ಸುರೇಶ್ ಕುಮಾರ್‌ಗೆ ಡಬಲ್ ಸವಾಲ್ : ಪ್ರಭಾವಿಗಳು ಕಣಕ್ಕೆ

Rajajinagar constituency news
Highlights

ಎಸ್. ಸುರೇಶ್ ಕುಮಾರ್ ಈ ಬಾರಿ ಹ್ಯಾಟ್ರಿಕ್ ಸಾಧಿಸುತ್ತಾರಾ ಅಥವಾ ಅವರ ಸ್ಥಾನವನ್ನು ಬೇರೊ ಬ್ಬರು ಕಸಿಯುತ್ತಾರಾ ಎಂಬು ದು ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಯಾರು ಕಣಕ್ಕಿಳಿಯುತ್ತಾರೆ ಎನ್ನುವುದರ ಮೇಲೆ ನಿರ್ಧರಿತವಾಗಲಿದೆ.

ಬೆಂಗಳೂರು: ಪಟ್ಟಣದ ಹಳೆಯ ಪ್ರದೇಶಗಳಲ್ಲಿ ಒಂದಾಗಿರುವ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ‘ರಾಜ’ನಾಗಿ ಯಾರು ಆಯ್ಕೆಯಾಗುತ್ತಾರೆ ಎಂಬ ಕುತೂಹಲ ಗರಿಗೆದರಿದೆ. ಕ್ಷೇತ್ರ ಪುನರ್‌ವಿಂಗಡಣೆ ನಂತರ ಸತತವಾಗಿ ಗೆಲುವು ಸಾಧಿಸಿಕೊಂಡು ಬಂದಿರುವ, ಸಜ್ಜನ ರಾಜಕಾರಣಿ ಎಂದೇ ಗುರುತಿಸಿಕೊಂಡಿರುವ ಬಿಜೆಪಿಯ ಎಸ್. ಸುರೇಶ್ ಕುಮಾರ್ ಈ ಬಾರಿ ಹ್ಯಾಟ್ರಿಕ್ ಸಾಧಿಸುತ್ತಾರಾ ಅಥವಾ ಅವರ ಸ್ಥಾನವನ್ನು ಬೇರೊ ಬ್ಬರು ಕಸಿಯುತ್ತಾರಾ ಎಂಬು ದು ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಯಾರು ಕಣಕ್ಕಿಳಿಯುತ್ತಾರೆ ಎನ್ನುವುದರ ಮೇಲೆ ನಿರ್ಧರಿತವಾಗಲಿದೆ.

ಕನ್ನಡ ಹೋರಾಟಗಳಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಚಿತ್ರೋದ್ಯಮಿ ಹಾಗೂ ಹಾಲಿ ಕರ್ನಾಟಕ ಚಲನಚಿತ್ರ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಅವರು ಜೆಡಿಎಸ್ ನಿಂದ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಕ್ಷೇತ್ರದಾದ್ಯಂತ ಮತ್ತು ಸ್ಥಳೀಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದಂತೆ ಕಂಡುಬರುತ್ತಿದೆ. ಈ ಕ್ಷೇತ್ರದಲ್ಲಿ ಕನ್ನಡಪರ ವಾತಾವರಣ ಹೆಚ್ಚಿರುವುದರಿಂದ ಹೋರಾಟಗಾರರೆಲ್ಲರೂ ಒಗ್ಗಟ್ಟಿನಿಂದ ಗೋವಿಂದು ಅವರ ಪರವಾಗಿ ಪ್ರಚಾರ ಕೈಗೊಂಡರೆ ಅನುಕೂಲವಾಗಬಹುದು ಎನ್ನಲಾಗುತ್ತಿದೆ. ಕಾಂಗ್ರೆಸ್‌ನಿಂದ ಮಾಜಿ ಮೇಯರ್ ಪದ್ಮಾವತಿ ಮತ್ತು ವಿದ್ಯಾರ್ಥಿ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ ಅವರ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ಇವರಿಬ್ಬರೂ ಪಕ್ಷದ ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗರು. ಪದ್ಮಾವತಿ ಅವರಿಗೆ ಟಿಕೆಟ್ ಲಭಿಸಿದರೆ ಸುರೇಶ್ ಕುಮಾರ್ ಅವರಿಗೆ ಪ್ರಬಲ ಪೈಪೋಟಿ ನೀಡಬಹುದು ಎಂಬ ಮಾತು ಕೇಳಿಬರುತ್ತಿದೆ.

