ರಾಜ್ಯಸಭೆಗೆ ಕರ್ನಾಟಕದಿಂದ ನಡೆಯಲಿದೆಯಾ ಅವಿರೋಧ ಆಯ್ಕೆ..?

First Published 14, Mar 2018, 12:54 PM IST
Rajya Sabha Election News
Highlights

ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಐವರು ಸಲ್ಲಿಸಿರುವ ನಾಮಪತ್ರಗಳ ಪರಿಶೀಲನೆ ಕಾರ್ಯ ಮುಗಿದಿದ್ದು, ಐವರ ಉಮೇದು ವಾರಿಕೆಯೂ ಅಂಗೀಕಾರಗೊಂಡಿದೆ.

ಬೆಂಗಳೂರು : ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಐವರು ಸಲ್ಲಿಸಿರುವ ನಾಮಪತ್ರಗಳ ಪರಿಶೀಲನೆ ಕಾರ್ಯ ಮುಗಿದಿದ್ದು, ಐವರ ಉಮೇದು ವಾರಿಕೆಯೂ ಅಂಗೀಕಾರಗೊಂಡಿದೆ.

ಚುನಾವಣಾವಧಿಕಾರಿಯಾಗಿರುವ ವಿಧಾನಸಭೆಯ ಕಾರ್ಯದರ್ಶಿ ಎಸ್. ಮೂರ್ತಿ ಅವರು ಮಂಗಳವಾರ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಸಮ್ಮುಖದಲ್ಲಿ ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಸಿದರು. ಸೂಕ್ಷ್ಮವಾಗಿ ಎಲ್ಲಾ ಅಂಶಗಳನ್ನು ಗಮನಿಸಿದ ಬಳಿಕ ಚುನಾವಣಾ ಕಣಕ್ಕಿಳಿದಿರುವ ಐದು ಅಭ್ಯರ್ಥಿಗಳ ಉಮೇದುವಾರಿಕೆಗಳು ಸರಿಯಾಗಿ ಇದ್ದ ಕಾರಣ ಎಲ್ಲವನ್ನೂ ಅಂಗೀಕರಿಸಿದರು. ಮಾ.23ರಂದು ನಡೆಯುವ ಚುನಾವಣೆಗೆ ಮಾ.15 ನಾಮಪತ್ರಗಳ ಹಿಂಪಡೆಯುವ ದಿನಾಂಕವಾಗಿದೆ.

ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್, ಕಾಂಗ್ರೆಸ್ ಅಭ್ಯರ್ಥಿಗಳಾದ ಎಲ್. ಹನುಮಂತಯ್ಯ, ಸಯ್ಯದ್ ನಾಸಿರ್ ಹುಸೇನ್, ಜೆ.ಸಿ.ಚಂದ್ರಶೇಖರ್, ಜೆಡಿಎಸ್‌ನ ಬಿ. ಎಂ.ಫಾರೂಕ್ ಅವರು ನಾಮಪತ್ರಗಳ ಪರಿಶೀಲನೆ ಕಾರ್ಯದ ವೇಳೆ ಉಪಸ್ಥಿತರಿದ್ದರು. ಸಲ್ಲಿಕೆಯಾಗಿರುವ ನಾಮಪತ್ರಗಳ ಪರಿಶೀಲನೆ ಕಾರ್ಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಚುನಾವಣಾಧಿಕಾರಿ ಎಸ್.ಮೂರ್ತಿ, ತೆರವಾಗಿರುವ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅಭ್ಯರ್ಥಿಗಳ ಉಮೇದುವಾರಿಕೆಯನ್ನು ಪರಿಶೀಲನೆ ನಡೆಸಿದ್ದು, ಎಲ್ಲವೂ ಕ್ರಮಬದ್ಧವಾಗಿವೆ.

ಮಾ.15, ನಾಮಪತ್ರ ಹಿಂಪಡೆಯುವ ದಿನವಾಗಿದೆ. ನಾಲ್ಕು ಸ್ಥಾನಗಳಿಗೆ ಐವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಒಬ್ಬ ಅಭ್ಯರ್ಥಿ ನಾಮಪತ್ರವನ್ನು ಹಿಂಪಡೆದರೆ ಚುನಾವಣೆ ನಡೆಸಬೇಕಾದ ಅಗತ್ಯ ಇಲ್ಲ. ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬಹುದು ಎಂದು ಹೇಳಿದರು.

ನಾಮಪತ್ರ ಸಲ್ಲಿಕೆ ಮಾಡಿರುವ ಐವರು ಅಭ್ಯರ್ಥಿಗಳಲ್ಲಿ ಯಾರೊಬ್ಬರೂ ನಾಮಪತ್ರ ವನ್ನು ಹಿಂಪಡೆಯದಿದ್ದರೆ ಚುನಾವಣೆ ನಡೆಸಬೇಕಾಗುತ್ತದೆ. ಇದಕ್ಕೆ ಬೇಕಾದ ಅಗತ್ಯ ಕ್ರಮ ಈಗಾಗಲೇ ಕೈಗೊಳ್ಳಲಾಗಿದೆ ಎಂದರು.

loader