ಗುಜರಾತ್ ಮುಖ್ಯ ಮಂತ್ರಿ ವಿಜಯ್ ರೂಪಾನಿ, ಇಸ್ರೋ ಅಭಿವೃದ್ಧಿ ಪಡಿಸಿರುವ ರಾಕೆಟ್’ಗಳನ್ನು ರಾಮನ ಬಾಣಗಳಿಗೆ ಹೋಲಿಸಿದ್ದು, ಭಾರತ-ಶ್ರೀಲಂಕಾ ನಡುವೆ ಪೌರಾಣಿಕ ‘ರಾಮ ಸೇತು’ ನಿರ್ಮಾಣ ಮಾಡಿದ ರಾಮನ ಇಂಜಿನಿಯರಿಂಗ್ ಕೌಶಲ್ಯವನ್ನು ಹೊಗಳಿದ್ದಾರೆ.
ಅಹಮದಾಬಾದ್: ಗುಜರಾತ್ ಮುಖ್ಯ ಮಂತ್ರಿ ವಿಜಯ್ ರೂಪಾನಿ, ಇಸ್ರೋ ಅಭಿವೃದ್ಧಿ ಪಡಿಸಿರುವ ರಾಕೆಟ್’ಗಳನ್ನು ರಾಮನ ಬಾಣಗಳಿಗೆ ಹೋಲಿಸಿದ್ದು, ಭಾರತ-ಶ್ರೀಲಂಕಾ ನಡುವೆ ಪೌರಾಣಿಕ ‘ರಾಮ ಸೇತು’ ನಿರ್ಮಾಣ ಮಾಡಿದ ರಾಮನ ಇಂಜಿನಿಯರಿಂಗ್ ಕೌಶಲ್ಯವನ್ನು ಹೊಗಳಿದ್ದಾರೆ.
ಇನ್ಸ್ಟಿಟ್ಯೂಟ್ ಆಫ್ ಇನ್ಫ್ರಾಸ್ಟ್ರಕ್ಚರ್ ಟೆಕ್ನಾಲಜಿ ರಿಸರ್ಚ್ & ಮ್ಯಾನೆಜ್’ಮೆಂಟ್’ನ (IITRM) ಪ್ರಥಮ ಘಟೀಕೊತ್ಸವದಲ್ಲಿ ಭಾನುವಾರ ಭಾಗವಹಿಸಿ ಮಾತನಾಡಿದ ರೂಪಾನಿ, ರಾಮನ ಪ್ರತಿ ಬಾಣವು ರಾಕೆಟ್ ಆಗಿತ್ತು. ಇಸ್ರೋ ಇಂದೇನು ಮಾಡುತ್ತಿದೆಯೋ (ರಾಕೆಟ್ ಉಡಾವಣೆ), ಅದನ್ನು ರಾಮ ಆ ಕಾಲದಲ್ಲೇ ಮಾಡಿದ್ದನು, ಎಂದು ಹೇಳಿದ್ದಾರೆ.
ಮುಂದುವರಿದು, ರಾಮ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸುವ ಬಗ್ಗೆ ಹೇಳುವುದಾರೆ, ಭಾರತ ಮತ್ತು ಶ್ರೀಲಂಕಾ ನಡುವೆ ರಾಮಸೇತು ನಿರ್ಮಿಸುವ ಸಂದರ್ಭದಲ್ಲಿ ಎಂತೆಂತಹ ಇಂಜಿನಿಯರ್’ಗಳು ಅವರೊಂದಿಗಿದ್ದರು ಎಂದು ಊಹಿಸಬಹುದಾಗಿದೆ, ಎಂದು ಅವರು ಹೇಳಿದ್ದಾರೆ.
ಅಳಿಲುಗಳು ಕೂಡಾ ಸೇತುವೆ ನಿರ್ಮಾಣಕ್ಕಾಗಿ ಕೆಲಸ ಮಾಡಿವೆ. ರಾಮನ ಆಲೋಚನೆಯನ್ನು ಅಂದಿನ ಇಂಜಿನಿಯರ್’ಗಳು ಕಾರ್ಯರೂಪಕ್ಕೆ ಇಳಿಸಿದ್ದಾರೆಂದು ರೂಪಾನಿ ಹೇಳಿದ್ದಾರೆ.
IITRAM ಗುಜರಾತ್ ಸರ್ಕಾರ ಸ್ಥಾಪಿಸಿರುವ ಸ್ವಾಯತ್ತ ವಿಶ್ವವಿದ್ಯಾಲಯವಾಗಿದೆ. ಇಸ್ರೋನ ಸ್ಪೇಸ್ ಅಪ್ಲಿಕೇಶನ್ ಸೆಂಟರ್’ನ ನಿರ್ದೇಶಕ ತಪಾನ್ ಮಿಶ್ರಾ ಕೂಡಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮೂಲಭೂತ ಸೌಕಾರ್ಯಭಿವೃದ್ಧಿಯ ಬಗ್ಗೆ ಪೌರಾಣಿಕ ಉದಾಹರಣೆಗಳ ಸರಣಿಯನ್ನು ಮುಂದುವರೆಸಿದ ರೂಪಾನಿ, ಔಷಧೀಯ ಸಸ್ಯ ಸಿಗದೇ ಇದ್ದಾಗ ಹನುಮಂತ ಪರ್ವವನ್ನೇ ಹೊತ್ತುಕೊಂಡು ಬಂದಿದ್ದ. ಆವಾಗ ಅದೆಂತಹ ತಂತ್ರಜ್ಞಾನವಿತ್ತು ಎಂದು ನಾವು ಚಿಂತನೆ ನಡೆಸಬಹುದು. ಅದು ಕೂಡಾ ಮೂಲಭೂತ ಸೌಕರ್ಯ ಅಭಿವೃದ್ಧಿಯ ಮಾದರಿ ಎಂದು ಹೇಳಿದ್ದಾರೆ.
