ರಾಜ್ಯಸಭೆ ಉಪಸಭಾಪತಿ ಸ್ಥಾನವೂ ಕಾಂಗ್ರೆಸ್‌ ‘ಕೈ’ತಪ್ಪುವ ಸಾಧ್ಯತೆ

Rajya Sabha Post Congress likely to lose
Highlights

ರಾಜ್ಯಸಭೆಯ ಉಪಸಭಾಪತಿ ಪಿ.ಜೆ.ಕುರಿಯನ್‌ ಅವರು ಜುಲೈ ತಿಂಗಳಲ್ಲಿ ನಿವೃತ್ತಿಯಾಗಲಿದ್ದು, ಈ ಮೂಲಕ 41 ವರ್ಷಗಳ ರಾಜ್ಯಸಭೆ ಇತಿಹಾಸದಲ್ಲಿ ಕಾಂಗ್ರೆಸ್‌ಗೆ ಇದೇ ಮೊದಲ ಬಾರಿಗೆ ಪ್ರತಿಷ್ಠಿತ ರಾಜ್ಯಸಭೆ ಉಪಸಭಾಪತಿ ಸ್ಥಾನ ಕೈತಪ್ಪುವ ಸಾಧ್ಯತೆಯಿದೆ.

ನವದೆಹಲಿ: ರಾಜ್ಯಸಭೆಯ ಉಪಸಭಾಪತಿ ಪಿ.ಜೆ.ಕುರಿಯನ್‌ ಅವರು ಜುಲೈ ತಿಂಗಳಲ್ಲಿ ನಿವೃತ್ತಿಯಾಗಲಿದ್ದು, ಈ ಮೂಲಕ 41 ವರ್ಷಗಳ ರಾಜ್ಯಸಭೆ ಇತಿಹಾಸದಲ್ಲಿ ಕಾಂಗ್ರೆಸ್‌ಗೆ ಇದೇ ಮೊದಲ ಬಾರಿಗೆ ಪ್ರತಿಷ್ಠಿತ ರಾಜ್ಯಸಭೆ ಉಪಸಭಾಪತಿ ಸ್ಥಾನ ಕೈತಪ್ಪುವ ಸಾಧ್ಯತೆಯಿದೆ.

1977ರಲ್ಲಿ ಕಾಂಗ್ರೆಸ್‌ ನಾಯಕ ರಾಮ್‌ ನಿವಾಸ್‌ ಮಿರ್ಧಾ ಅವರು ರಾಜ್ಯಸಭೆ ಉಪಸಭಾಪತಿಯಾದಾಗಿನಿಂದಲೂ ಇದುವರೆಗೂ ಈ ಸ್ಥಾನ ನಿರಾಯಾಸವಾಗಿ ಕಾಂಗ್ರೆಸ್‌ ಪಾಲಾಗಿತ್ತು. 2002ರಲ್ಲಿ ಮೊದಲ ಬಾರಿಗೆ ಬಿಜೆಪಿ ಸಂಸದನಾದ ಭೈರೋನ್‌ ಸಿಂಗ್‌ ಶೆಖಾವತ್‌ ಅವರು ಮೊದಲ ಕಾಂಗ್ರೆಸ್ಸೇತರ ರಾಜ್ಯಸಭಾ ಉಪಸಭಾಪತಿಯಾದರೂ, ಕೆಲವು ಸಮಯದ ಬಳಿಕ ಕಾಂಗ್ರೆಸ್‌ ಸದಸ್ಯರೇ ಉಪಸಭಾಪತಿಯಾದರು. ಆದರೆ, ಜುಲೈ ತಿಂಗಳಲ್ಲಿ ಪಿ.ಜೆ.ಕುರಿಯನ್‌ ಅವರ ನಿವೃತ್ತಿ ಬಳಿಕ, ಕಾಂಗ್ರೆಸ್ಸೇತರ ಸಂಸದರೊಬ್ಬರು ರಾಜ್ಯಸಭೆಯ ಉಪಸಭಾಪತಿಯಾಗಲಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಈಗಾಗಲೇ ಲೋಕಸಭೆ ಸ್ಪೀಕರ್‌ ಮತ್ತು ಉಪ ಸ್ವೀಕರ್‌ ಸ್ಥಾನಗಳನ್ನು ಕಾಂಗ್ರೆಸ್‌ ಕಳೆದುಕೊಂಡಿದ್ದು, ಶೀಘ್ರದಲ್ಲೇ ರಾಜ್ಯಸಭೆಯಲ್ಲಿನ ಉಪಸಭಾಪತಿ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ಮೂಲಕ ಉಭಯ ಸಂಸತ್ತಿನ ನಾಲ್ಕು ಉನ್ನತ ಸ್ಥಾನಗಳು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಮುಕ್ತವಾಗಲಿವೆ ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.

ಆದರೆ, ಪಿ.ಜೆ.ಕುರಿಯನ್‌ ಅವರ ನಿವೃತ್ತಿಯಿಂದ ತೆರವಾಗಲಿರುವ ರಾಜ್ಯಸಭೆ ಉಪಸಭಾಪತಿ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಲು ಎನ್‌ಡಿಎ ಬಳಿ ಸಂಖ್ಯಾಬಲವಿಲ್ಲ. ಆದಾಗ್ಯೂ ಎನ್‌ಡಿಎ ಈ ಸ್ಥಾನ ಪಡೆಯಲು ಅವಿರತ ಯತ್ನ ಆರಂಭಿಸಲಿದೆ ಎಂದು ಹೇಳಲಾಗಿದೆ.

loader