವ್ಯವಹಾರಗಳಿಂದ ಗಳಿಸಿದ ಹಣ ಅದಾಗಿರಬಾರದು. ಸಾಲ ನೀಡುವಾಗ ನ್ಯಾಯ​ಯುತವಲ್ಲದ ಪ್ರಮಾಣದ ಬಡ್ಡಿ ಹಾಕುವು​ದನ್ನು ಉಜುರಿ ಎನ್ನುತ್ತದೆ ಶರಿಯಾ ಕಾನೂನು. ಸಾಮಾನ್ಯ ಬಡ್ಡಿಗೆ ರಿಬಾ ಎನ್ನಲಾಗುತ್ತದೆ. ಆದರೆ, ಕಾನೂನಿನ ಪ್ರಕಾರ ಮುಸ್ಲಿಮರು ಬಡ್ಡಿ ತೆರುವುದು ಮತ್ತು ಪಡೆಯುವುದು ನಿಷಿದ್ಧ. ಶರಿಯಾ ಬ್ಯಾಂಕಿಂಗ್‌ ಎಂದರೆ ಬಡ್ಡಿ ಇಲ್ಲದೆ ಹಣ ಇಡುವುದು. ಹಾಗೆ ಇಟ್ಟಹಣವನ್ನು ಜೂಜು, ಬೆಟ್ಟಿಂಗ್‌, ಇಸ್ಲಾಂನಲ್ಲಿ ನಿಷೇಧಿತ ಮದ್ಯ ಸಂಬಂಧಿತ ವ್ಯವಹಾರಗಳಲ್ಲಿ ತೊಡಗಿಸು­ವಂತಿಲ್ಲ.

ಪ್ರಸ್ತುತ ಆರ್‌'ಬಿಐನ ಹೊಸ ವ್ಯವಸ್ಥೆಯ ಉದ್ದೇಶ?
ಧಾರ್ಮಿಕ ಕಟ್ಟಳೆಗಳ ಕಾರಣ​ದಿಂದ ಬ್ಯಾಂಕಿಂಗ್‌ ವ್ಯವಸ್ಥೆ­ಯಿಂದ ಹೊರಗಿರುವ ಧರ್ಮ­ನಿಷ್ಠ ಮುಸ್ಲಿಮ­ರನ್ನು ವ್ಯವಸ್ಥೆ­ಯಡಿ ತರುವುದು ಮುಖ್ಯ ಉದ್ದೇಶ. ಆ ಮೂಲಕ ದೇಶದ ವ್ಯವಸ್ಥಿತ ಹಣಕಾಸು ವಲಯದ ಹೊರಗೆ ಚಲಾವಣೆ​ಯಾಗು​ತ್ತಿರುವ ದೊಡ್ಡ ಮೊತ್ತದ ಹಣವನ್ನು ಒಳಗೆ ತರುವುದು. ಆದರೆ, ಈಗಿನ ಸ್ಥಿತಿ­ಯಲ್ಲಿ ದೇಶದ ಎಷ್ಟುಪ್ರಮಾಣದ ಮುಸ್ಲಿಮರು ಬ್ಯಾಂಕ್‌ ಖಾತೆ ಹೊಂದಿ​ದ್ದಾರೆ ಎಂಬ ನಿಖರ ಮಾಹಿತಿ ಇಲ್ಲ. ಆದರೆ, 2006ರ ಸಾಚಾರ್‌ ವರದಿ ಪ್ರಕಾರ ಮುಸ್ಲಿಮರು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಶೇ.12.2­ರಷ್ಟುಮತ್ತು ಖಾಸಗಿ ವಲಯದ ಬ್ಯಾಂಕು​ಗಳಲ್ಲಿ ಶೇ. ಶೇ.11.3ರಷ್ಟು ಖಾತೆ ಹೊಂದಿದ್ದಾರೆ. ಆದರೆ, ಬಹು­ತೇಕ ಮುಸ್ಲಿಮರು ಸಾಂಪ್ರದಾಯಿಕ ಬ್ಯಾಂಕಿಂಗ್‌ ವ್ಯವಸ್ಥೆ­ಯಡಿ ಬಂದಿದ್ದಾರೆ ಮತ್ತು ಅವರು ಬ್ಯಾಂಕಿಂಗ್‌ ನಿಯಮದಂತೆ ತಮ್ಮ ವ್ಯವಹಾರಗಳಿಗೆ ಬಡ್ಡಿ ಪಡೆಯು­ತ್ತಿದ್ದಾರೆ ಮತ್ತು ತೆರುತ್ತಿದ್ದಾರೆ. ಅದಕ್ಕೆ ಕಾರಣ, ಕೆಲವು ಧಾರ್ಮಿಕ ಮುಖಂಡರ ಪ್ರಕಾರ, ಬ್ಯಾಂಕುಗಳ ಬಡ್ಡಿ ಎಂಬುದು ಉಜುರಿ ಅಲ್ಲ. ಕೆಲವು ನಿಗದಿತ ಪ್ರಮಾಣ­ದಲ್ಲಿ ಬಡ್ಡಿ ಪಡೆಯುವುದು ಮತ್ತು ತೆರುವುದಕ್ಕೆ ಅವಕಾಶವಿದೆ. ಆ ಹಿನ್ನೆಲೆಯಲ್ಲೇ ಪಾಕಿಸ್ತಾನದ ಸೇರಿ­ದಂತೆ ಇಸ್ಲಾಮಿಕ್‌ ಜಗತ್ತಿನ ಹಲವು ರಾಷ್ಟ್ರಗಳು ಈ ಬ್ಯಾಂಕಿಂಗ್‌ ವ್ಯವಸ್ಥೆ ಅನುಸರಿಸುತ್ತಿವೆ.

ಶರಿಯಾ ಬ್ಯಾಂಕಿಂಗ್‌ ವ್ಯವಸ್ಥೆಯ ಅಗತ್ಯವೇನಿದೆ?
ಭಾರತದಲ್ಲಿ ಸಾಕಷ್ಟುಸಂಖ್ಯೆಯ ಕಟ್ಟಾಧಾರ್ಮಿಕ ಮನೋಧರ್ಮದ ಮುಸ್ಲಿಮರು ಬ್ಯಾಂಕಿಂಗ್‌ ವ್ಯವಸ್ಥೆ­ಯಡಿ ಬಂದಿಲ್ಲ. ಅಲ್ಲದೆ, ಇಸ್ಲಾಮಿಕ್‌ ಜಗತ್ತಿನಲ್ಲಿ ಶೇಖರಣೆಯಾಗಿರುವ ಭಾರತೀಯ ಮುಸ್ಲಿಮರ ಭಾರೀ ಪ್ರಮಾಣದ ಸಂಪತ್ತು ದೇಶದ ಆರ್ಥಿಕತೆ­ಯಿಂದ ಹೊರಗೇ ಇದೆ. ಶರಿಯಾ ಬ್ಯಾಂಕಿಂಗ್‌ ವ್ಯವಸ್ಥೆ ಜಾರಿಯಾದಲ್ಲಿ ಇದು ಬ್ಯಾಂಕಿಂಗ್‌ ವ್ಯವಸ್ಥೆಯಡಿ ಬರಲಿದೆ ಎಂಬ ಲೆಕ್ಕಾಚಾರ.

ಆದರೆ, ಬಡ್ಡಿ ಪಡೆಯದೆ ಅಥವಾ ತೆರದೆ ಬ್ಯಾಂಕುಗಳು ಹೇಗೆ ಕೆಲಸ ಮಾಡುತ್ತವೆ?