ಈ ಕ್ಷೇತ್ರದಿಂದ ಯುವಕರಿಗೇ ಟಿಕೆಟ್ ನೀಡಬೇಕು ಎಂಬ ನಿಲುವನ್ನು ಪಕ್ಷ ಕೈಗೊಂಡಲ್ಲಿ ಆಗ ಮಂಜುನಾಥ್ ಗೌಡ ಅವರಿಗೆ ಅದೃಷ್ಟ ಖುಲಾಯಿಸಬಹುದು.ಕ್ಷೇತ್ರದಲ್ಲಿ ಒಕ್ಕಲಿಗರೂ ಗಣನೀಯ ಸಂಖ್ಯೆಯಲ್ಲಿರುವುದು ಮಂಜು ನಾಥ್ ಅವರಿಗೆ ಪ್ಲಸ್ ಪಾಯಿಂಟ್ ಆಗಬಹುದು. ಇವರಿಬ್ಬ ರನ್ನು ಬಿಟ್ಟರೆ ಕ್ಷೇತ್ರದಲ್ಲಿ ನಿರ್ಣಾಯಕ ಸಂಖ್ಯೆಯಲ್ಲಿರುವ ಲಿಂಗಾಯತ ಮತದಾರರನ್ನು ಗುರಿಯಾಗಿಸಿಕೊಂಡು ಆ ಸಮುದಾಯದ ಮಾಜಿ ಉಪಮೇಯರ್ ಬಿ.ಎಸ್. ಪುಟ್ಟರಾಜು ಕೂಡ ಲಾಬಿ ನಡೆಸಿದ್ದಾರೆ. ಕೊನೆಯಲ್ಲಿ ಕಳೆದ ಬಾರಿ ಸ್ಪರ್ಧಿಸಿ ಸೋಲುಂಡಿದ್ದ ಮಂಜುಳಾ ನಾಯ್ಡು ಕೂಡ ಮತ್ತೊಮ್ಮೆ ಟಿಕೆಟ್‌ಗಾಗಿ ಪ್ರಯತ್ನ ಆರಂಭಿಸಿದ್ದಾರೆ.

ಸುರೇಶ್‌ಕುಮಾರ್ ಅವರ ಎದುರಾಳಿಯಾಗಿದ್ದ ನೆ.ಲ. ನರೇಂದ್ರಬಾಬು ಅವರು ಬಿಜೆಪಿಗೇ ಸೇರ್ಪಡೆಯಾಗಿದ್ದಾರೆ. ಇದರಿಂದ ಸುರೇಶ್‌ಕುಮಾರ್ ಅವರಿಗೆ ಅನುಕೂಲವೇ ಆಗಬಹುದು. ಅಲ್ಲದೇ, ಕಳೆದ ಬಾರಿ ಕೆಜೆಪಿಯಿಂದ ಹೊರಹೋಗಿದ್ದ ಮತಗಳು ಈ ಬಾರಿ ಮರಳುವುದರಿಂದ ಸುರೇಶ್ ಅವರಿಗೆ ಇನ್ನಷ್ಟು ಬಲ ಬರಬಹುದು. ಅಲ್ಲದೇ, ಈ ಕ್ಷೇತ್ರದಲ್ಲಿ ಉತ್ತರ ಕರ್ನಾಟಕದ ಮತದಾರರ ಸಂಖ್ಯೆ ಗಣನೀಯವಾಗಿದೆ. ಇವರಲ್ಲಿ ಹೆಚ್ಚಿನ ಸಂಖ್ಯೆ ಯಡಿಯೂರಪ್ಪನವರ ಪರ ಇರಬಹುದು ಎಂದುಕೊಂಡರೆ ಅದೂ ಸುರೇಶ್ ಅವರಿಗೆ ವರವಾಗಬಹುದು. ಅಲ್ಲದೇ, ಈ ಭಾಗದಲ್ಲಿ ಮೋದಿ ಪ್ರಭಾವ ಹೆಚ್ಚು ಮತ್ತು ಮುಸ್ಲಿಂ ಮತದಾರರ ಸಂಖ್ಯೆ ಕಡಿಮೆ ಇರುವುದರಿಂದ ಸುರೇಶ್ ಕುಮಾರ್ ಸಾಕಷ್ಟು ನಿರಾಳ. ಜೊತೆಯಲ್ಲಿ ಸುರೇಶ್‌ಕುಮಾರ್ ಅವರ ಸರಳ ನಡೆ ಮತ್ತು ಜನಸಾಮಾನ್ಯರೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ ಎನ್ನುವುದು ಅವರಿಗೆ ಇನ್ನೊಂದು ಪ್ಲಸ್ ಪಾಯಿಂಟ್. ಆದರೆ, ಸುರೇಶ್ ಅವರಿಗೆ ಅವರ ಪಕ್ಷದವರೇ ಕೆಲವರು ಚಿವುಟುತ್ತಿರುವುದು ತುಸು ಮೈನಸ್ ಪಾಯಿಂಟ್ ಎನ್ನಬಹುದು.

