Asianet Suvarna News Asianet Suvarna News

ಬ್ರಿಗೇಡ್‌ ನಿಲ್ಲಲ್ಲ: ಈಶ್ವರಪ್ಪ ಹಟ

ಪಕ್ಷ ಸಂಘಟನೆಗೆ ರಾಯಣ್ಣ ಬ್ರಿಗೇಡ್‌ ಅನಿವಾರ್ಯ. ಯಾವುದೇ ಕಾರಣಕ್ಕೂ ಅದರ ಚಟುವಟಿಕೆ ನಿಲ್ಲೋದಿಲ್ಲ. ಆದರೆ, ಸದ್ಯ ಪಕ್ಷದಲ್ಲಿನ ಗೊಂದಲದಿಂದ ನನಗೆ ನೋವಾಗಿದೆ. ಅವರು ಬಿಜೆಪಿಗೆ ದೊಡ್ಡ ಆಸ್ತಿ. ನಾನು, ಯಡಿಯೂರಪ್ಪ ಅಣ್ಣ ತಮ್ಮಂದಿರಿದ್ದಂತೆ. ನಮ್ಮ ನಡುವಣ ಭಿನ್ನಾಭಿಪ್ರಾಯ ನಾವೇ ಬಗೆಹರಿಸಿಕೊಳ್ಳುತ್ತೇವೆ.
ಕೆ.ಎಸ್‌. ಈಶ್ವರಪ್ಪ ಪರಿಷತ್‌ ವಿಪಕ್ಷ ನಾಯಕ

ಈಶ್ವರಪ್ಪ ಹೇಳಿಕೆ ವಿಚಾರದಲ್ಲಿ ನೀವು (ಮಾಧ್ಯಮದವರು) ಏನನ್ನೆಲ್ಲ ಪ್ರಸ್ತಾಪಿಸಿ ಪ್ರಶ್ನೆ ಕೇಳುತ್ತಿರೋ ಕೇಳಿ, ನಾನಂತೂ ಯಾವುದಕ್ಕೂ ಉತ್ತರಿಸೋದಿಲ್ಲ. ಈ ವಿಚಾರಗಳ ಬಗ್ಗೆ ಮಾತನಾಡದಿರಲು ನಿರ್ಧರಿಸಿದ್ದೇನೆ, ನನಗೆ ನಾನೇ ಸ್ವಯಂ ನಿರ್ಬಂಧ ಹಾಕಿಕೊಂಡಿದ್ದೇನೆ.
ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷ

Rayanna Brigade Will Not Stop Says KS Eshwarappa

ಬೆಂಗಳೂರು (ಮೇ. 03): ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್‌ ಅವರ ಸ್ಪಷ್ಟನಿರ್ದೇಶನದ ಹೊರತಾಗಿಯೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಸಂಬಂಧಿಸಿ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ತಮ್ಮ ಬಿಗಿ ಪಟ್ಟು ಮುಂದುವರಿಸಿದ್ದಾರೆ. ಯಾವುದೇ ಕಾರಣಕ್ಕೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಚಟುವಟಿಕೆ ನಿಲ್ಲದು. ಸದ್ಯ ಪಕ್ಷದಲ್ಲಿ ಉದ್ಭವಿಸಿರುವ ಗೊಂದಲಗಳಿಂದ ನನಗೂ ನೋವಾಗಿದೆ. ಆದರೆ ಪಕ್ಷ ಸಂಘಟನೆಗೆ ಬ್ರಿಗೇಡ್‌ ಅನಿವಾರ್ಯ ಎಂದು ಹೇಳಿದ್ದಾರೆ.
ಈ ನಡುವೆ, ಈವರೆಗೆ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಿದ್ದ ಈಶ್ವರಪ್ಪ ಇದೇ ಮೊದಲ ಬಾರಿಗೆ ಅವರ ಬಗ್ಗೆ ಮೃದು ನಿಲುವು ತಳೆದಿದ್ದಾರೆ. ‘‘ಯಡಿಯೂರಪ್ಪ ಹಾಗೂ ನಾನು ಅಣ್ಣತಮ್ಮಂದಿರಿದ್ದರಂತೆ'' ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಜತೆಗೆ, ಮಾಜಿ ಸಚಿವ ಶ್ರೀನಿವಾಸ ಪ್ರಸಾದ್‌ ಅವರನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಿಸಿದ ಯಡಿಯೂರಪ್ಪ ಕ್ರಮವನ್ನೂ ಸ್ವಾಗತಿಸಿದ್ದಾರೆ. ಇನ್ನೊಂದು ಕಡೆ ಯಡಿಯೂರಪ್ಪ ಕೂಡ ಈಶ್ವರಪ್ಪ ಅವರ ವಿರುದ್ಧ ಬಹಿರಂಗವಾಗಿ ಮಾತನಾಡಲು ನಿರಾಕರಿಸಿದ್ದು, ಇದು ಬಿಜೆಪಿಯ ಇಬ್ಬರು ಘಟಾನುಘಟಿ ನಾಯಕರ ನಡುವೆ ಸೃಷ್ಟಿಯಾಗಿದ್ದ ಬಿಕ್ಕಟ್ಟು ತಿಳಿಯಾಗುತ್ತಿದೆಯೇ ಎನ್ನುವ ಅನುಮಾನ ಮೂಡಿಸಿದೆ.

