ಸ್ವಯಂ ಘೋಷಿತ ದೇವಮಾನವ ರಾಮ್ ರಹೀಂ ಸಿಂಗ್ ವಿರುದ್ಧ ತೀರ್ಪು ಪ್ರಕಟವಾಗಿದೆ. ಇದರಿಂದಾಗಿ ಆತನ ಬೆಂಬಲಿಗರಿಂದ ಹರಿಯಾಣ, ಪಂಜಾಬ, ದೆಹಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಅತ್ಯಾಚಾರಿ ಬಾಬಾ ರಹೀಂ ಬೆಂಬಲಿಗರ ಪುಂಡಾಟದಿಂದ ಅಮಾಯಕರ ಸಾವಿನ ಸಂಖ್ಯೆ ಮಾತ್ರ ಏರುತ್ತಲೇ ಇದೆ. ಈ ಕುರಿತು ಕಂಪ್ಲೀಟ್ ಡಿಟೈಲ್ ಇಲ್ಲಿದೆ ನೋಡಿ.
ಹರ್ಯಾಣ(ಆ.26): ಕೋರ್ಟ್ ಬಾಬಾ ರಾಮ್ ರಹಿಮ್ ಸಿಂಗ್ ದೋಷಿ ಎಂದು ಅತ್ತ ತೀರ್ಪು ನೀಡುತ್ತಲೇ ಇತ್ತ ಬಾಬಾ ಬೆಂಬಲಿಗರ ಗೂಡಾಗಿರಿ ಶುರುವಾಗಿದೆ. ಕಂಡ ಕಂಡಲ್ಲಿ ಸಿಕ್ಕ ಸಿಕ್ಕ ವಾಹನಗಳಿಗೆ ಬೆಂಕಿಯಿಟ್ಟಿದ್ದಾರೆ. ಹರಿಯಾಣದ ಎಲ್'ಐಸಿ ಕಚೇರಿಗೆ ಬೆಂಕಿ ಇಟ್ಟರೆ ಐಟಿ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಈ ಗೂಂಡಾಗಿರಿಯಿಂದ ಹರಿಯಾಣ, ಪಂಜಾಬ್, ದೆಹಲಿ ಅಕ್ಷರಶಃ ನಲುಗಿ ಹೋಗಿವೆ.
ಹರಿಯಾಣದ ಮಾಲೌಟ್ ರೈಲ್ವೆ ನಿಲ್ದಾಣ,ಪೆಟ್ರೋಲ್ ಬಂಕ್ ಗೆ ಬೆಂಕಿ ಹಚ್ಚಿ ರಾಮ್ ರಹೀಂ ಬೆಂಬಲಿಗರು ಅಟ್ಟಹಾಸ ಮೆರೆದಿದ್ದಾರೆ. ರಾಷ್ಟ್ರೀಯ ಸುದ್ದಿವಾಹಿನಿಯ 2 ಒಬಿ ವ್ಯಾನ್ ಕೂಡ ಸುಟ್ಟು ಕರಕಲಾಗಿವೆ. ಹರಿಯಾಣ, ದೆಹಲಿ, ಪಂಜಾಬ್, ಉತ್ತರಪ್ರದೇಶದಲ್ಲೂ ಕಲ್ಲು ತೂರಾಟ ನಡೆದಿದೆ. ಇದುವರೆಗೆ 32ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. 500ಕ್ಕೂ ಹೆಚ್ಚು ಮಂದಿ ಆಸ್ಪತ್ರೆ ಸೇರಿದ್ದಾರೆ. ಗಲಭೆ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡ್ತಿದ್ದಾರೆ. ಹೆಚ್ಚುವರಿಯಾಗಿ 25 ಸಿಆರ್ಪಿಎಫ್ ತುಕಡಿ ನಿಯೋಜಿಸಲಾಗಿದೆ. ಹರಿಯಾಣದ 10 , ದೆಹಲಿಯ 11 ಜಿಲ್ಲೆಗಳಲ್ಲಿ ನಿಷೇಧಾಜ್ಷೆ ಜಾರಿಗೊಳಿಸಲಾಗಿದೆ.
ಇನ್ನೂ ಗಲಭೆಯಿಂದಾಗಿ ಸಂಚರಾ ಸಮಸ್ಯೆ ಕೂಡ ಉಲ್ಬಣವಾಗಿದ್ದು ,ಇಂದು ಬೆಂಗಳೂರಿನಿಂದ ಯಶ್ವಂತಪುರ-ಚಂಡೀಗಢ ನಡುವಿನ ಕರ್ನಾಟಕ ಸಂಪರ್ಕ ಕಾಂತಿ ಎಕ್ಸ್'ಪ್ರೆಸ್ ಹಾಗೂ ಯಶವಂತಪುರ-ಖಟ್ರಾ ಸುವಿಧಾ ಎಕ್ಸ್ಪ್ರೆಸ್ ರೈಲು ಸಂಚಾರ ರದ್ದುಗೊಳಿಸಲಾಗಿದೆ.
ಹಾನಿ ತುಂಬಿಕೊಡಲು ಡೇರಾ ಸಚ್ಚಾ ಸೌಧ ಆಸ್ತಿ ಮುಟ್ಟುಗೋಲು
ಇನ್ನೂ ಬಾಬಾ ಬೆಂಬಲಿಗರ ದಾಂಧಲೆಯಿಂದ ಸಾರ್ವಜನಿಕ ಆಸ್ತಿ ಪಾಸ್ತಿಗೆ ಅಪಾರ ಹಾನಿಯಾಗಿದೆ. ಹೀಗಾಗೇ ಹರ್ಯಾಣ ಹೈಕೋರ್ಟ್ ಬಾಬಾಗೆ ಮತ್ತೊಂದು ಶಾಕ್ ನೀಡಿದೆ. ಗಲಭೆಯಿಂದಾದ ನಷ್ಟ ಬರಿಸಲು ಡೇರಾ ಸಚ್ಚಾ ಸೌಧ ಆಸ್ತಿ ಮುಟ್ಟುಗೋಲಿಗೆ ಆದೇಶಿಸಿದೆ. ಈಗಾಗಲೇ 65 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟಿನಲ್ಲಿ ಅತ್ಯಾಚಾರಿ ಬಾಬಾನ ಬೆಂಬಲಿಗರ ಗೂಂಡಾ ವರ್ತನೆ ಮಿತಿ ಮೀರಿದ್ದು ಈಗಲೂ ಪರಿಸ್ಥಿತಿ ಸಂಪೂರ್ಣವಾಗಿ ತಣ್ಣಗಾಗಿಲ್ಲ.. ಭಯದಲ್ಲೇ ಜನ ಕಾಲಕಳೆಯುವಂತಾಗಿದೆ.
