Asianet Suvarna News Asianet Suvarna News

ಪ್ರಯಾಣಿಕನ ರಕ್ಷಣೆಗಾಗಿ ರೈಲನ್ನೇ 1ಕಿ. ಮೀ ಹಿಂದಕ್ಕೆ ಓಡಿಸಿದ ಚಾಲಕ!

ಪ್ರಯಾಣಿಕನ ರಕ್ಷಣೆಗಾಗಿ ರೈಲನ್ನೇ ಹಿಂದಕ್ಕೆ ಓಡಿಸಿದ ಚಾಲಕ| ರಾಜಸ್ಥಾನದ ಕೋಟಾ-ಬಿನಾ ರೈಲು ಮಾರ್ಗದಲ್ಲಿ ಘಟನೆ| ರೈಲಿನ ಲೋಕೋಪೈಲಟ್‌ನ ಸಮಯ ಪ್ರಜ್ಞೆ ಬಗ್ಗೆ ಮೆಚ್ಚುಗೆ

rajasthan Driver Reverses Train For About 1 km to Save Injured Man s Life
Author
Bangalore, First Published Apr 29, 2019, 11:14 AM IST

ಜೈಪುರ[ಏ.29]: ರೈಲಿನಿಂದ ಕೆಳಗೆ ಬಿದ್ದು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಪ್ರಯಾಣಿಕನ ರಕ್ಷಣೆಗಾಗಿ ಲೋಕೋಪೈಲಟ್‌ ಒಬ್ಬರು ರೈಲನ್ನೇ ಒಂದು ಕಿ.ಮೀ ವಾಪಸ್‌ ಸಂಚರಿಸಿದ ಘಟನೆ ರಾಜಸ್ಥಾನದ ಕೋಟಾ-ಬಿನಾ ಮಾರ್ಗ ಮಧ್ಯೆ ನಡೆದಿದೆ. ಸಾಮಾನ್ಯವಾಗಿ ರೈಲಿನ ಅಪಘಾತಗಳು ಅಥವಾ ತುರ್ತು ಸಂದರ್ಭಗಳಲ್ಲಿ ಮಾತ್ರವೇ ರೈಲು ಪ್ರಯಾಣಿಕರು ಚೈನ್‌ ಎಳೆದು ರೈಲನ್ನು ನಿಲ್ಲಿಸಬಹುದಾಗಿದೆ. ಈ ವೇಳೆ, ಚೈನ್‌ ಎಳೆದ ಪ್ರಯಾಣಿಕನಿಗೆ ದಂಡ ವಿಧಿಸಲಾಗುತ್ತದೆ. ಆದರೆ, ಓರ್ವ ಪ್ರಯಾಣಿಕನ ರಕ್ಷಣೆಗಾಗಿ ರೈಲನ್ನು ವಾಪಸ್‌ ತಿರುಗಿಸುವ ಸಂಭವ ತೀರಾ ಕಡಿಮೆ.

ಆಗಿದ್ದೇನು?

ರಾಜಸ್ಥಾನದ ಕೋಟಾ-ಬಿನಾ ಮಾರ್ಗದ ರೈಲಿನಲ್ಲಿ ವಿನೋದ್‌ ವರ್ಮಾ, ರಾಜೇಂದ್ರ ವರ್ಮಾ ಹಾಗೂ ಸುರೇಶ್‌ ವರ್ಮಾ ಎಂಬ ಸಹೋದರರು ಪ್ರಯಾಣಿಸುತ್ತಿದ್ದರು. ಈ ಪೈಕಿ ರಾಜೇಂದ್ರ ವರ್ಮಾ ಮಾನಸಿಕ ಅಸ್ವಸ್ತನಾಗಿದ್ದ. ರೈಲು ಇಲ್ಲಿನ ಅಶೋಕ್‌ನಗರ ರೈಲ್ವೆ ನಿಲ್ದಾಣದಿಂದ ಹೊರಡುತ್ತಿದ್ದಂತೆ, ರಾಜೇಂದ್ರ ಎಂಬುವರು ರೈಲಿನಿಂದ ಹೊರಕ್ಕೆ ಧುಮುಕಿದ್ದರು. ಈ ವೇಳೆ ರೈಲಿನಿಂದ ಜಿಗಿದ ವಿನೋದ್‌, ರಾಜೇಂದ್ರನನ್ನು ರಕ್ಷಿಸಿದ್ದರು.

ಆ ನಂತರ, ಬಾರನ್‌ ಜಿಲ್ಲೆಯ ಸಾಲ್ಪುರ ಪ್ರದೇಶದಲ್ಲಿ ಮತ್ತೆ ರಾಜೇಂದ್ರ ಮತ್ತೆ ರೈಲಿನಿಂದ ಹೊರಕ್ಕೆ ಹಾರಿದ್ದ. ಆತನ ಹಿಡಿಯಲು ದುಂಬಾಲು ಬಿದ್ದಿದ್ದ ಅವರ ಸೋದರ ವಿನೋದ್‌ ವರ್ಮಾ ಕಾಲುಜಾರಿ ರೈಲಿನಿಂದ ಹೊರಬಿದ್ದು, ಗಾಯಗೊಂಡಿದ್ದ. ಅಲ್ಲದೆ, ರಾಜೇಂದ್ರ ಸಹ ಗಾಯಗೊಂಡಿದ್ದ. ಈ ವೇಳೆ ವಿನೋದ್‌ ರಕ್ಷಣೆಗಾಗಿ ಆ್ಯಂಬುಲೆನ್ಸ್‌ಗೆ ಕರೆ ಮಾಡಲಾಯಿತು. ಆದರೆ, ರೈಲ್ವೆ ಹಳಿಗಳ ಬಳಿ ಆ್ಯಂಬುಲೆನ್ಸ್‌ ಬರಲು ಯಾವುದೇ ಮಾರ್ಗವಿರಲಿಲ್ಲ. ಆಗ ಸಮಯಪ್ರಜ್ಞೆ ಮೆರೆದಿದ್ದ, ಲೋಕೋಪೈಲಟ್‌ ರೈಲನ್ನು ಬರೋಬ್ಬರಿ 1 ಕಿ. ಮೀ.ವರೆಗೆ ಹಿಮ್ಮುಖವಾಗಿ ತಂದು ಗಾಯಾಳುಗಳನ್ನು ಆಸ್ಪತ್ರೆಗೆ ಕರೆತಂದಿದ್ದರು.

Follow Us:
Download App:
  • android
  • ios