‘‘ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ನಾನು ಅಣ್ಣ ತಮ್ಮಂದಿರಿದ್ದಂತೆ. ಅಣ್ಣ ತಮ್ಮಂದಿರರಲ್ಲಿ ಸಣ್ಣ ಪುಟ್ಟಭಿನ್ನಾಭಿಪ್ರಾಯಗಳಿರುವುದು ಸಹಜ. ಅವುಗಳನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ಮುಂದಿನ ಚುನಾವಣೆ ಯಡಿ ಯೂರಪ್ಪ ನೇತೃತ್ವದಲ್ಲೇ ನಡೆಯುತ್ತದೆ. ಅವರೇ ನಮ್ಮ ಸಿಎಂ ಅಭ್ಯರ್ಥಿ. ಇದರಲ್ಲಿ ಎರಡು ಮಾತಿಲ್ಲ'' ಎಂದು ಈಶ್ವರಪ್ಪ ವಿಜಯಪುರದಲ್ಲಿ ಮಂಗಳವಾರ ಹೇಳಿದ್ದಾರೆ.

‘‘ನಾನು ಯಡಿಯೂರಪ್ಪ ಅವರನ್ನು ಎಂದೂ ಟೀಕಿಸಿಲ್ಲ. ಟೀಕಿಸುವುದೂ ಇಲ್ಲ. ಅವರನ್ನು ಟೀಕಿಸಿದರೆ ತಾಯಿಗೆ ದ್ರೋಹ ಬಗೆದಂತೆ. ಪರಿಸ್ಥಿತಿ ಏನೇ ಇದ್ದರೂ ಇಬ್ಬರೂ ಸೇರಿಯೇ ಮುಂಬರುವ ಚುನಾವಣೆಯಲ್ಲಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ರನ್ನಾಗಿ ಮಾಡಿಯೇ ತೀರುತ್ತೇವೆ'' ಎಂದು ಈಶ್ವರಪ್ಪ ತಿಳಿಸಿದ್ದಾರೆ.

ಏತನ್ಮಧ್ಯೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿಜೆಪಿಯಲ್ಲಿ ಅಲ್ಪಸ್ವಲ್ಪ ಗೊಂದಲಗಳಿವೆ. ಆ ಗೊಂದಲವನ್ನು ಕುಳಿತು ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ನನ್ನನ್ನು ಉಚ್ಚಾಟನೆ ಮಾಡಲ್ಲ: ಇದೇ ವೇಳೆ, ಬಿಜೆಪಿಗೆ ನಿಷ್ಠನಾಗಿದ್ದುಕೊಂಡು ಪಕ್ಷ ಸಂಘಟನೆಗೆ ಶ್ರಮಿಸಿದ್ದೇನೆ. ನನ್ನ ಜೀವನದಲ್ಲಿ ಎಂದೂ ಪಕ್ಷ ಬಿಟ್ಟಿಲ್ಲ. ಹೊಸ ಪಕ್ಷ ಕಟ್ಟಿಲ್ಲ. ಪಕ್ಷ ವಹಿಸಿದ ಜವಾಬ್ದಾರಿಯನ್ನು ಚಾಚೂ ತಪ್ಪದೆ ಪಾಲಿಸಿದ್ದೇನೆ. ಹೀಗಾಗಿ ವರಿಷ್ಠರು ನನ್ನನ್ನು ಉಚ್ಚಾಟಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಈಶ್ವರಪ್ಪ ಹೇಳಿದರು.

