‘ಚೋರ್’ ಎಂದು ಬಣ್ಣ ಬಳಿಯುತ್ತಿರುವ ಫೋಟೋ ಸೃಷ್ಟಿಸಿ ಅದನ್ನು ಟ್ವೀಟರ್‌ನಲ್ಲಿ ಶೇರ್ ಮಾಡಿರುವ ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ದಿವ್ಯ ಸ್ಪಂದನ (ರಮ್ಯಾ) ಅವರಿಗೆ ತೀವ್ರ ಸಂಕಷ್ಟಎದುರಾಗುವ ಲಕ್ಷಣಗಳು ಕಂಡುಬರುತ್ತಿವೆ.
ನವದೆಹಲಿ: ತಮ್ಮನ್ನು ಹೋಲುವ ಮೇಣದ ಪ್ರತಿಮೆಯೊಂದರ ಹಣೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ‘ಚೋರ್’ ಎಂದು ಬಣ್ಣ ಬಳಿಯುತ್ತಿರುವ ಫೋಟೋ ಸೃಷ್ಟಿಸಿ ಅದನ್ನು ಟ್ವೀಟರ್‌ನಲ್ಲಿ ಶೇರ್ ಮಾಡಿರುವ ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ದಿವ್ಯ ಸ್ಪಂದನ (ರಮ್ಯಾ) ಅವರಿಗೆ ತೀವ್ರ ಸಂಕಷ್ಟಎದುರಾಗುವ ಲಕ್ಷಣಗಳು ಕಂಡುಬರುತ್ತಿವೆ. ಈ ಟ್ವೀಟ್ ಅನ್ನು ರಮ್ಯಾ ಅವರು ಅಳಿಸದೇ ಹೋದಲ್ಲಿ ಆಕೆಯ ವಿರುದ್ಧ 10 ಸಾವಿರ ಕೋಟಿ ರು. ಮಾನನಷ್ಟ ಮೊಕದ್ದಮೆ ಹೂಡುವುದಾಗಿ ದೆಹಲಿ ಮೂಲದ ವಕೀಲರೊಬ್ಬರು ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ರಾತ್ರಿಯೊಳಗೆ ಟ್ವೀಟ್ ಅನ್ನು ತೆಗೆದು, ಕ್ಷಮೆ ಕೇಳದೇ ಇದ್ದಲ್ಲಿ ರಮ್ಯಾ ವಿರುದ್ಧ ಬರೋಬ್ಬರಿ 10 ಸಾವಿರ ಕೋಟಿ ರು. ಮಾನನಷ್ಟಮೊಕದ್ದಮೆ ಹೂಡಲಾಗುವುದು. ರಾಹುಲ್ ಗಾಂಧಿ ಅವರನ್ನೂ ಪ್ರತಿವಾದಿ ಮಾಡಲಾಗುವುದು ಎಂದು ದೆಹಲಿ ಮೂಲದ ವಕೀಲ ವಿಭೋರ್ ಆನಂದ್ (25) ಎಚ್ಚರಿಕೆ ನೀಡಿದ್ದಾರೆ. ಈ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ವಿಭೋರ್ ಅವರು ದೇಶದ್ರೋಹ ಪ್ರಕರಣ ದಾಖಲಿಸಿ ಗಮನಸೆಳೆದಿದ್ದರು.
10 ಸಾವಿರ ಕೋಟಿ ರು. ಮಾನನಷ್ಟಮೊಕದ್ದಮೆ ಹೂಡಲು ಶೇ.1ರಷ್ಟುಮೊತ್ತವನ್ನು ನ್ಯಾಯಾಲಯದಲ್ಲಿಡಬೇಕು. ಅದಕ್ಕೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ‘ಜನರಿದ್ದಾರೆ. ಸಹಾಯ ಮಾಡುತ್ತಾರೆ’ ಎಂದು ತಿಳಿಸಿದ್ದಾರೆ.
