ನಿಷೇಧಗೊಂಡಿರುವ ರೂ.500 ಹಾಗೂ ರೂ.1000 ಮುಖಬೆಲೆ ನೋಟುಗಳನ್ನು ನಾಶಪಡಿಸುವುದಕ್ಕೆ ಆರ್ ಬಿಐಗೆ ಒಂದು ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಮುಂಬೈ (ನ.30): ನಿಷೇಧಗೊಂಡಿರುವ ರೂ.500 ಹಾಗೂ ರೂ.1000 ಮುಖಬೆಲೆ ನೋಟುಗಳನ್ನು ನಾಶಪಡಿಸುವುದಕ್ಕೆ ಆರ್ ಬಿಐಗೆ ಒಂದು ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಮುಂಬೈ, ಬೆಲಾಪುರ್ ಹಾಗೂ ನಾಗ್ಪುರಗಳಲ್ಲಿ ಈಗಾಗಲೇ ನೋಟುಗಳ ವಿಂಗಡನೆ, ಪರಿಶೀಲನೆ ಹಾಗೂ ಹರಿದು ಹಾಕುವ ಪ್ರಕ್ರಿಯೆ ನಡೆಯುತ್ತಿದೆ.

ಹೆಸರು ಹೇಳಲಿಚ್ಚಿಸದ ಆರ್ ಬಿಐ ಹಿರಿಯ ಅಧಿಕಾರಿಯೊಬ್ಬರು “ ಮುಂಬೈ ನಗರವೊಂದರಲ್ಲೇ ಅಮಾನ್ಯಗೊಂಡ ನೋಟುಗಳ ಪ್ರಮಾಣ 70-80 ಸಾವಿರ ಗೋಣಿಚೀಲಗಳಷ್ಟಿದ್ದು ಅವುಗಳನ್ನು ನೋಟು ಹರಿಯುವ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ" ಎಂದಿದ್ದಾರೆ.

ಅಮಾನ್ಯಗೊಂಡ ಹೆಚ್ಚು ಮುಖಬೆಲೆಯ ನೋಟುಗಳನ್ನು ನಾಶಪಡಿಸುವ ತನಕ ಆರ್ ಬಿಐ ಕಡಿಮೆ ಮುಖಬೆಲೆಯ ಹಾನಿಗೊಂಡ ನೋಟುಗಳನ್ನು ನಾಶಪಡಿಸುವುದನ್ನು ವಿಳಂಬ ಮಾಡುವ ಸಾಧ್ಯತೆಯಿದೆ. ಒಟ್ಟು 15 ಸಾವಿರ ಮಿಲಿಯನ್ ನೋಟುಗಳನ್ನು ನಾಶಪಡಿಸುವ ಅಂದಾಜಿದೆ.