ಒಂದೋ ಅವರು ಬಿಜೆಪಿ ಸೇರಬಹುದು. ಇನ್ನೊಂದು, ಅವರು ಹೊಸ ಪಕ್ಷ ಕಟ್ಟಿ ಎನ್'ಡಿಎ ಮೈತ್ರಿಕೂಟಕ್ಕೆ ಕೈಜೋಡಿಸಬಹುದು. ಒಟ್ಟಿನಲ್ಲಿ ಅವರು ಬಿಜೆಪಿಯ ಸಂಗದಲ್ಲೇ ಇರುವುದು ಬಹುತೇಕ ಖಚಿತ ಎಂದನ್ನುತ್ತಾರೆ ರಜನೀ ಗೆಳೆಯರು.

ಚೆನ್ನೈ(ಜೂನ್ 23): ತಮಿಳುನಾಡು ಚಿತ್ರರಂಗದ ಸೂಪರ್'ಸ್ಟಾರ್ ರಜನೀಕಾಂತ್ ರಾಜಕೀಯ ಪ್ರವೇಶ ಬಹುತೇಕ ಖಚಿತವಾಗಿದೆ. ಆದರೆ, ಯಾವುದಾದರೂ ಪಕ್ಷ ಸೇರುತ್ತಾರೋ? ಅಥವಾ ಹೊಸ ಪಕ್ಷ ಕಟ್ಟುತ್ತಾರೋ? ಎಂಬ ಕುತೂಹಲವನ್ನು ರಜನೀಕಾಂತ್ ಇನ್ನೂ ತಣಿಸಿಲ್ಲ. ಇದೂವರೆಗೆ ಅವರು ಬಹಿರಂಗವಾಗಿ ಮಾತನಾಡಿರುವ ಪ್ರಕಾರ ಅವರು ಯಾವುದೇ ಪ್ರಸ್ತುತ ಪಕ್ಷಗಳನ್ನು ಸೇರದೇ, ಹೊಸ ಪಕ್ಷದ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಡುವ ಸುಳಿವು ಸಿಕ್ಕಿದೆ. ಆದರೆ, ಸೂಪರ್'ಸ್ಟಾರ್ ರಜನೀ ತಮ್ಮ ಸ್ನೇಹಿತರ ಜೊತೆ ಹೇಳಿಕೊಂಡ ಪ್ರಕಾರ, ಅವರು ಬಿಜೆಪಿ ಜೊತೆಜೊತೆಯಲ್ಲೇ ಇರಲು ನಿಶ್ಚಯಿಸಿದ್ದಾರಂತೆ.

ಒಂದೋ ಅವರು ಬಿಜೆಪಿ ಸೇರಬಹುದು. ಇನ್ನೊಂದು, ಅವರು ಹೊಸ ಪಕ್ಷ ಕಟ್ಟಿ ಎನ್'ಡಿಎ ಮೈತ್ರಿಕೂಟಕ್ಕೆ ಕೈಜೋಡಿಸಬಹುದು. ಒಟ್ಟಿನಲ್ಲಿ ಅವರು ಬಿಜೆಪಿಯ ಸಂಗದಲ್ಲೇ ಇರುವುದು ಬಹುತೇಕ ಖಚಿತ ಎಂದನ್ನುತ್ತಾರೆ ರಜನೀ ಗೆಳೆಯರು. ಕಳೆದ ತಿಂಗಳು ರಜನೀಕಾಂತ್ ರಾಜಕಾರಣಕ್ಕೆ ಬರುವ ಸುಳಿವು ಕೊಟ್ಟಾಗ ಬಿಜೆಪಿಯವರು ಸತತವಾಗಿ ಅವರನ್ನು ತಮ್ಮ ಪಕ್ಷಕ್ಕೆ ಆಹ್ವಾನಿಸಿತ್ತು. ಇತ್ತೀಚೆಗಷ್ಟೇ ಬಲಪಂಥೀಯ ಹಿಂದೂ ಮಕ್ಕಳ್ ಕಚ್ಚಿ ಪಕ್ಷದ ಮುಖಂಡರು ರಜನೀಕಾಂತ್ ಅವರನ್ನು ಭೇಟಿಯಾಗಿದ್ದು ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿತ್ತು.

ನಿನ್ನೆ ನಡೆದ ಅಭಿಮಾನಿಗಳ ಭೇಟಿ ಕಾರ್ಯಕ್ರಮದಲ್ಲಿ ರಜನೀಕಾಂತ್ ತಾನು ಸೆಪ್ಟಂಬರ್ ಅಥವಾ ಅಕ್ಟೋಬರ್'ನಲ್ಲಿ ರಾಜಕೀಯ ಪ್ರವೇಶ ಮಾಡುವುದಾಗಿ ತಿಳಿಸಿದ್ದಾರೆ.