ಧರ್ಮ ಕೆಡಿಸಿದವರಿಗೆ ಆರಂಭವಾಗಿದೆ ಒದ್ದಾಟ

Rambhapuri shree Slams Political Leaders
Highlights

ವೀರಶೈವ-ಲಿಂಗಾಯತ ಎಂದು ಧರ್ಮ ಕುಲಗೆಡಿಸಿದವರು ಈಗ ಏನಾದರು ಎಂಬುದು ಎಲ್ಲರಿಗೂ ಗೊತ್ತಿದೆ. ಅಂಥವರನ್ನು ಜನತೆ ಮನೆಗೆ ಕಳುಹಿಸಿದ್ದಾರೆ. ಒಬ್ಬ ವ್ಯಕ್ತಿಯಂತು ಸಮ್ಮಿಶ್ರ ಸರ್ಕಾರದಲ್ಲಿ ಸಚಿವಗಿರಿಗಾಗಿ ಈಗಲೂ ವಿಲವಿಲ ಒದ್ದಾಡುತ್ತಿದ್ದಾರೆ. ಆದರೂ ಅವಕಾಶ ಸಿಕ್ಕಿಲ್ಲ ಎಂದು ರಂಭಾಪುರಿ ಡಾ. ವೀರಸೋಮೆಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ವ್ಯಂಗ್ಯವಾಡಿದರು.
 

ಕೊಳ್ಳೇಗಾಲ  :  ವೀರಶೈವ-ಲಿಂಗಾಯತ ಎಂದು ಧರ್ಮ ಕುಲಗೆಡಿಸಿದವರು ಈಗ ಏನಾದರು ಎಂಬುದು ಎಲ್ಲರಿಗೂ ಗೊತ್ತಿದೆ. ಅಂಥವರನ್ನು ಜನತೆ ಮನೆಗೆ ಕಳುಹಿಸಿದ್ದಾರೆ. ಒಬ್ಬ ವ್ಯಕ್ತಿಯಂತು ಸಮ್ಮಿಶ್ರ ಸರ್ಕಾರದಲ್ಲಿ ಸಚಿವಗಿರಿಗಾಗಿ ಈಗಲೂ ವಿಲವಿಲ ಒದ್ದಾಡುತ್ತಿದ್ದಾರೆ. ಆದರೂ ಅವಕಾಶ ಸಿಕ್ಕಿಲ್ಲ ಎಂದು ರಂಭಾಪುರಿ ಡಾ. ವೀರಸೋಮೆಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ವ್ಯಂಗ್ಯವಾಡಿದರು.

ತಾಲೂಕಿನ ಹೊಸವಾಡಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಅವರು ಮಾತನಾಡಿ, ‘ಸಚಿವರಾಗಿದ್ದ ಎಂ.ಬಿ.ಪಾಟೀಲ… ಮಾತು ಕೇಳಿ ನಾವು ಕೆಟ್ಟೆವು. ಅವರ ಮಾತು ಕೇಳಬಾರದಿತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಇತ್ತೀಚೆಗೆ ಹೇಳಿದ್ದಾರೆ. ಇಷ್ಟೇ ಸಾಕು, ಧರ್ಮ ಒಡೆಯಲು ಮುಂದಾದವರಿಗೆ ಏನಾಗಿದೆ ಎಂಬುದಕ್ಕೆ’ ಎಂದು ಶ್ರೀಗಳು ಮಾರ್ಮಿಕವಾಗಿ ನುಡಿದರು.

ಕೆಲವರು ಬಸವಣ್ಣ ಹೆಸರೇಳಿಕೊಂಡು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಜಗಜ್ಯೋತಿ ಬಸವೇಶ್ವರರು ಸಮಾಜ ಕಟ್ಟುವ ಕೆಲಸ ಮಾಡಿದರೇ ವಿನಾ ಸಮಾಜ ಒಡೆಯುವ ಕೆಲಸ ಅಲ್ಲ. ಆದರೆ ಬಸವಣ್ಣ ವಿಚಾರಧಾರೆಗಳನ್ನು ಹೇಳುವ ಒಬ್ಬರು ಸಮಾಜವನ್ನು ಹಾಗೂ ಜನಾಂಗವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಗದ್ಗುರು ರೇಣುಕಾಚಾರ್ಯ ಹಾಗೂ ಬಸವಣ್ಣನವರು ವೀರಶೈವ ಧರ್ಮದ ಎರಡು ಕಣ್ಣುಗಳಿದ್ದಂತೆ. ಸಮಾಜದಲ್ಲಿನ ದುಷ್ಟಶಕ್ತಿಗಳು ಸಮಾಜ ಒಡೆಯುವ ಕೆಲಸ ಮಾಡುತ್ತಿವೆ. ಅಂತಹ ಶಕ್ತಿಗಳನ್ನು ನಿರ್ನಾಮ ಮಾಡಿ ಸಮಾಜದಲ್ಲಿ ಸಾತ್ವಿಕ ಶಕ್ತಿ ಬೆಳೆಸುವುದೇ ವೀರಶೈವ ಧರ್ಮಗುರುಗಳು, ಪಂಚಪೀಠ ಹಾಗೂ ನಾಡಿನ ಮಠಾಧೀಶರ ಆಶಯ ಎಂದರು.

ನಮ್ಮವರಿಂದಲೇ ಡಾ.ಪ್ರೀತನ್‌ಗೆ ಸೋಲು-ಶ್ರೀ

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಡಾ. ಪ್ರೀತನ್‌ ನಾಗಪ್ಪ ಅವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ ಎಂದು ನಾನು ಭಾವಿಸಿದ್ದೆ. ಆದರೆ ನಮ್ಮವರೇ ಕೆಲ ಜನ ಕೈಯಾಡಿಸಿದ ಕಾರಣ ಅವರಿಗೆ ಸೋಲಾಯಿತು ಎಂದು ರಂಭಾಪುರಿ ಶ್ರೀಗಳು ಬೇಸರ ವ್ಯಕ್ತಪಡಿಸಿದರು.

ಪ್ರೀತನ್‌ ಸೋಲಿನ ವಿಚಾರ ಕೇಳಿ ನೋವಾಯಿತು. ಹೊರಗಿನವರು ವೈರಿಗಳಾದರೆ ಬಾಳಬಹುದು, ನಮ್ಮವರೇ ವೈರಿಗಳಾದರೆ ಬಾಳಲಾಗದು. ನಮ್ಮವರೇ ಕೆಲವರ ತಂತ್ರ-ಕುತಂತ್ರ ಪ್ರೀತನ್‌ ಪರಾಭವಕ್ಕೆ ಕಾರಣ ಎಂದು ನಾನು ತಿಳಿದಿದ್ದೇನೆ ಎಂದು ಇದೇ ವೇಳೆ ಶ್ರೀಗಳು ತಿಳಿಸಿದರು.

loader