ಜೆಡಿಎಸ್‌ನಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಒಕ್ಕಲಿಗ ಸಮುದಾಯದ ಎಸ್.ಟಿ. ಆನಂದ್ ಅವರು ಈ ಬಾರಿ ಕಣಕ್ಕಿಳಿಯಲು ತೀವ್ರ ಆಸಕ್ತರಾಗಿಲ್ಲ. ಮತ್ತೊಬ್ಬ ಮುಖಂಡ ಆರ್.ವಿ. ಹರೀಶ್ ಕೂಡ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ. ಆದರೆ, ಸಾ.ರಾ. ಗೋವಿಂದು ಅಖಾಡಕ್ಕಿಳಿಯಲು ಮುಂದಾಗಿರುವುದರಿಂದ ಅವರ ಹೆಸರೇ ಜೆಡಿಎಸ್‌ನಲ್ಲಿ ಮುಂಚೂಣಿಗೆ ಬಂದಿದೆ. ಗೋವಿಂದು ಕೂಡ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು ಕನ್ನಡ ಮತ್ತು ಚಿತ್ರೋದ್ಯಮದ ನಂಟಿನ ಹಿನ್ನೆಲೆಯಲ್ಲಿ ಸುರೇಶ್‌ಕುಮಾರ್ ಅವರಿಗೆ ಪ್ರಬಲ ಪೈಪೋಟಿ ಒಡ್ಡುವ ಸಾಧ್ಯತೆಯಿದೆ. ಒಂದು ವೇಳೆ ಗೋವಿಂದು ಬದಲಿಗೆ ಬೇರೊಬ್ಬರಿಗೆ ಟಿಕೆಟ್ ನೀಡಿದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯೇ ನೇರ ಹೋರಾಟ ನಡೆಯುವ ನಿರೀಕ್ಷೆಯಿದೆ. ಒಟ್ಟಾರೆ ಈ ಬಾರಿ ಸುರೇಶ್ ಕುಮಾರ್ ಅವರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಪ್ರಬಲ ಅಭ್ಯರ್ಥಿಗಳೇ ಕಣಕ್ಕಿಳಿಯುವ ಸಂಭವ ಕಂಡು ಬರುತ್ತಿರುವುದರಿಂದ ರಾಜಾಜಿನಗರ ಹೋರಾಟ ಭರ್ಜರಿಯಾಗಿಯೆ ಸಾಗುತ್ತಿರುವುದು ಸ್ಪಷ್ಟವಾಗಿದೆ.

- ವಿಜಯ್ ಮಲಗಿಹಾಳ

 

loader