1,000 ಮತ್ತು 500 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದು ಮಾಡುವ ಸಲಹೆ ಮೊದಲು ಬಂದಿದ್ದು ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ ಅಲ್ಲ, ಆ ಸಲಹೆ ಬಂದಿದ್ದು ಕೇಂದ್ರ ಸರ್ಕಾರದಿಂದ ಎಂಬ ವಿಚಾರ ಈಗ ಬಹಿರಂಗವಾಗಿದೆ.

ನವದೆಹಲಿ(ಜ.11): 1,000 ಮತ್ತು 500 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದು ಮಾಡುವ ಸಲಹೆ ಮೊದಲು ಬಂದಿದ್ದು ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ ಅಲ್ಲ, ಆ ಸಲಹೆ ಬಂದಿದ್ದು ಕೇಂದ್ರ ಸರ್ಕಾರದಿಂದ ಎಂಬ ವಿಚಾರ ಈಗ ಬಹಿರಂಗವಾಗಿದೆ.

ಕೇಂದ್ರವು ನವೆಂಬರ್‌ 7ರಂದು ನೀಡಿದ ಸಲಹೆ ಆಧರಿಸಿ, ಆರ್‌'ಬಿಐನ ಆಡಳಿತ ಮಂಡಳಿಯು ನೋಟು ರದ್ದುಪಡಿಸುವಂತೆ ಮರುದಿನವೇ ಶಿಫಾರಸು ಮಾಡಿತು ಎನ್ನುವ ಸಂಗತಿ ಕೂಡ ಆರ್‌'ಬಿಐ ಟಿಪ್ಪಣಿಯಿಂದ ಬೆಳಕಿಗೆ ಬಂದಿದೆ. ‘ಖೋಟಾ ನೋಟುಗಳು, ಭಯೋತ್ಪಾದಕರಿಗೆ ಹಣಕಾಸಿನ ನೆರವು ಸಿಗುತ್ತಿರುವುದು ಮತ್ತು ಕಪ್ಪುಹಣದ ಸಮಸ್ಯೆ ನಿವಾರಿಸಲು ಗರಿಷ್ಠ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ಬಗ್ಗೆ ಪರಿಶೀಲನೆ ನಡೆಸಬಹುದು ಎಂಬ ಸಲಹೆ ಸರ್ಕಾರದಿಂದಲೇ ಬಂದಿತ್ತು ಎಂದು ಆರ್‌'ಬಿಐ ಹೇಳಿದೆ.

ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿಗೆ ನೀಡಿರುವ ಏಳು ಪುಟಗಳ ಟಿಪ್ಪಣಿಯಲ್ಲಿ ಈ ಮಾಹಿತಿ ನೀಡಲಾಗಿದೆ. ಕಾಂಗ್ರೆಸ್ ಸಂಸದ ಎಂ. ವೀರಪ್ಪ ಮೊಯಿಲಿ ಅವರು ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಸರ್ಕಾರದ ಸಲಹೆಯನ್ನು ಪರಿಶೀಲಿಸಲು’ ಆರ್‌ಬಿಐನ ಕೇಂದ್ರೀಯ ಮಂಡಳಿ ಮಾರನೆಯ ದಿನ ಸಭೆ ಸೇರಿತು. ‘ಚರ್ಚೆ ನಡೆಸಿದ ನಂತರ, ಗರಿಷ್ಠ ಮುಖಬೆಲೆಯ ನೋಟುಗಳ ಮಾನ್ಯತೆ ರದ್ದು ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲು ತೀರ್ಮಾನಿಸಿತು’ ಎಂಬ ವಿವರ ಈ ಟಿಪ್ಪಣಿಯಲ್ಲಿದೆ.