ಸಾಲ ನೀಡುವಾಗ ಬಡ್ಡಿ ವಿಧಿಸುವುದು ಮತ್ತು ಠೇವಣಿ ಹಣಕ್ಕೆ ಬಡ್ಡಿ ತೆರುವುದು ಬ್ಯಾಂಕಿಂಗ್‌ ವ್ಯವಸ್ಥೆಯ ಮೂಲತತ್ವ. ಆದರೆ, ಜಗತ್ತಿನಲ್ಲಿ ಹೀಗೆ ಬಡ್ಡಿಯ ಅಗ­ತ್ಯವೇ ಇಲ್ಲದಂತೆ ತಮ್ಮ ವ್ಯವಹಾರ ರೂಪಿಸಿಕೊಂಡು, ರೂಢಿಸಿಕೊಂಡು ಬರುತ್ತಿರುವ ಬ್ಯಾಂಕ್‌'ಗಳೂ ಇವೆ. ಅಲ್ಲಿ ಶರಿಯಾ ನಿಯಮದಂತೆ ಸಾಲ ಪಡೆ​ಯು​​ವವರಿಗೆ ‘ಇಜಾರಾ' ಸೌಲಭ್ಯ ಲಭ್ಯವಿದೆ. ಅಂದರೆ, ಗ್ರಾಹಕರ ಪರವಾಗಿ ಬ್ಯಾಂಕ್‌ ನಿರ್ದಿಷ್ಟ ಆಸ್ತಿ ಖರೀದಿಸಿ, ಅದನ್ನು ಬಾಡಿಗೆಗೆ ನೀಡು​ತ್ತದೆ. ಪರಸ್ಪರ ಒಪ್ಪಿತ ಅವಧಿಯ ಬಳಿಕ ಬ್ಯಾಂಕು ಮತ್ತೆ ಗ್ರಾಹಕನಿಗೆ ಆ ಆಸ್ತಿಯನ್ನು ಬಿಟ್ಟುಕೊಡುತ್ತದೆ. ಮತ್ತೊಂದು ವಿಧದ ‘ಮುರಬಹ' ವ್ಯವಸ್ಥೆಯಲ್ಲಿ, ಬ್ಯಾಂಕ್‌ ಮಾರುಕಟ್ಟೆದರದಲ್ಲಿ ಆಸ್ತಿ­ ಖರೀದಿಸಿ ಮತ್ತೊಬ್ಬರಿಗೆ ಮಾರುತ್ತದೆ. ಗ್ರಾಹಕ ಮೊತ್ತವನ್ನು ಕಂತುಗಳ ಪ್ರಕಾರ ತೀರಿಸಬಹುದು.
‘ಮುಷರಕ' ವ್ಯವಸ್ಥೆಯಲ್ಲಿ ಬ್ಯಾಂಕ್‌ ಮತ್ತು ಗ್ರಾಹಕರ ಜಂಟಿ ಹೂಡಿಕೆ ಇರುತ್ತದೆ. ಹೂಡಿಕೆ ಅಥವಾ ಖರೀದಿಯಲ್ಲಾಗುವ ಲಾಭ/ ನಷ್ಟವನ್ನು ಒಪ್ಪಂದದ ಪ್ರಕಾರ ಹಂಚಿಕೊಳ್ಳಲಾಗುತ್ತದೆ.

ಉಳಿತಾಯ ಖಾತೆಯಂತಹ ವ್ಯವಹಾರಗಳು?
