ಜೋಧ್‌ಪುರ್[ಜೂ.16]: ಜೋಧ್ ಪುರ್ನ ಸ್ಥಳೀಯ ನ್ಯಾಯಾಲಯ ಅಚ್ಚರಿಯುತ ಘಟನೆಗೆ ಸಾಕ್ಷಿಯಾಗಿದೆ. ಶನಿವಾರದಂದು ನ್ಯಾಯಾಲಯಕ್ಕೆ ಹಸುವೊಂದನ್ನು ಹಾಜರುಪಡಿಸಲಾಗಿದ್ದು, ಬಳಿಕವಷ್ಟೇ ನ್ಯಾಯಾಧೀಶರು ಪ್ರಕರಣವೊಂದರ ತೀರ್ಪು ನೀಡಿದ್ದಾರೆ. ಅರೇ ಇದೇನಿದು...? ಅಂತೀರಾ ಇಲ್ಲಿದೆ ನೋಡಿ ವಿವರ

ಹೌದು ಹಸುವಿನ ನಿಜವಾದ ಮಾಲೀಕನಾರು ಎಂಬ ವಿವಾದ ಏರ್ಪಟ್ಟಿದ್ದು, ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಕುರಿತಾಗಿ ಪ್ರತಿಕ್ರಿಯಿಸಿರುವ ವಕೀಲರು 'ಓಂ ಪ್ರಕಾಶ್ ಹಾಗೂ ಶಾಮ್ ಸಿಂಗ್ ನಡುವೆ ಹಸುವಿನ ಮಾಲೀಕತ್ವಕ್ಕೆ ಸಂಬಂಧಿಸಿದಂತೆ 2018ರಿಂದ ವಿವಾದ ನಡೆಯುತ್ತಿದೆ. ಈ ಕುರಿತಾಗಿ ನ್ಯಾಯಾಧೀಶರು ತೀರ್ಪು ನೀಡುತ್ತಾ, ಎಲ್ಲಾ ಸಾಕ್ಷಿಗಳನ್ನು ಪರಿಗಣಿಸಿ ಹಸು ಓಂ ಪ್ರಕಾಶ್ ಗೆ ಸೇರುತ್ತದೆ ಎಂದು ಆದೇಶಿಸಿದ್ದಾರೆ' ಎಂದಿದ್ದಾರೆ.

ಈ ಪ್ರಕರಣದ ವಿಚಾರಣೆ ವೇಳೆ ಹಸುವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ಮೊದಲು ಮಾಹಾರಾಷ್ಟ್ರದಲ್ಲೂ ಇಂತಹುದೇ ವಿಚಿತ್ರ ಪ್ರಕರಣ ನಡೆದಿದ್ದು, ಮಹಿಳೆಯೊಬ್ಬಳು ಕೋಳಿ ಕೂಗುವುದಕ್ಕೆ ಸಂಬಂಧಿಸಿದಂತೆ ಕೋರ್ಟ್ ಮೆಟ್ಟಿಲೇರಿದ್ದಳು.