ನವದೆಹಲಿ[ಜೂ.27]: ಪರಿಸರ ವಿಕೋಪದಂಥ ಸಂದರ್ಭದಲ್ಲಿ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಗಳು ಮಾತ್ರವೇ ಸಾರ್ವಜನಿಕರಿಗೆ ಉಚಿತ ಸೇವೆ ಒದಗಿಸುತ್ತವೆ ಎಂಬ ಕೇಂದ್ರ ಸಚಿವರ ಮಾತಿಗೆ ಬಿಜೆಪಿ ನಾಯಕರೊಬ್ಬರೇ ತಿರುಗೇಟು ನೀಡಿದ ಘಟನೆಗೆ ಬುಧವಾರ ಲೋಕಸಭೆ ಸಾಕ್ಷಿಯಾಗಿದೆ.

ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌, ನೈಸರ್ಗಿಕ ವಿಕೋಪದ ವೇಳೆ ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ಮಾತ್ರವೇ ತಮ್ಮ ಗ್ರಾಹಕರಿಗೆ ಉಚಿತ ಸೇವೆ ನೀಡುತ್ತವೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಬಿಹಾರ ಮೂಲದ ಬಿಜೆಪಿ ಸಂಸದ ರಾಜೀವ್‌ ಪ್ರತಾಪ್‌ ರೂಡಿ ಅವರು, ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಖಾಸಗಿ ಟೆಲಿಕಾಂ ಸಂಸ್ಥೆಗಳು ಸಹ ಉಚಿತ ಸೇವೆ ನೀಡುತ್ತವೆ ಎಂದು ತಿರುಗೇಟು ನೀಡಿದರು.

ಆಗ ಇದಕ್ಕೆ ಹೌದು, ಒಂದೆರಡು ದಿನ ಮಾತ್ರ ಖಾಸಗಿ ಕಂಪನಿಗಳು ಉಚಿತ ಸೇವೆ ನೀಡುತ್ತವೆ. ಆದರೆ, ನೈಸರ್ಗಿಕ ವಿಕೋಪದಿಂದ ಹೊರ ಬರುವವರೆಗೂ ಸರ್ಕಾರಿ ಕಂಪನಿಗಳು ಉಚಿತ ಸೇವೆ ನೀಡುತ್ತವೆ ಎಂದು ಸಮರ್ಥನೆ ನೀಡಿದರು. ಕೆಲವು ಸಂದರ್ಭಗಳಲ್ಲಿ ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ಕಾಲ್‌ ಡ್ರಾಪ್‌ ಆದರೂ, ಅದಕ್ಕೆ ಗ್ರಾಹಕರ ಮೊಬೈಲ್‌ನಿಂದ ಹಣ ಕಡಿತಗೊಳಿಸಲಾಗುತ್ತದೆ ಎಂದು ರೂಡಿ ಅಸಮಾಧಾನ ತೋಡಿಕೊಂಡರು. ಆಗ ಸಹ ಸದಸ್ಯರು, ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸೇವೆಯನ್ನು ಉತ್ತಮ ಗುಣಮಟ್ಟಕ್ಕೇರಿಸಲು ರೂಡಿ ಅವರನ್ನು ಮಂತ್ರಿ ಮಾಡಬೇಕು ಎಂದು ಹಾಸ್ಯ ಚಟಾಕಿ ಹಾರಿಸಿದರು.