ಶರಿಯಾ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಉಳಿತಾಯ ಖಾತೆ ವ್ಯವಹಾರಕ್ಕೆ ಎರಡು ಬಗೆ ಇವೆ. ಒಂದು; ಗ್ರಾಹಕ ಹಣವನ್ನು ಖಾತೆಗೆ ಜಮಾ ಮಾಡಿ, ಅದನ್ನು ಬ್ಯಾಂಕ್‌ ಬಳಸಲು ಅವಕಾಶ ನೀಡುವುದು ಮತ್ತು ಬೇಕಾದಾಗ ಬ್ಯಾಂಕ್‌ ಪೂರ್ಣ ಹಣವನ್ನು ವಾಪಸು ಕೊಡುವಂತೆ ಒಪ್ಪಂದ ಮಾಡಿಕೊಳ್ಳುವುದು. ಅದಕ್ಕಾಗಿ ಬ್ಯಾಂಕುಗಳು ಯಾವುದೇ ಬಡ್ಡಿ ನೀಡುವುದಿಲ್ಲ. ಆದರೆ, ಕೆಲವು ಬ್ಯಾಂಕುಗಳು ಗ್ರಾಹಕನಿಗೆ ಹಣ ವಾಪಸು ಕೊಡುವಾಗ ಆ ಹಣ ಬಳಸಿ ತಾನು ನಡೆಸಿದ ವ್ಯವಹಾರದ ಲಾಭಾಂ​ಶದಲ್ಲಿ ಒಂದು ಭಾಗ ಲಾಭ ಎಂದು ನೀಡು​ತ್ತವೆ. ಎರಡನೆಯ ಬಗೆ; ಗ್ರಾಹಕ ತನ್ನ ಹಣವನ್ನು ನಿರ್ದಿಷ್ಟಯೋಜನೆಗಳಲ್ಲಿ ಹೂಡಲು ಬ್ಯಾಂಕಿಗೆ ಕೋರುತ್ತಾನೆ ಮತ್ತು ನಿಗದಿತ ಅವಧಿಯ ಬಳಿಕ ಅದರ ಲಾಭ/ ನಷ್ಟವನ್ನು ಪಡೆಯುತ್ತಾನೆ. 

ವಿಶ್ವಾದ್ಯಂತ ಶರಿಯಾ ಬ್ಯಾಂಕಿಂಗ್‌ ವ್ಯವಸ್ಥೆ ಹೇಗಿದೆ?
ವಿಶ್ವಬ್ಯಾಂಕಿನ 2015ರ ವರದಿ ಪ್ರಕಾರ, ಜಾಗತಿಕವಾಗಿ ಬ್ಯಾಂಕಿಂಗ್‌ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಸೇರಿದಂತೆ ಶರಿಯಾ ಬ್ಯಾಂಕಿಂಗ್‌ ವ್ಯವಸ್ಥೆಯ ಒಟ್ಟು ಮೌಲ್ಯ .136 ಲಕ್ಷ ಕೋಟಿ. ಇಸ್ಲಾಮಿಕ್‌ ಹಣಕಾಸು ಉದ್ಯಮ ವಾರ್ಷಿಕ ಶೇ.10-12ರ ದರದಲ್ಲಿ ಬೆಳವ­ಣಿಗೆ ಹೊಂದುತ್ತಿದೆ. ಅಲ್ಲದೆ, ಹಲವು ಮುಸ್ಲಿಂ ಜಗತ್ತಿನ ರಾಷ್ಟ್ರಗಳಲ್ಲಿ ಸಾಂಪ್ರದಾಯಿಕ ಬ್ಯಾಂಕುಗಳಿಗಿಂತ ಹೆಚ್ಚಿನ ವೇಗದಲ್ಲಿ ಶರಿಯಾ ಬ್ಯಾಂಕುಗಳ ಆಸ್ತಿ ವೃದ್ಧಿಸು­ತ್ತಿದೆ. ಅಲ್ಲದೆ, ಬ್ರಿಟನ್‌, ಲಕ್ಸೆಂಬರ್ಗ್‌, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಕೂಡ ಈ ಇಸ್ಲಾಮಿಕ್‌ ಹಣಕಾಸು ಪದ್ಧತಿಯ ಬಗ್ಗೆ ಹೆಚ್ಚಿನ ಆಸಕ್ತಿ ಕಾಣುತ್ತಿದೆ.