ಬ್ರಿಗೇಡ್‌ ನಿಲ್ಲಲ್ಲ: ಇದೆಲ್ಲದರ ನಡುವೆಯೇ ಬ್ರಿಗೇಡ್‌ ವಿಚಾರವಾಗಿ ಮಾತ್ರ ಈಶ್ವರಪ್ಪ ತಮ್ಮ ನಿಲುವು ಸಡಿಲಿಸದಿರಲು ನಿರ್ಧರಿಸಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ತಾ ನನಗೆ ಬ್ರಿಗೇಡ್‌ ಚಟುವಟಿಕೆ ನಿಲ್ಲಿಸುವಂತೆ ತಿಳಿಸಿಲ್ಲ. ಹಾಗಾಗಿ ಅದನ್ನು ಮುಂದುವರೆಸಿಕೊಂಡು ಹೋಗುತ್ತೇನೆ ಎಂದಿದ್ದಾರೆ. ರೆಸಾರ್ಟ್‌ ಸಂಸ್ಕೃತಿಯ ರಾಜಕಾರಣ ಬೇಡ ಎಂಬ ಕಾರಣಕ್ಕೆ ಬ್ರಿಗೇಡ್‌ ಮೂಲಕ ಸಂಘಟನೆ ಮಾಡುತ್ತಿದ್ದೇನೆ.ಮೇ 8ರಂದು ರಾಯಚೂರಿನಲ್ಲಿ ಸಂಗೊಳ್ಳಿ ರಾಯಣ್ಣ ಯುವ ಬ್ರಿಗೇಡ್‌ ಅಭ್ಯಾಸ ವರ್ಗ ನಡೆಯಲಿದೆ ಎಂದರು. ಇದಕ್ಕೂ ಮೊದಲು ರಾಯಚೂರಲ್ಲಿ ಮಾತನಾಡಿದ ಅವರು, ಮೇ 6 ಮತ್ತು 7ರಂದು ಮೈಸೂರಿನಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಣಿ ಸಭೆ ಬಗ್ಗೆ ನನಗೆ ಮಾಹಿತಿ ಇಲ್ಲ. ಪಕ್ಷದಿಂದ ಆಹ್ವಾನ ಬಂದರಷ್ಟೇ ಸಭೆಗೆ ಹಾಜರಾಗುವೆ ಎಂದರು.

ಈಶ್ವರಪ್ಪ ಬಗ್ಗೆ ಮಾತಾಡಲ್ಲ: ಈಶ್ವರಪ್ಪ ವಿಚಾರದಲ್ಲಿ ಬಹಿರಂW​Üವಾಗಿ ಏನನ್ನೂ ಮಾತನಾಡದಿರಲು ನಿರ್ಧರಿಸಿ​ದ್ದೇನೆ. ಆ ವಿಚಾರದಲ್ಲಿ ನಾನು ಸ್ವಯಂ ನಿರ್ಬಂಧ ಹೇರಿಕೊಂಡಿದ್ದೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಈಶ್ವರಪ್ಪ ಹೇಳಿಕೆ ವಿಚಾರದಲ್ಲಿ ನೀವು (ಮಾಧ್ಯಮದವರು) ಏನನ್ನೆಲ್ಲ ಪ್ರಸ್ತಾಪಿಸಿ ಪ್ರಶ್ನೆ ಕೇಳುತ್ತಿರೋ ಕೇಳಿ, ನಾನಂತೂ ಯಾವುದಕ್ಕೂ ಉತ್ತರಿಸೋದಿಲ್ಲ. ಎಲ್ಲವನ್ನೂ ಹೈಕಮಾಂಡ್‌ ಗಮನಿಸುತ್ತಿದೆ. ಈ ವಿಚಾರವಾಗಿ ಹೇಳುವುದು ಏನೂ ಇಲ್ಲ ಎಂದರು.

Follow Us:
Download App:
  • android
  • ios