ಭಾರತದಲ್ಲಿ ಶರಿಯಾ ಬ್ಯಾಂಕಿಂಗ್‌ ವ್ಯವಸ್ಥೆ ಜಾರಿ ಮಾಡುವಲ್ಲಿ ಇರುವ ಅಡ್ಡಿಗಳೇನು?
ಮೊದಲನೆಯದಾಗಿ ಅದಕ್ಕೆ ಶಿವಸೇನಾ ಸೇರಿದಂತೆ ಕೆಲವು ರಾಜಕೀಯ ಪಕ್ಷಗಳ ವಿರೋಧವಿದೆ. ಬಡ್ಡಿ ಪಡೆಯಲು ಮತ್ತು ನೀಡಲು ಕಟ್ಟುನಿಟ್ಟಿನ ನಿಷೇಧ ಇರುವ ಹಿನ್ನೆಲೆಯಲ್ಲಿ ಶರಿಯಾ ಬ್ಯಾಂಕಿಂಗ್‌ ವ್ಯವಸ್ಥೆ ಜಾರಿಗೆ ಸಾಂಪ್ರದಾಯಿಕ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಬೇಕಾಗುತ್ತದೆ. ಅಲ್ಲದೆ, ಭಾರತದಲ್ಲಿ ಶರಿಯಾ ಬ್ಯಾಂಕಿಂಗ್‌ ವ್ಯವಸ್ಥೆಗೆ ಅಗತ್ಯ ಪರಿಣತ ಸಿಬ್ಬಂದಿಯ ಕೊರತೆ ಇದೆ.

ಭಾರತದಲ್ಲಿ ಈವರೆಗೆ ಶರಿಯಾ ಬ್ಯಾಂಕಿಂಗ್‌ ವ್ಯವಸ್ಥೆ ನಿಟ್ಟಿನಲ್ಲಿ ತೆಗೆದುಕೊಂಡ ಕ್ರಮಗಳೇನು?
ಯುಪಿಎ ಸರ್ಕಾರದ ಅವಧಿಯಲ್ಲಿ, 2008ರಲ್ಲೇ ರಘುರಾಂ ರಾಜನ್‌ ಅವರ ನೇತೃತ್ವದ ಸಮಿತಿ ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಿತ್ತು. ಧಾರ್ಮಿಕ ಅಥವಾ ಸಾಂಪ್ರದಾಯಿಕ ನಂಬಿಕೆಯ ಕಾರಣಕ್ಕಾಗಿ ಭಾರತದ ಬಹಳಷ್ಟುಮಂದಿ, ನಿಜವಾಗಿಯೂ ಆರ್ಥಿಕ ನೆರವಿನ ಅಗತ್ಯವಿದ್ದರೂ ಬ್ಯಾಂಕುಗಳ ಸಾಲ-ಸೌಲಭ್ಯದಿಂದ ದೂರ ಉಳಿದಿದ್ದಾರೆ. ಆ ಹಿನ್ನೆಲೆಯಲ್ಲಿ ಬಡ್ಡಿರಹಿತ ವ್ಯವಸ್ಥೆಯ ಮೂಲಕ ಅವರನ್ನು ಬ್ಯಾಂಕುಗಳು ತಲುಪಬಹುದು ಎಂದು ಸಮಿತಿ ಅಭಿಪ್ರಾಯಪಟ್ಟಿತ್ತು. ಇದೀಗ ಆರ್‌ಬಿಐ, ಈ ನಿಟ್ಟಿನಲ್ಲಿ ಯೋಚಿಸಿದ್ದು, ಹಂತಹಂತವಾಗಿ ಬಡ್ಡಿರಹಿತ ಬ್ಯಾಂಕಿಂಗ್‌ ವ್ಯವಸ್ಥೆ ಜಾರಿ ಮಾಡುವ ಇಂಗಿತ ವ್ಯಕ್ತಪಡಿಸಿದೆ.

(epaper.kannadaprabha.in)